ಸಾರಾಂಶ
ಮೈಸೂರು : ಗಹನವಾದ ವಿಷಯ ಒಂದೇ ಬಾರಿಗೆ ಅರ್ಥವಾಗದು ಎಂಬ ಕಾರಣಕ್ಕೆ ಸಿನಿಮಾಕ್ಕೆ ತರಲಾಗುತ್ತಿಲ್ಲ. ಆದರೆ, ಒಂದೇ ಬಾರಿಗೆ ಸಿನಿಮಾ ಅರ್ಥವಾಗಬೇಕು ಎಂಬ ಗ್ರಹಿಕೆಯೇ ತಪ್ಪು ಎಂದು ಖ್ಯಾತ ಚಲನಚಿತ್ರ ನಿರ್ದೇಶಕ ಗಿರೀಶ್ ಕಾಸರವಳ್ಳಿ ಅಭಿಪ್ರಾಯಪಟ್ಟರು.
ಮೈಸೂರು ಸಾಹಿತ್ಯ ಸಂಭ್ರಮ ಕಾರ್ಯಕ್ರಮದಲ್ಲಿ ಭಾನುವಾರ ರಾಷ್ಟ್ರ ಪ್ರಶಸ್ತಿಗಳ ಸುರಿಮಳೆ: ಕಾಸರವಳ್ಳಿ ಮಾಯಾಲೋಕ ಗೋಷ್ಠಿಯಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.
ಸಿನಿಮಾದ ಮೂಲಕ ಗಹನವಾದ ವಿಷಯ ಹೇಳಲು ಸಾಧ್ಯವಿಲ್ಲ ಎಂಬ ಮಾತಿದೆ. ಈ ಕಾರಣಕ್ಕೆ ಸಿನಿಮಾ ಒಂದೇ ಬಾರಿಗೆ ಅರ್ಥವಾಗಬೇಕು ಎಂಬ ಅಭಿಪ್ರಾಯವಿದೆ. ಆದರೆ, ಒಂದೇ ಬಾರಿಗೆ ಸಿನಿಮಾ ಅರ್ಥವಾಗಬೇಕು ಎಂಬ ಗ್ರಹಿಕೆಯೇ ತಪ್ಪು. ಒಂದು ಸಾಹಿತ್ಯ ಕೃತಿಯನ್ನು ಒಂದು ಬಾರಿ ಓದಿದಾಗ ಅರ್ಥವಾಗದೆ ಮತ್ತೆ ಓದುತ್ತೇವೆ. ಆದರೆ, ಸಿನಿಮಾವನ್ನು ಮಾತ್ರ ಒಂದೇ ಬಾರಿಗೆ ಅರ್ಥವಾಗಬೇಕು ಎಂದು ಬಯಸುತ್ತೇವೆ ಎಂದರು.
ನಿಮಿಷಕ್ಕೊಂದು ಟ್ವಿಸ್ಟ್ ಬರಬೇಕು ಎಂಬುದು ಮಾರ್ಕೇಟ್ ಎಕಾನಮಿ ಸಿನಿಮಾದ ಮೇಲೆ ಹೇರುತ್ತಿರುವ ನಿಬಂಧನೆಯಾಗಿದೆ. ಆದರೆ, ಒಂದು ಸಿನಿಮಾ ಹೀಗೇ ಇರಬೇಕು ಅಥವಾ ಇಷ್ಟೇ ಸಮಯದ ಮಿತಿಯೊಳಗೆ ಇರಬೇಕು ಎಂದು ಹೇಳುವುದು ಸರಿಯಲ್ಲ. ರಾಷ್ಟ್ರಕವಿ ಕುವೆಂಪು ಅವರು ಮಲೆಗಳಲ್ಲಿ ಮದುಮಗಳು ಅಂತಹ ದೊಡ್ಡ ಕಾದಂಬರಿ ಬರೆದರು. ಬರೆಯಲು ಅಷ್ಟೊಂದು ವಿಷಯ ಇದ್ದ ಹಿನ್ನೆಲೆಯಲ್ಲಿ ಬೃಹತ್ ಕಾದಂಬರಿ ಬರೆದರು. ಸಿನಿಮಾ ಕೂಡ ಹಾಗೆಯೇ ಎಂದರು.
ಸಿನಿಮಾದಲ್ಲಿ ಕೇವಲ ಕತೆ ಮಾತ್ರ ಮುಖ್ಯವಲ್ಲ. ಸಿನಿಮಾದ ಪ್ರತಿಯೊಂದು ಅಂಶವೂ ಮುಖ್ಯ. ಸಿನಿಮಾದ ವಿನ್ಯಾಸ ಬಹಳ ಮುಖ್ಯ. ಯಾವ ವಿನ್ಯಾಸದಲ್ಲಿ ಸಿನಿಮಾ ಮಾಡಲಾಗಿದೆ ಎಂಬುದನ್ನು ನೋಡಬೇಕು. ಸಾಹಿತ್ಯ ಕೃತಿಯಲ್ಲಿ ಮರವನ್ನು ಮರ ಅನ್ನಬೇಕು. ಆದರೆ, ಸಿನಿಮಾದಲ್ಲಿ ಮರ ಅನ್ನುವ ಅವಶ್ಯಕತೆ ಇಲ್ಲ. ಏಕೆಂದರೆ ಸಿನಿಮಾದಲ್ಲಿ ದೃಶ್ಯಗಳು ಕಣ್ಣ ಮುಂದೆ ಇರುತ್ತದೆ. ಹಾಗಾಗಿ ಸಿನಿಮಾ ಕತೆಗಿಂತ ಭಿನ್ನ ವಾಗಿರುತ್ತದೆ ಎಂದು ಅಭಿಪ್ರಾಯಪಟ್ಟರು.
ಸಾಹಿತಿ ಗೋಪಾಲಕೃಷ್ಣ ಪೈ ಮಾತನಾಡಿ, ಒಂದು ಸಿನಿಮಾವನ್ನು ಒಂದು ಬಾರಿ ನೋಡಿ ಅರ್ಥ ಮಾಡಿಕೊಳ್ಳಲು ಸಾಧ್ಯವಿಲ್ಲ. ಶಾಲಾ, ಕಾಲೇಜುಗಳಲ್ಲಿ ಸಿನಿಮಾವನ್ನು ಒಂದು ಪಠ್ಯವಾಗಿ ಕಲಿಸದೆ ಇರುವ ಹಿನ್ನೆಲೆಯಲ್ಲಿ ಸಿನಿಮಾವನ್ನು ನೋಡುವ ಗ್ರಹಿಸಿಕೆ ನಮ್ಮಲ್ಲಿ ಬದಲಾಗಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.
ಸಾಹಿತ್ಯ ಹಾಗೂ ಸಿನಿಮಾ ಭಿನ್ನವಾದ ಮಾದರಿಯನ್ನು ಹೊಂದಿವೆ. ಒಂದು ಮತ್ತೊಂದರ ರೀತಿ ಇರುವುದಿಲ್ಲ. ಹಾಗಾಗಿ ಸಾಹಿತ್ಯ ಕೃತಿ ಓದಿದಾಗ ನಮಗೆ ದೊರೆಯುವ ಅನುಭವವೇ ಬೇರೆ ಸಿನಿಮಾ ನೋಡಿದಾಗ ದೊರೆಯುವ ಅನುಭವವೇ ಬೇರೆ ಎಂದರು.
ದೀಪಾ ರವಿಶಂಕರ್ ಕಾರ್ಯಕ್ರಮ ನಡೆಸಿಕೊಟ್ಟರು.