ಸಾರಾಂಶ
ಹೈದರಾಬಾದ್‌ನಲ್ಲಿ ಇತ್ತೀಚೆಗೆ ನಡೆದ ‘ಕಾಂತಾರ 1’ ಚಿತ್ರದ ಪ್ರೀ ರಿಲೀಸ್ ಕಾರ್ಯಕ್ರಮದ ವೇದಿಕೆಯಲ್ಲಿ ಕನ್ನಡದಲ್ಲಿ ಮಾತನಾಡಿದ ನಟ, ನಿರ್ದೇಶಕ ರಿಷಬ್ ಶೆಟ್ಟಿ ವಿರುದ್ಧ ತೆಲುಗು ಪ್ರೇಕ್ಷಕರು ಸೋಷಿಯಲ್ ಮೀಡಿಯಾದಲ್ಲಿ ಸಿಟ್ಟು ವ್ಯಕ್ತಪಡಿಸುತ್ತಿದ್ದಾರೆ
ಬೆಂಗಳೂರು : ಹೈದರಾಬಾದ್‌ನಲ್ಲಿ ಇತ್ತೀಚೆಗೆ ನಡೆದ ‘ಕಾಂತಾರ 1’ ಚಿತ್ರದ ಪ್ರೀ ರಿಲೀಸ್ ಕಾರ್ಯಕ್ರಮದ ವೇದಿಕೆಯಲ್ಲಿ ಕನ್ನಡದಲ್ಲಿ ಮಾತನಾಡಿದ ನಟ, ನಿರ್ದೇಶಕ ರಿಷಬ್ ಶೆಟ್ಟಿ ವಿರುದ್ಧ ತೆಲುಗು ಪ್ರೇಕ್ಷಕರು ಸೋಷಿಯಲ್ ಮೀಡಿಯಾದಲ್ಲಿ ಸಿಟ್ಟು ವ್ಯಕ್ತಪಡಿಸುತ್ತಿದ್ದಾರೆ. ಜೊತೆಗೆ ‘ಕಾಂತಾರ 1’ ಚಿತ್ರ ಬಹಿಷ್ಕರಿಸಲು ಕರೆ ನೀಡಿದ್ದು, #BoycottKantaraChapter1, #RespectTelugu ಎನ್ನುವ ಹ್ಯಾಷ್ ಟ್ಯಾಗ್‌ಗಳು ಸಾಮಾಜಿಕ ಜಾಲತಾಣಗಳಲ್ಲಿ ಟ್ರೆಂಡ್ ಆಗುತ್ತಿವೆ.
ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಯಾಗಿ ಆಗಮಿಸಿದ್ದ ಜೂ.ಎನ್‌ಟಿಆರ್ ಕೂಡ ಟ್ರೋಲ್‌ಗೆ ತುತ್ತಾಗಿದ್ದಾರೆ. ಸಾಮಾಜಿಕ ಮಾಧ್ಯಮಗಳು ‘ರಿಷಬ್ ಶೆಟ್ಟಿ ಮಾಡಿದ್ದು ಸರಿನಾ? ಜೂ.ಎನ್‌ಟಿಆರ್ ಮೌನವಾಗಿದ್ದು ತಪ್ಪಾ?’ ಎನ್ನುವಂತೆ ಸುದ್ದಿ ಮಾಡಿವೆ. ಹೈದರಾಬಾದ್‌ನಲ್ಲಿ ನಡೆದ ಕಾಂತಾರ-1 ಪ್ರೀ ರಿಲೀಸ್ ಕಾರ್ಯಕ್ರಮದಲ್ಲಿ ರಿಷಬ್ ಶೆಟ್ಟಿ ಬಹುತೇಕ ಕನ್ನಡದಲ್ಲಿ ಮಾತನಾಡಿದ್ದೇ ವಿರೋಧಕ್ಕೆ ಕಾರಣವಾಗಿದೆ.
ಕಾಂತಾರ ವಿವಾದಕ್ಕೆಪವನ್, ಅಲ್ಲು ಫ್ಯಾನ್ಸ್
ಈ ವಿವಾದಕ್ಕೆ ನಟ ಹಾಗೂ ಉಪಮುಖ್ಯಮಂತ್ರಿ ಪವನ್ ಕಲ್ಯಾಣ್ ಹಾಗೂ ಅಲ್ಲು ಅರ್ಜುನ್ ಅಭಿಮಾನಿಗಳು ಕೂಡ ಜೊತೆಯಾಗಿದ್ದಾರೆ. ‘ಕನ್ನಡ ಚಿತ್ರರಂಗ, ಕನ್ನಡ ಭಾಷೆ ಮತ್ತು ಕನ್ನಡ ಪ್ರೇಕ್ಷಕರ ಹೆಸರಿನಲ್ಲಿ ನಮ್ಮ ತೆಲುಗು ಚಿತ್ರಗಳಾದ ಪುಷ್ಪಾ 2, ಹರಿಹರ ವೀರಮಲ್ಲು ಚಿತ್ರಗಳ ಬ್ಯಾನರ್‌ಗಳನ್ನು ಹರಿದು ಹಾಕಿದ್ದರು. ಓಜಿ ಚಿತ್ರದ ಬ್ಯಾನರ್ ಕೂಡ ಹರಿದಿದ್ದು, ಪ್ರದರ್ಶನಗಳಿಗೆ ಅಡ್ಡಿಪಡಿಸಿದ್ದಾರೆ. ಕರ್ನಾಟಕದಲ್ಲಿ ತೆಲುಗು ಚಿತ್ರಗಳ ಪ್ರದರ್ಶನಕ್ಕೆ ಅಡ್ಡಿಪಡಿಸುತ್ತಿರುವಾಗ ಅದೇ ಕರ್ನಾಟಕದವರ ಚಿತ್ರವನ್ನು ನಾವು ಯಾಕೆ ಸ್ವಾಗತಿಸಬೇಕು’ ಎನ್ನುವ ಮೂಲಕ ಕಾಂತಾರ 1 ಚಿತ್ರಕ್ಕೆ ವಿರೋಧ ವ್ಯಕ್ತಪಡಿಸಿದ್ದಾರೆ.