ಕನ್ನಡ ಸಿನಿಮಾಗಳಿಂದ ಸೋನು ಈಗ ಬ್ಯಾನು

| N/A | Published : May 06 2025, 01:50 AM IST / Updated: May 06 2025, 05:27 AM IST

ಸಾರಾಂಶ

 ಇನ್ನು ಮುಂದೆ ಯಾವ ಕನ್ನಡ ಚಿತ್ರಕ್ಕೂ ಸೋನು ನಿಗಮ್‌ರಿಂದ ಹಾಡಿಸುವುದಿಲ್ಲ, ಕನ್ನಡ ಚಿತ್ರರಂಗದಿಂದ ಅವರನ್ನು ದೂರ ಇಡಲಾಗುವುದು’ ಎಂದು ಕನ್ನಡ ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷ ಎಂ.ನರಸಿಂಹಲು ಹೇಳಿದ್ದಾರೆ.

ಬೆಂಗಳೂರು : ಕನ್ನಡಿಗರ ವಿರುದ್ಧ ಅವಹೇಳನಕಾರಿಯಾಗಿ ಮಾತನಾಡಿದ್ದ ಗಾಯಕ ಸೋನು ನಿಗಮ್‌ ವಿರುದ್ಧ ಅಸಹಕಾರ ತೋರುವುದಾಗಿ ಕನ್ನಡ ಚಲನಚಿತ್ರ ವಾಣಿಜ್ಯ ಮಂಡಳಿ ಘೋಷಿಸಿದೆ. ‘ಇನ್ನು ಮುಂದೆ ಯಾವ ಕನ್ನಡ ಚಿತ್ರಕ್ಕೂ ಸೋನು ನಿಗಮ್‌ರಿಂದ ಹಾಡಿಸುವುದಿಲ್ಲ, ಕನ್ನಡ ಚಿತ್ರರಂಗದಿಂದ ಅವರನ್ನು ದೂರ ಇಡಲಾಗುವುದು’ ಎಂದು ಕನ್ನಡ ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷ ಎಂ.ನರಸಿಂಹಲು ಹೇಳಿದ್ದಾರೆ.

ಸೋನು ನಿಗಮ್‌ ನಡೆ ಕುರಿತು ತೀರ್ಮಾನ ತೆಗೆದುಕೊಳ್ಳಲು ವಾಣಿಜ್ಯ ಮಂಡಳಿಯು ನಿರ್ಮಾಪಕರ ಸಂಘ, ನಿರ್ದೇಶಕರ ಸಂಘ ಹಾಗೂ ಸಂಗೀತ ನಿರ್ದೇಶಕರ ಸಂಘವನ್ನು ಚರ್ಚೆಗೆ ಕರೆದಿತ್ತು. ಚರ್ಚೆ ಬಳಿಕ ಮಾತನಾಡಿದ ನರಸಿಂಹಲು ಅವರು, ‘ಸೋನು ನಿಗಮ್‌ ಕನ್ನಡಿಗರ ಬಗ್ಗೆ ತುಂಬಾ ಕೇವಲವಾಗಿ ಮಾತನಾಡಿದ್ದಾರೆ. 

ತಾನು ಮಾಡಿದ ತಪ್ಪಿಗೆ ಕನ್ನಡಿಗರ ಕ್ಷಮೆ ಕೇಳುತ್ತಾರೆಂದು ನಾವು ಇಷ್ಟು ದಿನ ಕಾದಿದ್ದೆವು. ಆದರೆ, ಅವರು ಕ್ಷಮೆ ಕೇಳಿಲ್ಲ. ಹೀಗಾಗಿ ಈ ಕ್ಷಣದಿಂದಲೇ ಜಾರಿಗೆ ಬರುವಂತೆ ಕನ್ನಡದ ಚಿತ್ರಗಳಲ್ಲಿ ಸೋನು ನಿಗಮ್‌ ಅವರಿಂದ ಹಾಡುಗಳನ್ನು ಹಾಡಿಸದೆ ಇರುವ ಮೂಲಕ ಅವರನ್ನು ಕನ್ನಡ ಚಿತ್ರರಂಗದಿಂದ ದೂರ ಇಡಲು ನಿರ್ಧರಿಸಲಾಗಿದೆ. ಇದಕ್ಕೆ ಕರ್ನಾಟಕ ಚಲನಚಿತ್ರ ನಿರ್ಮಾಪಕರ ಸಂಘ, ನಿರ್ದೇಶಕರ ಸಂಘ ಹಾಗೂ ಸಂಗೀತ ನಿರ್ದೇಶಕರು ಬೆಂಬಲಿಸಿದ್ದಾರೆ. ಈ ವಿಚಾರವಾಗಿ ಆಡಿಯೋ ಕಂಪನಿಗಳ ಜತೆಗೂ ಮಾತುಕತೆ ಮಾಡಿ ಮತ್ತಷ್ಟು ಕಠಿಣ ಕ್ರಮ ಕೈಗೊಳ್ಳಲಾಗುವುದು’ ಎಂದರು.

 ಇದರ ಬೆನ್ನಲ್ಲೇ ರಾತ್ರಿ ವೇಳೆಗೆ ಸೋನು ನಿಗಮಂ ಕನ್ನಡಿಗರ ಕ್ಷಮೆ ಯಾಚಿಸಿದರು.ನಿರ್ಮಾಪಕರ ಸಂಘದ ಅಧ್ಯಕ್ಷ ಉಮೇಶ್‌ ಬಣಕಾರ್‌ ಮಾತನಾಡಿ, ‘ಅಸಹಕಾರ ಎಂದರೆ ಬ್ಯಾನ್‌ ಇದ್ದಂತೆಯೇ. ಆದರೆ, ಬ್ಯಾನ್‌ ಅಥವಾ ನಿಷೇಧ ಮಾಡುವ ಹಕ್ಕು ನಮಗೆ ಇಲ್ಲ. ಆ ರೀತಿಯ ಪದಗಳನ್ನು ನಾವು ಬಳಸಲ್ಲ. ನಮ್ಮ ಕನ್ನಡ ಚಿತ್ರರಂಗದ ಸಂಸ್ಥೆಗಳ ವ್ಯಾಪ್ತಿಯಲ್ಲಿ ಏನೆಲ್ಲಾ ಕ್ರಮ ಜರುಗಿಸಲು ಸಾಧ್ಯವೋ ಅದನ್ನು ಮಾತ್ರ ಮಾಡುತ್ತೇವೆ. ಹೀಗಾಗಿ ಸೋನು ನಿಗಮ್‌ ಅವರಿಂದ ಯಾವುದೇ ಕನ್ನಡ ಹಾಡುಗಳನ್ನು ಹಾಡಿಸದಿರಲು ನಿರ್ಧರಿಸಲಾಗಿದೆ. ಇನ್ನೊಂದು ವಾರದಲ್ಲಿ ಈ ವಿಚಾರವಾಗಿ ಮತ್ತೆ ಆಡಿಯೋ ಕಂಪನಿ, ಸಂಗೀತ ನಿರ್ದೇಶಕರನ್ನು ಕರೆದು ಮಾತುಕತೆ ಮಾಡುತ್ತೇವೆ’ ಎಂದು ಹೇಳಿದರು.

ಸಂಗೀತ ಸಂಯೋಜಕರ ಸಂಘದ ಪ್ರತಿನಿಧಿಯಾಗಿ ಮಾತನಾಡಿದ ಧರ್ಮ‌ ವಿಶ್, ‘ನಾವೆಲ್ಲರೂ ಸೋನು ನಿಗಮ್‌ ಅವರಿಗೆ ಅಸಹಕಾರ ತೋರಲು ನಿರ್ಧರಿಸಿದ್ದೇವೆ. ಈ ನಿಟ್ಟಿನಲ್ಲಿ ಸಂಗೀತ ನಿರ್ದೇಶಕರ ಜತೆಗೆ ಈಗಾಗಲೇ ಮಾತುಕತೆ ಆಗಿದೆ. ಆಡಿಯೋ ಕಂಪನಿಗಳು ಕೂಡ ಈ ನಿರ್ಧಾರಕ್ಕೆ ಬೆಂಬಲವಾಗಿ ನಿಲ್ಲಬೇಕು’ ಎಂದರು.ಯೋಗಿ ದ್ವಾರಕೀಶ್, ಚಿಂಗಾರಿ ಮಹದೇವ್‌, ಶಿಲ್ಪಾ ಶ್ರೀನಿವಾಸ್‌, ಪ್ರವೀಣ್‌ ಕುಮಾರ್‌, ಎನ್. ಕುಮಾರ್‌, ಗಾಯಕಿ ಹಾಗೂ ಸಂಗೀತ ನಿರ್ದೇಶಕಿ ಶಮಿತಾ ಮಲ್ನಾಡ್‌ ಪತ್ರಿಕಾಗೋಷ್ಠಿಯಲ್ಲಿ ಹಾಜರಿದ್ದರು.

ಮುಂದೆ ನನ್ನ ನಿರ್ಮಾಣದ ಯಾವುದೇ ಚಿತ್ರಗಳಲ್ಲಿ ಸೋನು ನಿಗಮ್‌ ಅವರಿಂದ ಹಾಡುಗಳನ್ನು ಹಾಡಿಸಲ್ಲ. ಶಾಶ್ವತವಾಗಿ ಅವರನ್ನು ನನ್ನ ನಿರ್ಮಾಣದ ಚಿತ್ರಗಳಿಂದ ದೂರ ಇಡುತ್ತಿದ್ದೇನೆ.

 ಉದಯ್‌ ಕೆ. ಮಹ್ತಾ, ನಿರ್ಮಾಪಕ

ಅಸಹಕಾರ ಎನ್ನುವುದಕ್ಕಿಂತ ಸೋನು ನಿಗಮ್‌ ಅವರನ್ನು ಸಂಪೂರ್ಣವಾಗಿ ಬ್ಯಾನ್‌ ಮಾಡಬೇಕು. ಕನ್ನಡದ ಬಗ್ಗೆ ಕೇವಲವಾಗಿ ಮಾತನಾಡುವವರಿಗೆ ಅಷ್ಟೇ ಕಠಿಣವಾಗಿ ಕ್ರಮ ಕೈಗೊಳ್ಳಬೇಕು.

- ಎನ್‌ಆರ್‌ಕೆ ವಿಶ್ವನಾಥ್‌, ಕರ್ನಾಟಕ ಚಲನಚಿತ್ರ ನಿರ್ದೇಶಕರ ಸಂಘದ ಅಧ್ಯಕ್ಷ

ಕ್ಷಮಿಸಿ ಕರ್ನಾಟಕ, ನಿಮ್ಮನ್ನು ಪ್ರೀತಿಸುವೆ

ಕ್ಷಮಿಸಿ ಕರ್ನಾಟಕ. ನಿಮ್ಮ ಮೇಲಿನ ನನ್ನ ಪ್ರೀತಿಯು ನನ್ನ ಅಹಂಗಿಂತಲೂ ದೊಡ್ಡದಾಗಿದೆ. ನಿಮ್ಮನ್ನು ಎಂದಿಗೂ ಪ್ರೀತಿಸುತ್ತೇನೆ.

- ಸೋನು ನಿಗಂ, ಗಾಯಕ

ಸೋನು ನಿಗಮ್‌ಗೆ ಪೊಲೀಸ್‌ ನೋಟಿಸ್‌

ಕೆ.ಆರ್‌.ಪುರ: ಕನ್ನಡಿಗರಿಗೆ ಅಪಮಾನ ಮಾಡಿದ ಸಂಬಂಧ ಪ್ರಕರಣ ದಾಖಲಿಸಿದ್ದ ಆವಲಹಳ್ಳಿ ಠಾಣೆಯ ಪೊಲೀಸರು ಗಾಯಕ ಸೋನು ನಿಗಮ್‌ಗೆ ನೋಟಿಸ್‌ ಜಾರಿ ಮಾಡಿದ್ದಾರೆ. 7 ದಿನಗಳಲ್ಲಿ ವಿಚಾರಣೆಗೆ ಹಾಜರಾಗುವಂತೆ ಸೂಚಿಸಿದ್ದಾರೆ.

ಸೋನು ನಿಗಂ ಬಂಧಿಸಿ

ಸೋನು ನಿಗಮ್‌ ತನ್ನ ಹುಚ್ಚುತನ ಪ್ರದರ್ಶನ ಮಾಡಿದ್ದಾರೆ. ಪರಪ್ಪನ ಅಗ್ರಹಾರದಲ್ಲಿ ನಾಲ್ಕು ದಿನ ಕಳೆದರೆ ಅವರ ಹುಚ್ಚು ಪರಿವರ್ತನೆ ಆಗಿ ಜ್ಞಾನೋದಯ ಆಗಬಹುದು. ಯಾವುದೇ ಕಾರಣಕ್ಕೂ ಸರ್ಕಾರ ಮುಲಾಜಿಲ್ಲದೆ ಬಂಧಿಸಬೇಕು.

- ನಾರಾಯಣಗೌಡ, ಕರವೇ ಮುಖ್ಯಸ್ಥ