ಮದನ್ ಪಟೇಲ್ ನಟಿಸಿದ ತಮಟೆ ಚಿತ್ರದ ಶೋ ರೀಲ್‌ ಬಿಡುಗಡೆ ಮಾಡಿದ ಡಿಸಿಎಂ ಡಿಕೆ ಶಿವಕುಮಾರ್‌

| Published : Oct 18 2024, 12:21 AM IST / Updated: Oct 18 2024, 07:09 AM IST

ಸಾರಾಂಶ

ಮದನ್ ಪಟೇಲ್ ನಟಿಸಿ, ಮಯೂರ್ ಪಟೇಲ್ ನಿರ್ದೇಶಿಸಿರುವ ತಮಟೆ ಚಿತ್ರದ ಶೋ ರೀಲ್ ಬಿಡುಗಡೆ ಆಗಿದೆ.

ಮದನ್‌ ಪಟೇಲ್‌ ಅಭಿನಯದ, ಮಯೂರ್‌ ಪಟೇಲ್‌ ನಿರ್ದೇಶನದ ‘ತಮಟೆ’ ಚಿತ್ರದ ಶೋ ರೀಲ್‌ ಅನ್ನು ಉಪಮುಖ್ಯಮಂತ್ರಿ ಡಿ ಕೆ ಶಿವಕುಮಾರ್‌ ಬಿಡುಗಡೆ ಮಾಡಿದ್ದಾರೆ.

ಈ ವೇಳೆ ಮಾತನಾಡಿದ ಡಿ ಕೆ ಶಿವಕುಮಾರ್‌, ‘ನನಗೂ ಚಿತ್ರರಂಗಕ್ಕೂ ಹತ್ತಿರದ ನಂಟು. ನಾನು ಟೂರಿಂಗ್‌ ಟಾಕೀಸ್‌ ನಡೆಸುತ್ತಿದ್ದು ಎಲ್ಲರಿಗೂ ಗೊತ್ತಿದೆ. ರಾಜಕೀಯಕ್ಕೆ ಬಂದ ನಂತರ ಸಿನಿಮಾ ನೋಡುವುದು ಕಮ್ಮಿ ಆಗಿದೆ. ನಾನು ಸಿನಿಮಾ ನೋಡಿ ಇಪ್ಪತ್ತೈದು ವರ್ಷಗಳಾಗಿವೆ. ನಮ್ಮದೇ ಚಿತ್ರಮಂದಿರಗಳಿದ್ದರೂ ಸಹ ಸಿನಿಮಾ ನೋಡಲು ಆಗುತ್ತಿಲ್ಲ. ಆದರೆ, ಎಷ್ಟೋ ದಿನಗಳ ನಂತರ ‘ತಮಟೆ’ ಚಿತ್ರದ ಶೋ ರೀಲ್‌ ಅನ್ನು ಅರ್ಧ ಗಂಟೆ ನೋಡಿದೆ. ಚಿತ್ರ ತುಂಬಾ ಚೆನ್ನಾಗಿದೆ. ಸಮಯ ಸಿಕ್ಕಾಗ ಸಿನಿಮಾ ಪೂರ್ತಿ ನೋಡುತ್ತೇನೆ’ ಎಂದು ಹೇಳಿದರು.

ನಟ ಮದನ್‌ ಪಟೇಲ್‌, ‘ನಾನು ಕೆಲವು ವರ್ಷಗಳ ಹಿಂದೆ ತಮಟೆ ಹೆಸರಿನಲ್ಲಿ ಕಾದಂಬರಿ ಬರೆದಿದ್ದೆ. ಈಗ ಅದನ್ನು ನನ್ನ ಮಗ ಮಯೂರ್‌ ಪಟೇಲ್‌ ಸಿನಿಮಾ ಮಾಡಿದ್ದಾರೆ. ನಾನೇ ಮುಖ್ಯ ಪಾತ್ರದಲ್ಲಿ ಅಭಿನಯಿಸಿದ್ದೇನೆ. ಈಗಾಗಲೇ ಅನೇಕ ಚಿತ್ರೋತ್ಸವಗಳಲ್ಲಿ ಪ್ರದರ್ಶನವಾಗಿರುವ ‘ತಮಟೆ’ ಚಿತ್ರವನ್ನು ಸದ್ಯದಲ್ಲೇ ಬಿಡುಗಡೆ ಮಾಡುತ್ತಿದ್ದೇವೆ’ ಎಂದರು.

ನಿರ್ದೇಶಕ ಮಯೂರ್‌ ಪಟೇಲ್‌, ‘ಗ್ರಾಮೀಣ ಸೊಗಡಿನ ತಮಟೆ ವಾದ್ಯಗಾರನೊಬ್ಬನ ಕತೆಯನ್ನು ಒಳಗೊಂಡ ಚಿತ್ರ. ಅಪ್ಪ ಬರೆದಿರುವ ‘ತಮಟೆ’ ಕಾದಂಬರಿಯನ್ನು ಓದುತ್ತಿದ್ದಾಗ ಸಿನಿಮಾ ಮಾಡುವ ಆಸೆ ಆಯಿತು’ ಎಂದರು.