ಇಲ್ಲಿ ಹೀರೋಗಳಿಗೆ ಸರಿಯಾದ ಕಥೆ ಸಿಕ್ತಿಲ್ಲ ಅನ್ನೋದೆಲ್ಲ ಭ್ರಮೆ : ಶ್ರೀನಗರ ಕಿಟ್ಟಿ

| Published : Jan 17 2025, 12:47 AM IST / Updated: Jan 17 2025, 04:59 AM IST

ಸಾರಾಂಶ

ಹೀರೋಗಳು ಭ್ರಮೆಗಳಿಂದ ಆಚೆ ಬರಬೇಕು ಅಂತ ನಟ ಶ್ರೀನಗರ ಕಿಟ್ಟಿ ಹೇಳಿದ್ದಾರೆ.

ಪ್ರಿಯಾ ಕೆರ್ವಾಶೆ

ಸಂಜು ವೆಡ್ಸ್ ಗೀತಾ ಸಿನಿಮಾದ ಎರಡೂ ಭಾಗಗಳಲ್ಲಿದ್ದವರು ನೀವು. ಈ ಭಾಗದ ಜರ್ನಿ ಹೇಗೆ ಭಿನ್ನವಾಗಿತ್ತು?

- ಸಂಜು ವೆಡ್ಸ್ ಗೀತಾ 2 ಮೊದಲ ಭಾಗಕ್ಕಿಂತಲೂ ಹೆಚ್ಚು ಜವಾಬ್ದಾರಿಯುತ ಕಥೆ ಹೊಂದಿರುವ ಸಿನಿಮಾ. ಅಲ್ಲಿ ಪ್ರೇಮಕಥೆ ಅಷ್ಟೇ ಇತ್ತು. ಇಲ್ಲಿ ರೇಷ್ಮೆ ಬೆಳೆಗಾರರ ಬದುಕಿನ ಮೇಲೆ ಬೆಳಕು ಚೆಲ್ಲುವ ಪ್ರಯತ್ನ ಮಾಡಿದ್ದೇವೆ. ಉತ್ಕಟ ಪ್ರೇಮ, ಪತಿ ಪತ್ನಿಯರು ಒಬ್ಬರ ಮೇಲೊಬ್ಬರು ನಂಬಿಕೆ, ವಿಶ್ವಾಸ ಇಟ್ಟುಕೊಂಡಿದ್ದರೆ, ಸಪೋರ್ಟಿಂಗ್‌ ಆಗಿದ್ದರೆ ಯಾವ ಎತ್ತರಕ್ಕೂ ಏರಬಹುದು, ಇಲ್ಲಿ ಅಸಾಧ್ಯ ಅನ್ನೋದಿಲ್ಲ ಅನ್ನೋದನ್ನು ಹೇಳಿದ್ದೀವಿ. ಶಿಡ್ಲಘಟ್ಟದ ರೇಷ್ಮೆ ಬೆಳೆಗಾರರ ಕಥೆಯನ್ನು ತೀವ್ರವಾಗಿ ತೆರೆ ಮೇಲೆ ತಂದಿದ್ದೇವೆ. ಈ ರೈತರು ಸಿಲಿಕೋಸಿಸ್‌ ಲಂಗ್ ಕ್ಯಾನ್ಸರ್‌ಗೆ ತುತ್ತಾಗಿ ಜೀವ ಬಿಡುತ್ತಿದ್ದಾರೆ. ಇವರಿಗೆ ಸರ್ಕಾರವೂ ಮಾನ್ಯತೆ ಕೊಟ್ಟಿಲ್ಲ. ಇಲ್ಲಿ ತಯಾರಾಗೋ ರೇಷ್ಮೆ ಬೇರೆ ಬೇರೆ ರಾಜ್ಯಗಳಿಗೆ ಹೋಗಿ ಬಹಳ ದುಬಾರಿ ಬೆಲೆಗೆ ಪುನಃ ನಮ್ಮ ರಾಜ್ಯಕ್ಕೆ ಬರುತ್ತೆ. ಅದರ ಬದಲು ನಮ್ಮ ರೈತರಿಗೆ ಮಾರುಕಟ್ಟೆ ಸರಿಯಾಗಿ ಮಾಡ್ಕೊಟ್ರೆ ನಮ್ಮ ಜನ ಖುಷಿ ಆಗಿರ್ತಾರೆ ಎಂಬ ವಿಷಯ ಹೇಳಿದ್ದೇವೆ.

- ಮೊದಲ ಭಾಗದ ಯಶಸ್ಸು ಈ ಸಿನಿಮಾ ಬಗ್ಗೆ ನಿರೀಕ್ಷೆ ಹೆಚ್ಚಿಸಿದೆ. ಇದು ಭಾರವಾ ಹಗುರವಾ?

ನಿಜಕ್ಕೂ ಹಗುರ. ಇಲ್ಲಿ ಸಿನಿಮಾ ಶೀರ್ಷಿಕೆ, ಹೀರೋ ಹೀರೋಯಿನ್‌ ಹೆಸರು ಮಾತ್ರ ಒಂದೇ ಆಗಿದೆ. ಕತೆ ಎಲ್ಲಾ ಬೇರೆಯೇ ಇದೆ. ಆ ಕಥೆಯ ಮುಂದುವರಿಕೆ ಇದಲ್ಲ. ಆದರೆ ಪ್ರೇಮಕಥೆ ಅದಕ್ಕಿಂತ ಉತ್ಕಟವಾಗಿ ಬಂದಿದೆ. - ಸಿನಿಮಾ ರಿಲೀಸ್‌ ಮದುವೆ ಮಾಡಿದ್ದಕ್ಕಿಂತ ಕಷ್ಟ ಆಯ್ತು ಅಂದ್ರಲ್ಲ ನಿರ್ದೇಶಕರು?

ಅವರ ಮಾತು ನಿಜ. ಇದೊಂಥರ ಗಜಗರ್ಭ. ಆದರೇನಾಯ್ತು, ಸಿನಿಮಾ ಅದ್ಭುತವಾಗಿ ಬಂದಿದೆ. ಒಬ್ರು ನೋಡಿದ್ರೂ ಹತ್ತು ಜನಕ್ಕೆ ಹೇಳಿ ನೋಡಿಸುವಂಥಾ ಸಿನಿಮಾ. ಈ ವಾರ ಕರ್ನಾಟಕದಲ್ಲಿ ರಿಲೀಸ್‌, ಮುಂದಿನ ವಾರ ವಿದೇಶದಲ್ಲಿ ಬಿಡುಗಡೆ. 

- ಸಿನಿಮಾದ ಹೈಲೈಟ್ಸ್‌?

ನಿಮಗೆ ಫಾರಿನ್‌ ಟೂರ್‌ ಮಾಡಿಸಿ, ರೈತರ ಕಷ್ಟ ಹೇಳಿ, ಅದ್ಭುತವಾದ ಪ್ರೇಮ ಕಥೆ ಕೊಟ್ಟು, 10 ವರ್ಷದ ಸಂಜು ಮತ್ತು ಗೀತಾ ಜರ್ನಿ - ಪ್ರೀತಿ ತೋರಿಸಿ, ಕಣ್ಣೀರು ಹಾಕಿಸಿ, ಕಣ್ಣೀರು ಒರೆಸಿ ಕಳಿಸುತ್ತೆ ಈ ಸಿನಿಮಾ. 

- ಇತ್ತೀಚೆಗೆ ನಾಯಕರಿಗೆ ಸರಿಯಾದ ಸ್ಕ್ರಿಪ್ಟ್‌, ಕಥೆಯ ಕೊರತೆ ಕಾಡ್ತಿದೆಯಂತೆ? ಈ ಬಗ್ಗೆ ನಿಮ್ಮ ಕಾಮೆಂಟ್‌?

ನಮ್ಮಲ್ಲಿ ಸ್ಕ್ರಿಪ್ಟ್‌ನಲ್ಲಿ ಏನೂ ಕೊರತೆ ಇಲ್ಲ. ಸಾವಿರಾರು ಸ್ಕ್ರಿಪ್ಟ್‌ ಇವೆ. ಅದನ್ನು ಎಕ್ಸಿಕ್ಯೂಟ್‌ ಮಾಡೋದು ಮುಖ್ಯ. ನಮ್ಮಲ್ಲಿ ಒಂದಿಷ್ಟು ಭ್ರಮೆಗಳಿವೆ. ಅದನ್ನು ಬಿಟ್ಟು ನಿರ್ದೇಶಕರು, ನಿರ್ಮಾಪಕರು ಸಿನಿಮಾ ಮಾಡ್ತೀವಿ ಅಂತ ಬಂದಾಗ ಅವರ ಜೊತೆ ಕೈಜೋಡಿಸಿ ಸಿನಿಮಾ ಮಾಡಿ. ಒಳ್ಳೆಯ ಸಿನಿಮಾ ಮಾಡಬೇಕು ಎಂಬ ಪ್ರೀತಿ ಇದ್ದು ನಿರ್ದೇಶಕ, ನಿರ್ಮಾಪಕರನ್ನು ಜೊತೆಯಲ್ಲಿಟ್ಟು ಕೆಲಸ ಮಾಡಿದರೆ 100 ಪರ್ಸೆಂಟ್‌ ಸಕ್ಸಸ್‌ ಸಿಕ್ಕೇ ಸಿಗುತ್ತೆ. ಡಿಸ್ಟ್ರಿಬ್ಯೂಶನ್‌, ಥೇಟರ್‌ ವಿಚಾರಗಳಲ್ಲಿನ ಗೊಂದಲ ಪರಿಹರಿಸಲು ಫಿಲಂ ಚೇಂಬರ್‌ ಪ್ಲಾನ್‌ ಮಾಡಿದೆ. ಎಲ್ಲಾ ಒಟ್ಟಿಗೆ ಸೇರಿ ಮಾತಾಡ್ಕೊಂಡು ಒಟ್ಟಾಗಿ ಶ್ರಮ ಹಾಕೋಣ. ಯಾವ ಚಿತ್ರರಂಗದಲ್ಲೂ ಎಲ್ಲವೂ ಸುಸೂತ್ರವಾಗಿದೆ ಅನ್ನೋ ಸ್ಥಿತಿ ಇಲ್ಲ. ಎಲ್ಲಾ ಕಡೆ ತೊಂದರೆ ಇದೆ. ಕೊರತೆ ಇದೆ. ಎಲ್ಲರೂ ಸೇರಿ ಅದನ್ನು ಪರಿಹರಿಸಬೇಕು.

 - ಚಿತ್ರದ ಮುಖ್ಯ ಕಲಾವಿದರು ಸಿನಿಮಾದ ಪ್ರಚಾರದಲ್ಲಿ ಇರಬೇಕಲ್ವ?

ನಿರೀಕ್ಷೆ ಮಾಡ್ತೀವಿ. ಅವರಿಗೂ ಗೊತ್ತಿರಬೇಕಲ್ವಾ ಅದು? ನಾವು ಯಾರಿಗೂ ಬಲವಂತ ಮಾಡೋದಕ್ಕಾಗಲ್ಲ. ನಾವಿಲ್ಲಿ ಊಟ ಮಾಡ್ತಿದ್ದೀವಲ್ಲ, ಈ ಕೆಲಸದಿಂದ ಬದುಕು ನಡೀತಿದೆ. ಅದಕ್ಕೆ ಪ್ರಾಮಾಣಿಕವಾಗಿ ಏನು ಮಾಡಬೇಕೋ ಅದನ್ನು ಮಾಡಬೇಕು. ಇದನ್ನೆಲ್ಲ ಕೇಳಿಸಿಕೊಳ್ಳುವವರಿಗೆ ಹೇಳಬಹುದು, ಅಷ್ಟೇ. ಯಾವುದು ನಮಗೆ ಅನ್ನ ಕೊಡುತ್ತೋ ಅದಕ್ಕೆ ಋಣಿ ಆಗಿರಬೇಕು.