ಕನ್ನಡ ಚಿತ್ರರಂಗದ ಹಿರಿಯ ಹಾಸ್ಯನಟ ಎಂ.ಎಸ್. ಉಮೇಶ್ (80) ಅವರು ಭಾನುವಾರ ನಿಧನರಾಗಿದ್ದಾರೆ. ಪತ್ನಿ ಸುಧಾ, ಪುತ್ರಿ ಜಯಲಕ್ಷ್ಮೀ ಅವರನ್ನು ಅಗಲಿದ್ದಾರೆ. ಉಮೇಶ್‌ ಅವರ ಪುತ್ರ ಹಿಂದೆಯೇ ತೀರಿಕೊಂಡಿದ್ದರು. ಸಂಜೆ ಬನಶಂಕರಿ ಚಿತಾಗಾರದಲ್ಲಿ ಅವರ ಅಂತ್ಯಸಂಸ್ಕಾರ ನೆರವೇರಿತು. 

ಬೆಂಗಳೂರು : ಕನ್ನಡ ಚಿತ್ರರಂಗದ ಹಿರಿಯ ಹಾಸ್ಯನಟ ಎಂ.ಎಸ್. ಉಮೇಶ್ (80) ಅವರು ಭಾನುವಾರ ನಿಧನರಾಗಿದ್ದಾರೆ. ಪತ್ನಿ ಸುಧಾ, ಪುತ್ರಿ ಜಯಲಕ್ಷ್ಮೀ ಅವರನ್ನು ಅಗಲಿದ್ದಾರೆ. ಉಮೇಶ್‌ ಅವರ ಪುತ್ರ ಹಿಂದೆಯೇ ತೀರಿಕೊಂಡಿದ್ದರು. ಸಂಜೆ ಬನಶಂಕರಿ ಚಿತಾಗಾರದಲ್ಲಿ ಅವರ ಅಂತ್ಯಸಂಸ್ಕಾರ ನೆರವೇರಿತು. ಬ್ರಾಹ್ಮಣ ಸಂಪ್ರದಾಯದಂತೆ ಅವರ ಸಹೋದರ ರಮೇಶ್‌ ಅಂತಿಮ ವಿಧಿವಿಧಾನ ನೆರವೇರಿಸಿದರು.

ಕಾಲು ಜಾರಿ ಬಿದ್ದು ಆಸ್ಪತ್ರೆಗೆ ದಾಖಲಾಗಿದ್ದರು

ಕಳೆದ ಅ.10ರಂದು ಉಮೇಶ್ ಅವರು ಜೆ.ಪಿ.ನಗರದಲ್ಲಿದ್ದ ತಮ್ಮ ಮನೆಯಲ್ಲಿ ಕಾಲು ಜಾರಿ ಬಿದ್ದು ಆಸ್ಪತ್ರೆಗೆ ದಾಖಲಾಗಿದ್ದರು. ಪರೀಕ್ಷೆ ವೇಳೆ ಅವರಿಗೆ 4ನೇ ಹಂತದ ಯಕೃತ್ತಿನ ಕ್ಯಾನ್ಸರ್ ಇರುವುದು ಪತ್ತೆಯಾಗಿತ್ತು. ಹೆಚ್ಚಿನ ಪರೀಕ್ಷೆಗಳಿಗೆ ಒಳಪಡಿಸಿದ್ದ ವೈದ್ಯರು ರೋಗವನ್ನು ಖಚಿತಪಡಿಸಿ ಕಿಮೋಥೆರಪಿ ಹಾಗೂ ಇಮ್ಯೂನೋಥೆರಪಿ ಮೂಲಕ ಚೇತರಿಸಿಕೊಳ್ಳುವ ಸಾಧ್ಯತೆ ಇದೆ ಎಂದು ತಿಳಿಸಿದ್ದರು.

ತಿಂಗಳಿಗೂ ಹೆಚ್ಚು ಕಾಲ ಆಸ್ಪತ್ರೆಯಲ್ಲಿದ್ದ ಉಮೇಶ್ ಅವರು ಭಾನುವಾರ ಬೆಳಗ್ಗೆ 8.20ರ ವೇಳೆ ನಿಧನರಾದರು ಎಂದು ಅವರ ಪುತ್ರಿ ಮಾಧ್ಯಮಗಳಿಗೆ ತಿಳಿಸಿದರು.

ರವೀಂದ್ರ ಕಲಾಕ್ಷೇತ್ರದ ಸಂಸ ಬಯಲು ರಂಗ ಮಂದಿರದಲ್ಲಿ ಅಂತಿಮ ದರ್ಶನ ಪಡೆದ ಸಿಎಂ ಸಿದ್ದರಾಮಯ್ಯ ಮಾತನಾಡಿ, ಮೈಸೂರು ಮೂಲದ ಉಮೇಶ್‌ ಅವರು ಕ್ಯಾನ್ಸರ್ ಕಾಯಿಲೆಗೆ ತುತ್ತಾಗಿದ್ದರು. ಕೋರಿಕೆ ಮೇರೆಗೆ ಉಚಿತ ಕ್ಯಾನ್ಸರ್ ಚಿಕಿತ್ಸೆಗೆ ಸರ್ಕಾರದಿಂದ ನೆರವು ನೀಡಲಾಗಿತ್ತು. ಕನ್ನಡ ಚಿತ್ರರಂಗದ ಮೇರುನಟನನ್ನು ಕಳೆದುಕೊಂಡಿರುವುದು ಅತೀವ ದುಃಖ ತಂದಿದೆ. ಅವರ ಆತ್ಮಕ್ಕೆ ಶಾಂತಿ ದೊರೆಯಲಿ ಹಾಗೂ ಅವರ ಕುಟುಂಬ ವರ್ಗ ಮತ್ತು ಅಭಿಮಾನಿಗಳಿಗೆ ಅವರ ಅಗಲಿಕೆಯ ನೋವು ಭರಿಸುವ ಶಕ್ತಿ ದೊರಕಲಿ ಎಂದರು.

ಅಗಲಿಕೆ ಬೇಸರ

ಡಿಸಿಎಂ ಡಿ.ಕೆ.ಶಿವಕುಮಾರ್‌ ಮಾತನಾಡಿ, ಉಮೇಶ್ ಅವರು ನನಗೆ ವೈಯಕ್ತಿಕವಾಗಿ ಹೆಚ್ಚು ಪರಿಚಯವಿಲ್ಲ. ಆದರೆ ಕಲಾವಿದರಾಗಿ ಅವರ ಅಭಿನಯ ಆನಂದಿಸಿದ್ದೇನೆ. ಅವರ ಅಗಲಿಕೆ ಬೇಸರ ತಂದಿದ್ದು, ಚಿತ್ರರಂಗಕ್ಕೆ ನಷ್ಟ ಎಂದರು.

ಸಚಿವ ಬೈರತಿ ಸುರೇಶ್‌, ಕರ್ನಾಟಕ ಚಲನಚಿತ್ರ ಅಕಾಡೆಮಿ ಅಧ್ಯಕ್ಷ ಸಾಧುಕೋಕಿಲ, ನಟ ವೈಜನಾಥ್ ಬಿರಾದರ್, ಸುಂದರ್‌ ರಾಜ್‌, ಹಿರಿಯ ನಟಿ ಗಿರಿಜಾ ಲೋಕೇಶ್‌, ಶ್ರುತಿ, ನಿರ್ದೇಶಕ ಓಂ ಸಾಯಿಪ್ರಕಾಶ್‌, ನಾಟಕ ಅಕಾಡೆಮಿ ಅಧ್ಯಕ್ಷ ಕೆ.ವಿ.ನಾಗರಾಜ್‌ ಸೇರಿ ಹಲವರು ಅಂತಿಮ ದರ್ಶನ ಪಡೆದು ಉಮೇಶ್‌ ಜೊತೆಗಿನ ಒಡನಾಟ ಸ್ಮರಿಸಿ ಕಂಬನಿ ಮಿಡಿದರು.

ಉಮೇಶ್ ಅವರು 1960ರ ದಶಕದಿಂದಲೂ ಕನ್ನಡ ಚಿತ್ರರಂಗದಲ್ಲಿ ಸಕ್ರಿಯರಾಗಿದ್ದರು. ಇತ್ತೀಚಿನ ದಿನಗಳ ತನಕವೂ ಅವರು ಸಿನಿಮಾಗಳಲ್ಲಿ ನಟಿಸುತ್ತಿದ್ದರು. ಉಮೇಶ್ ಅವರು ಅಭಿನಯಿಸಿದ್ದ ‘ಕಮಲ್ ಶ್ರೀದೇವಿ’, ‘ಐ ಆ್ಯಮ್ ಗಾಡ್’ ಸಿನಿಮಾಗಳು ಇತ್ತೀಚೆಗೆ ಬಿಡುಗಡೆ ಆಗಿದ್ದವು. ಪೋಷಕ ಪಾತ್ರಗಳು ಹಾಗೂ ಹಾಸ್ಯ ಪಾತ್ರಗಳ ಮೂಲಕ ಜನಪ್ರಿಯತೆ ಪಡೆದಿದ್ದರು.

350ಕ್ಕೂ ಹೆಚ್ಚು ಸಿನಿಮಾಗಳಲ್ಲಿ ಉಮೇಶ್ ಅವರು ಅಭಿನಯಿಸಿದ್ದಾರೆ. 1945ರ ಏಪ್ರಿಲ್‌ 24ರಂದು ಮೈಸೂರಿನಲ್ಲಿ ಜನಿಸಿದ ಅವರು 1960ರಲ್ಲಿ ಬಿ.ಆರ್‌. ಪಂಥುಲು ನಿರ್ದೇಶನದ ‘ಮಕ್ಕಳ ರಾಜ್ಯ’ ಸಿನಿಮಾ ಮೂಲಕ ಚಿತ್ರರಂಗಕ್ಕೆ ಪ್ರವೇಶಿಸಿದರು. ಬಳಿಕ ಹಲವು ಸಿನಿಮಾಗಳಲ್ಲಿ ನಟಿಸುವ ಅವಕಾಶ ಪಡೆದುಕೊಂಡರು. ‘ನಾಗರ ಹೊಳೆ’, ‘ಗುರು ಶಿಷ್ಯರು’, ‘ಅನುಪಮಾ’, ‘ಕಾಮನ ಬಿಲ್ಲು’, ‘ಅಪೂರ್ವ ಸಂಗಮ’, ‘ಶ್ರುತಿ ಸೇರಿದಾಗ’, ‘ಹಾಲು ಸಕ್ಕರೆ’, ‘ಗೋಲ್​ಮಾಲ್ ರಾಧಾಕೃಷ್ಣ’, ‘ಮಲಯ ಮಾರುತ’, ‘ಗಜಪತಿ ಗರ್ಭಭಂಗ’ ಇವು ಉಮೇಶ್ ನಟನೆಯ ಪ್ರಮುಖ ಸಿನಿಮಾಗಳು.