ಆದಿವಾಸಿ ಜನರ ವಿರುದ್ಧ ಹೇಳಿಕೆ ನೀಡಿದ ಆರೋಪದ ಮೇಲೆ ತೆಲುಗು ನಟ ವಿಜಯ್‌ ದೇವರಕೊಂಡ ವಿರುದ್ಧ ಕೇಸು ದಾಖಲಾಗಿದೆ.

ಹೈದರಾಬಾದ್‌: ಆದಿವಾಸಿ ಜನರ ವಿರುದ್ಧ ಹೇಳಿಕೆ ನೀಡಿದ ಆರೋಪದ ಮೇಲೆ ತೆಲುಗು ನಟ ವಿಜಯ್‌ ದೇವರಕೊಂಡ ವಿರುದ್ಧ ಕೇಸು ದಾಖಲಾಗಿದೆ.

ಇತ್ತೀಚೆಗೆ ಕಾರ್ಯಕ್ರಮವೊಂದರಲ್ಲಿ ಪಹಲ್ಗಾಂ ದಾಳಿ ಬಗ್ಗೆ ಮಾತನಾಡಿದ್ದ ವಿಜಯ್‌,‘ ಪಾಕಿಸ್ತಾನದ ಮೇಲೆ ನಾವು ದಾಳಿ ಮಾಡುವ ಅಗತ್ಯವೇ ಇಲ್ಲ. ಏಕೆಂದರೆ ಅಲ್ಲಿನ ಜನರೇ ಸರ್ಕಾರದ ವಿರುದ್ಧ ದಾಳಿ ಮಾಡುವ ಹಂತಕ್ಕೆ ಬಂದಿದ್ದಾರೆ. ಅಲ್ಲಿನ ಜನರು 500 ವರ್ಷಗಳ ಹಿಂದೆ ಬುಡಕಟ್ಟು ಜನರ ಹಾಗೆ ವರ್ತಿಸುತ್ತಿದ್ದಾರೆ‘ ಎಂದಿದ್ದರು. ಬಳಿಕ ಕ್ಷಮೆಯಾಚಿಸಿದ್ದರು. ಆದರೂ ಕೇಸು ದಾಖಲಾಗಿದೆ.

ನನಗೆ ನರ ಸಂಬಂಧಿ ವ್ಯಾಧಿ: ನಟ ಸಲ್ಮಾನ್‌

ಮುಂಬೈ: ನಟ ಸಲ್ಮಾನ್‌ ಖಾನ್‌ ಅವರು ಇದೇ ಮೊದಲ ಬಾರಿಗೆ ತಮಗಿರುವ ಅನಾರೋಗ್ಯದ ಬಗ್ಗೆ ಮಾತನಾಡಿದ್ದಾರೆ. ಹಾಸ್ಯಕಲಾವಿದ ಕಪಿಲ್‌ ಶರ್ಮಾ ಅವರ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಖಾನ್‌, ತಾವು ಮೆದುಳು ಮತ್ತು ನರ ಸಂಬಂಧಿ ಕಾಯಿಲೆಯಿಂದ ಬಳಲುತ್ತಿರುವುದಾಗಿ ಹೇಳಿದ್ದಾರೆ. ‘ನನ್ನ ಮೆದುಳಿನ ರಕ್ತನಾಳ ಉಬ್ಬಿದೆ. ಅಪಧಮನಿಗಳು ಮತ್ತು ರಕ್ತನಾಳಗಳ ನಡುವಿನ ಅಸಹಜ ಸಂಪರ್ಕದ ಸಮಸ್ಯೆಯೂ ನನಗಿದೆ. ಸರಿಯಾಗಿ ನಡೆಯಲೂ ಸಾಧ್ಯವಾಗುತ್ತಿಲ್ಲ. ಈ ಸಮಸ್ಯೆಗಳ ಹೊರತಾಗಿಯೂ ಕೆಲಸ ಮಾಡುತ್ತಿದ್ದೇನೆ, ನೃತ್ಯ ಮಾಡುತ್ತಿದ್ದೇನೆ’ ಎಂದು ಸಲ್ಲು ಭಾಯ್‌ ಹೇಳಿದ್ದಾರೆ.

ದಿಲ್ಲಿಗೆ ಬರುತ್ತಿದ್ದ ಏರ್‌ ಇಂಡಿಯಾಗೆ ಬಾಂಬ್‌ ಬೆದರಿಕೆ: ಸುರಕ್ಷಿತ

ನವದೆಹಲಿ: ಬ್ರಿಟನ್‌ನ ಬರ್ಮಿಂಗ್‌ಹ್ಯಾಂನಿಂದ ದೆಹಲಿಗೆ ಬರುತ್ತಿದ್ದ ಏರ್‌ ಇಂಡಿಯಾ ವಿಮಾನಕ್ಕೆ ಭಾನುವಾರ ಬಾಂಬ್‌ ಬೆದರಿಕೆ ಬಂದಿದ್ದು, ಹೀಗಾಗಿ ವಿಮಾನವನ್ನು ಸೌದಿ ಅರೇಬಿಯಾದ ರಿಯಾದ್‌ನಲ್ಲಿ ತುರ್ತು ಭೂಸ್ಪರ್ಶ ಮಾಡಲಾಗಿದೆ. ಇಸ್ರೇಲ್‌ ಇರಾನ್‌ ಯುದ್ಧದಿಂದ ವಾಯುನೆಲೆ ಬಂದ್‌ ಮತ್ತು ಪಾಕಿಸ್ತಾನದ ವಾಯುಸೀಮೆ ನಿಷೇಧದ ಕಾರಣ ಬ್ರಿಟನ್‌ನಿಂದ ಬರುತ್ತಿದ್ದ ಏರ್‌ ಇಂಡಿಯಾ ಸೌದಿ ಮಾರ್ಗವನ್ನು ಹಿಡಿದಿತ್ತು. ಈ ವೇಳೆ ಬಾಂಬ್‌ ಬೆದರಿಕೆ ಕರೆ ಬಂದಿದೆ. ಅದಕ್ಕಾಗಿ ರಿಯಾದ್‌ನಲ್ಲಿ ಸುರಕ್ಷಿತವಾಗಿ ಇಳಿಸಿ, ಪ್ರಯಾಣಿಕರನ್ನು ಹೋಟೆಲ್‌ಗಳಿಗೆ ಕಳುಹಿಸಲಾಗಿದೆ ಎಂದು ಏರ್‌ ಇಂಡಿಯಾ ತಿಳಿಸಿದೆ. ಪ್ರಯಾಣಿಕರನ್ನು ದೆಹಲಿಗೆ ತಲುಪಿಸುವ ಸಲುವಾಗಿ ಎಲ್ಲಾ ವ್ಯವಸ್ಥೆ ಮಾಡಲಾಗುತ್ತಿದೆ ಎಂದು ಅದು ಹೇಳಿದೆ.