71 ವರ್ಷಗಳ ವೃತ್ತಿ ಪಯಣದಲ್ಲಿ 700ಕ್ಕೂ ಹೆಚ್ಚು ಚಿತ್ರಗಳಲ್ಲಿ ನಟಿಸಿದ್ದ ಮೈಸೂರು ಶ್ರೀಕಂಠ ಉಮೇಶ . ಸದಾ ಹಸನ್ಮುಖಿ, ಸಜ್ಜನ ಕಲಾವಿದ, ನಿರುಪದ್ರವಿ, ಎಲ್ಲರ ಪ್ರೀತಿಯ ಉಮೇಶಣ್ಣ ಬದುಕಿನ ರಂಗದಿಂದ ಇಳಿದು ಹೋಗಿದ್ದಾರೆ. ಅವರಿಗೆ ಅಕ್ಷರ ನಮನ.

 ಸಿನಿವಾರ್ತೆ

‘ನಾನು ಹುಟ್ಟಿದ್ದು ಭಾನುವಾರ, ನನ್ನ ಮಗ ಚಂದ್ರಶೇಖರ ಸತ್ತಿದ್ದು ಕೂಡ ಭಾನುವಾರವೇ’

- ಹೀಗೆ ತಮ್ಮ ಹುಟ್ಟು ಮತ್ತು ಮಗನ ಮರಣ ಉಂಟಾಗಿದ್ದ ಭಾನುವಾರದ ನಂಟಿನ ಕುರಿತು ಹಿಂದೊಮ್ಮೆ ಹೇಳಿಕೊಂಡಿದ್ದ ಹಿರಿಯ ನಟ ಎಂ.ಎಸ್‌. ಉಮೇಶ್‌ ಅವರು ಈಗ ಭಾನುವಾರವೇ ಬಾರದ ಲೋಕಕ್ಕೆ ಹೊರಟಿದ್ದಾರೆ.

ಮೈಸೂರು ಶ್ರೀಕಂಠ ಉಮೇಶ್‌ ಅಥವಾ ಎಂ.ಎಸ್. ಉಮೇಶ್‌ ಹುಟ್ಟಿದ್ದು 1945ರಲ್ಲಿ. ಹುಟ್ಟೂರು ಮೈಸೂರು. ಉಮೇಶಣ್ಣ ಬಣ್ಣ ಹಚ್ಚಿದ್ದು ಎಷ್ಟನೇ ವಯಸ್ಸಿಗೆ ಎನ್ನುವ ನಿಖರ ಮಾಹಿತಿ ಇಲ್ಲದಿದ್ದರೂ 1949ರಲ್ಲಿ ಅ.ನ. ಕೃಷ್ಣರಾಯರು ಬರೆದ ‘ಶ್ರೀ ಜಗಜ್ಯೋತಿ ಬಸವೇಶ್ವರ ನಾಟಕದಲ್ಲಿ ಬಿಜ್ಜಳ ಪಾತ್ರದ ಮೂಲಕ ಬಣ್ಣದ ನಂಟಿಗೆ ಬಂದೆ’ ಎಂದು ಸ್ವತಃ ಉಮೇಶಣ್ಣ ಅವರೇ ಹೇಳುತ್ತಾರೆ.

ಬಣ್ಣ ಹಾಕಿಸಿದ್ದು ಮಾ.ಹಿರಣ್ಣಯ್ಯ ತಂದೆ

ಅವರಿಗೆ ಮೊದಲು ಬಣ್ಣ ಹಾಕಿಸಿದ್ದು ಮಾ.ಹಿರಣ್ಣಯ್ಯ ಅವರ ತಂದೆ ಕೆ. ಹಿರಣ್ಣಯ್ಯ. ಆಗ ತಿಂಗಳಿಗೆ 5 ರು. ಕೂಲಿಗೆ ದುಡಿಯುತ್ತಿದ್ದ ಉಮೇಶ್‌, ಮುಂದೆ ಗುಬ್ಬಿ ವೀರಣ್ಣ ಕಂಪನಿಗೆ ಬಂದು10 ರುಪಾಯಿ ದುಡಿಯೋ ಕಲಾವಿದ ಎನಿಸಿಕೊಂಡರು. ರಂಗಭೂಮಿಯಿಂದ ಚಿತ್ರರಂಗಕ್ಕೆ ಬರಲು ಕಾರಣರಾಗಿದ್ದು ಪುಟ್ಟಣ್ಣ ಕಣಗಾಲ್‌, ಬಿ.ಆರ್‌. ಪಂತುಲು, ಎಂ.ವಿ. ರಾಜಮ್ಮ. ‘ಚಂದ್ರಹಾಸ’ ನಾಟಕದಲ್ಲಿ ಉಮೇಶ್‌ ಅವರ ನಟನೆ ಮೆಚ್ಚಿ ಬಿ.ಆರ್‌. ಪಂತಲು ಅವರೇ ಆಗ ಮದ್ರಾಸಿಗೆ ಕರೆದುಕೊಂಡು ಹೋಗಿ ‘ಮಕ್ಕಳ ರಾಜ್ಯ’ ಚಿತ್ರಕ್ಕೆ ನಾಯಕನ್ನಾಗಿಸಿದರು.

ಪ್ರಥಮ ಚಿತ್ರಕ್ಕೆ 45 ರು. ಸಂಭಾವನೆ

ಉಮೇಶಣ್ಣ ತಮ್ಮ ಮೊದಲ ನಟನೆಯ ‘ಮಕ್ಕಳ ರಾಜ್ಯ’ ಚಿತ್ರಕ್ಕೆ 45 ರು. ಸಂಭಾವನೆ ತೆಗೆದುಕೊಂಡವರು. ಈ ಹಣದಲ್ಲಿ ಒಂದು ಹಾರ್ಮೋನಿಯಂ ಕೊಂಡರು. ಯಾವಾಗ ಹಾರ್ಮೋನಿಯಂ ಕೊಂಡರೋ ಹಾಡುವುದನ್ನೂ ಶುರು ಮಾಡಿದರು. ‘ನನ್ನ ಗಾಯನ ಹೇಗಿತ್ತೋ ನನಗೆ ತಿಳಿಯದು. ಆದರೆ, ನಾನು ಹಾಡುವುದನ್ನು ನೋಡುವ ಜನ ಮಾತ್ರ ಚಪ್ಪಾಳೆ ತಟ್ಟುತ್ತಿದ್ದರು. ನಾನೂ ಕೂಡ ಖುಷಿಯಿಂದ ಮತ್ತಷ್ಟು ಹಾಡುತ್ತಿದ್ದೆ. ಹಾರ್ಮೋನಿಯಂನಿಂದ ಗಾಯಕನ ಪಟ್ಟ ದಕ್ಕಿತು’ ಎಂದಿದ್ದರು.

700ಕ್ಕೂ ಹೆಚ್ಚು ಚಿತ್ರಗಳಲ್ಲಿ ನಟನೆ

‘ಮಕ್ಕಳ ರಾಜ್ಯ’ ಚಿತ್ರದಿಂದ ಇಲ್ಲಿಯವರೆಗೂ 700ಕ್ಕೂ ಹೆಚ್ಚು ಚಿತ್ರಗಳಲ್ಲಿ ನಟಿಸಿದ್ದಾರೆ. ‘ಕಥಾಸಂಗಮ’, ‘ತಪ್ಪಿದ ತಾಳ’, ‘ಗುರು ಶಿಷ್ಯರು’, ‘ಅನುಪಮಾ’, ‘ಕಾಮನ ಬಿಲ್ಲು’, ‘ಶ್ರುತಿ ಸೇರಿದಾಗ’, ‘ಗೋಲ್‌ಮಾಲ್‌ ರಾಧಾಕೃಷ್ಣ’, ‘ವೆಂಕಟ ಇನ್‌ ಸಂಕಟ’, ‘ಗಜಪತಿ ಗರ್ವಭಂಗ’, ‘ಡೇರ್ ಡೆವಿಲ್ ಮುಸ್ತಾಫ’ ಮುಂತಾದವು ಅವರ ನಟನೆಯ ಜನಪ್ರಿಯ ಚಿತ್ರಗಳು. ನ.28ರಂದು ತೆರೆ ಕಂಡ ದೀಕ್ಷಿತ್‌ ಶೆಟ್ಟಿ ಅಭಿನಯದ ‘ಬ್ಯಾಂಕ್‌ ಆಫ್‌ ಭಾಗ್ಯಲಕ್ಷ್ಮಿ’ ಚಿತ್ರದಲ್ಲೂ ಉಮೇಶಣ್ಣ ಅವರ ಚಿಕ್ಕದೊಂದು ಪಾತ್ರವಿದೆ.

ಗಮನ ಸೆಳೆದಿದ್ದು

‘ಗೋಲ್‌ಮಾಲ್‌ ರಾಧಾಕೃಷ್ಣ’ ಚಿತ್ರದ ಸೀತಾಪತಿ ಪಾತ್ರದಲ್ಲಿ ‘ಅಪಾರ್ಥ ಮಾಡ್ಕೊಂಡುಬಿಟ್ರೋ ಏನೋ …’ ಎಂದು ಗೋಳಾಡುವ ಅವರ ನಟನೆ ದೊಡ್ಡ ಮಟ್ಟದಲ್ಲಿ ಜನಪ್ರಿಯತೆ ತಂದುಕೊಟ್ಟಿತು. ‘ಶ್ರುತಿ ಸೇರಿದಾಗ’ ಚಿತ್ರದ ‘ಬೊಂಬೆಯಾಟವಯ್ಯಾ’ ಎಂಬ ಹಾಡು ಅವರಿಗೆ ಬಹಳಷ್ಟು ಹೆಸರು ತಂದಿತ್ತು.

ಸನ್ಮಾನದ ಶಾಲು, ಮೈ ಮುಚ್ಚುವ ಉಡುಗೆ!

ಉಮೇಶಣ್ಣ ಧರಿಸುತ್ತಿದ್ದ ಬಟ್ಟೆಗಳು ಮಿಣಮಿಣ ಮಿಂಚುತ್ತಿರುತ್ತವೆ. ‘ನಾನು ಧರಿಸುವ ಶರ್ಟುಗಳು ಸನ್ಮಾನ ಕಾರ್ಯಕ್ರಮಗಳಲ್ಲಿ ಹಾಕಿದ ಶಾಲುಗಳಿಂದ ಹೊಲಿಸಿಕೊಂಡಿದ್ದು. ಈ ಪ್ಯಾಂಟು ಅಷ್ಟೇ. ಅದಕ್ಕೆ ನನ್ನ ಬಟ್ಟೆ ಯಾವಾಗಲೂ ಮಿಂಚುತ್ತಿರುತ್ತವೆ. ನನ್ನ ಮೈ ಮುಚ್ಚುವ ಇಂಥ ಶಾಲುಗಳು ನಮ್ಮ ಮನೆಯಲ್ಲಿ ಸಾಕಷ್ಟಿವೆ. ಅಭಿಮಾನಿಗಳು, ಹಿರಿಯರು ಕರೆದು ಪ್ರೀತಿಯಿಂದ ಕೊಟ್ಟದನ್ನು ಬೀರುವಿನಲ್ಲೋ, ಅಟ್ಟದ ಮೇಲೋ ಯಾಕಿಡ್ಬೇಕು!? ಹೀಗೆ ಸದಾ ಮೈ ಮೇಲಿರಲಿ’ ಎಂದು ತಮ್ಮ ಉಡುಗೆಗಳ ಬಗ್ಗೆ ಹೆಮ್ಮೆಯಿಂದ ಹೇಳಿಕೊಳ್ಳುತ್ತಿದ್ದರು ಉಮೇಶಣ್ಣ.

ಆಂಜನೇಯ ಸ್ವಾಮಿ ಮುಂದೆ ಮದುವೆ!

ಅವರು ಮದುವೆ ಆಗಿದ್ದು ತಮ್ಮೊಂದಿಗೆ ನಾಟಕ ಕಂಪನಿಗಳಲ್ಲಿ ಕೆಲಸ ಮಾಡುತ್ತಿದ್ದ ಸುಧಾ ಎಂಬುವವರನ್ನು. ಸುಧಾ ಹಾಗೂ ಉಮೇಶ್‌ ಅವರು ಮಂತ್ರ, ಶಾಸ್ತ್ರ, ಪುರೋಹಿತರು ಇಲ್ಲದೆ ಆಂಜನೇಯ ಸ್ವಾಮಿ ದೇವಸ್ಥಾನದಲ್ಲಿ ಹಾರ ಬದಲಾಯಿಸಿಕೊಳ್ಳುವ ಮೂಲಕ ಮದುವೆ ಆದವರು.

ಕತೆಗಾರ ಉಮೇಶಣ್ಣ

ಉಮೇಶಣ್ಣ ನಟರಾಗಿ ಮಾತ್ರವಲ್ಲ, ಬರಹಗಾರರಾಗಿಯೂ ಗುರುತಿಸಿಕೊಂಡಿದ್ದಾರೆ. ಆಗಿನ ಕಾಲಕ್ಕೆ 2ನೇ ತರಗತಿ ಓದಿದ್ದ ಉಮೇಶಣ್ಣ ಸಾಹಿತ್ಯಪ್ರಿಯರಾಗಿದ್ದರು. ಆ ಸ್ಫೂರ್ತಿಯಿಂದಲೇ ಬರೆಯುವುದನ್ನೂ ಶುರು ಮಾಡಿದರು. 40ಕ್ಕೂ ಹೆಚ್ಚು ಕತೆಗಳನ್ನು ಬರೆದಿದ್ದಾರೆ.

ಬಣ್ಣದ ಲೋಕ

ಕಥಾಸಂಗಮ ಚಿತ್ರದಲ್ಲಿನ ಅಭಿನಯಕ್ಕಾಗಿ ಅತ್ಯುತ್ತಮ ಪೋಷಕ ನಟ ವಿಭಾಗದಲ್ಲಿ ರಾಜ್ಯ ಚಲನಚಿತ್ರ ಪ್ರಶಸ್ತಿ, ರಾಜ್ಯೋತ್ಸವ ಪ್ರಶಸ್ತಿಯನ್ನು ಪಡೆದುಕೊಂಡಿದ್ದಾರೆ. 15 ವರ್ಷಗಳ ಹಿಂದೆ ‘ಬಣ್ಣದ ಘಂಟೆ’ ಪುಸ್ತಕ ಬರೆದು ರಂಗಭೂಮಿ ಹಾಗೂ ತಮ್ಮ ಜೀವನ ಚರಿತ್ರೆಯ ಅನುಭವಗಳನ್ನು ದಾಖಲಿಸಿರುವ ಉಮೇಶಣ್ಣ ಅವರಿಗೆ ಅನ್ನ, ಜೀವನ, ಐಡೆಂಟಿಟಿ ಎಲ್ಲವೂ ಕೊಟ್ಟಿದ್ದು ಚಿತ್ರರಂಗ. ಹೀಗಾಗಿಯೇ ಅವರು ತಮ್ಮ ಮನೆಗೆ ‘ಬಣ್ಣದ ಲೋಕ’ ಎಂದು ಹೆಸರಿಟ್ಟಿದ್ದಾರೆ.

ಈಗ ಆ ‘ಬಣ್ಣದ ಲೋಕ’ ತೊರೆದಿರುವ ಉಮೇಶಣ್ಣ ‘ಹಾವಿನ ಹೆಡೆ’ ಚಿತ್ರದಲ್ಲಿ ಡಾ. ರಾಜ್‌ಕುಮಾರ್‌ ಮುಂದೆ ನಿಂತು ‘ಹೌದು ನಾನೊಂಥರ ಸರ್ವಾಂತರ್ಯಾಮಿ. ಎಲ್ಲಿ, ಯಾವಾಗ, ಹೇಗೆ ಬೇಕಾದರೂ ಪ್ರತ್ಯಕ್ಷನಾಗುತ್ತೇನೆ’ ಎನ್ನುವ ಸಂಭಾಷಣೆ ಹೇಳುತ್ತಾರೆ. ಅದೇ ಥರ ಕಲಾವಿದರಾಗಿ ಸರ್ವಾಂತರ್ಯಾಮಿ ಆಗಿರುವ ಉಮೇಶಣ್ಣ ಪ್ರೇಕ್ಷಕರ ಮನಸಲ್ಲಿ ಬಹಳ ಕಾಲ ಉಳಿಯಲಿದ್ದಾರೆ.