ಚಿತ್ರರಂಗದಲ್ಲಿ ಸದ್ದು ಮಾಡುವವರೇ ಹೆಚ್ಚು ಕಾಣಿಸಿಕೊಳ್ಳುವ ಕಾಲ ಇದು. ಆದರೆ ಸದ್ದುಗದ್ದಲವಿಲ್ಲದೆ, ದೊಡ್ಡ ಬಜೆಟ್ಟಿನ ಬೆಂಬಲವಿಲ್ಲದೆ, ತಮ್ಮದೇ ಆದ ಕಥೆಗಳನ್ನು ನಂಬಿಕೊಂಡು ಪ್ರಾಮಾಣಿಕವಾಗಿ ಸಿನಿಮಾ ಮಾಡುತ್ತಾ ಹೋಗುವವರೂ ಇದ್ದಾರೆ. ಅಂಥವರಲ್ಲಿ ಸಿಂಪಲ್ ಸುನಿಒಬ್ಬರು

ಆರ್.ಕೇಶವಮೂರ್ತಿ

ಲಂಬೋದರ 2.0 ಚಿತ್ರದ ನಿರ್ದೇಶಕನ ಸಂದರ್ಶನ

ಚಿತ್ರರಂಗದಲ್ಲಿ ಸದ್ದು ಮಾಡುವವರೇ ಹೆಚ್ಚು ಕಾಣಿಸಿಕೊಳ್ಳುವ ಕಾಲ ಇದು. ಆದರೆ ಸದ್ದುಗದ್ದಲವಿಲ್ಲದೆ, ದೊಡ್ಡ ಬಜೆಟ್ಟಿನ ಬೆಂಬಲವಿಲ್ಲದೆ, ತಮ್ಮದೇ ಆದ ಕಥೆಗಳನ್ನು ನಂಬಿಕೊಂಡು ಪ್ರಾಮಾಣಿಕವಾಗಿ ಸಿನಿಮಾ ಮಾಡುತ್ತಾ ಹೋಗುವವರೂ ಇದ್ದಾರೆ. ಅಂಥವರಲ್ಲಿ ಸಿಂಪಲ್ ಸುನಿ ಒಬ್ಬರು. ಸರಳತೆಯನ್ನೇ ತಮ್ಮ ಶಕ್ತಿಯನ್ನಾಗಿಸಿಕೊಂಡು, ಸಣ್ಣ ಬಜೆಟ್ಟಿನ ಸಿನಿಮಾಗಳ ಮೂಲಕ ಪ್ರೇಕ್ಷಕರನ್ನು ತಲುಪಲು ಪ್ರಯತ್ನಿಸುತ್ತಿರುವ ಸುನಿ ಅವರಂಥ ನಿರ್ದೇಶಕರೇ ಯಾವುದೇ ಚಿತ್ರರಂಗದ ನಿಜವಾದ ಶಕ್ತಿ. ಅವರ ಸಿನಿಮಾ ಪಯಣ, ನಂಬಿಕೆ ಮತ್ತು ಕನಸುಗಳ ಕುರಿತು ಈ ಮಾತುಕತೆ. ಅವರ ಹೊಸ ಚಿತ್ರ ‘ಲಂಬೋದರ 2.0’ ಚಿತ್ರವು ಇಂದು (ನ.13) ಪ್ರೇಕ್ಷಕರ ಮುಂದೆ ಬರುತ್ತಿದೆ.

ಈ ಕತೆಯ ಹುಟ್ಟಿನ ಹಿನ್ನೆಲೆ ಏನು?

ನಾನು ಬರೆದ ಕತೆ ಅಲ್ಲ ಇದು. ನಮ್ಮ ಚಿತ್ರದ ನಾಯಕ ಅನಿಲ್‌ ಶೆಟ್ಟಿ ಅವರೇ ಬರೆದಿದ್ದು. ನಿರ್ದೇಶಕ ಸಚಿನ್‌ ಅವರು ಫೋನ್‌ ಮಾಡಿ ಒಂದು ಕತೆ ಇದು ಕೇಳು ಅಂದ್ರು. ಕೇಳಿದೆ. ತುಂಬಾ ಚೆನ್ನಾಗಿತ್ತು. ನಾನು ಸೈನ್ಸ್‌, ಗಣಿತದಲ್ಲಿ ವೀಕು. ನಾನು ಯೋಚನೆ ಮಾಡಕ್ಕೆ ಆಗದ ಕತೆಯೊಂದನ್ನು ಸಿನಿಮಾ ಮಾಡಿದ್ದೇನೆ.

ಹಿಂದಿನ ‘ಲಂಬೋದರ’ನಿಗೂ ಈ ‘ಲಂಬೋದರ 2.0’ ಚಿತ್ರಕ್ಕೂ ನಂಟು ಇದಿಯಾ?

ಆ ರೀತಿ ಸಂಬಂಧ ಇಲ್ಲ. ಆದರೆ, ಈ ಚಿತ್ರದ ಕತೆ ಕನ್ನಡದ ದೊಡ್ಡ ಐಕಾನ್‌ ಹೀರೋ ಒಬ್ಬರ ಚಿತ್ರಕ್ಕೆ ನಂಟು ಇದೆ. ಅದನ್ನು ಸಿನಿಮಾ ನೋಡಿಯೇ ತಿಳಿಯಬೇಕು.

ಇಂಥ ತಾಂತ್ರಿಕ ವಿಷಯಗಳ ಚಿತ್ರದಲ್ಲಿ ಮನರಂಜನೆ ಹೇಗೆ ಸಾಧ್ಯ?

ಸೈನ್ಸ್‌ ಫಿಕ್ಷನ್‌ ಕತೆಗಳೆಂದರೆ ತಾಂತ್ರಿಕತೆಯಿಂದ ಕೂಡಿರುತ್ತದೆ ಎಂದುಕೊಳ್ಳುತ್ತಾರೆ. ನಮ್ಮ ಚಿತ್ರದಲ್ಲಿ ಟೆಕ್ನಾಲಜಿ ಜೊತೆಗೆ ಮನರಂಜನೆಗೆ ಕೊರತೆ ಇಲ್ಲ. ಬಿಗ್‌ಬಾಸ್‌ ರೀತಿಯ ಒಂದು ಗೇಮ್‌, ಹ್ಯಾಪಿನೆಸ್‌ ಬ್ಯಾಂಡ್‌ ಕಟ್ಟಿಕೊಳ್ಳುವುದು, ಈ ಗೇಮ್‌ ಸುತ್ತಾ ನಡೆಯುವ ಸಂಭಾಷಣೆಗಳ‍ಲ್ಲಿ ಫನ್‌ ಇದೆ.

ನಿಜವಾದ ರೋಬೋಟ್‌ನಿಂದ ಅಭಿನಯ ಮಾಡಿಸುವ ಆಲೋಚನೆ ಬಂದಿದ್ದೇಗೆ?

ನಮ್ಮ ಚಿತ್ರದಲ್ಲಿ ಮನುಷ್ಯರನ್ನು ನಂಬದ ಒಂದು ಪಾತ್ರ ಇದೆ. ಆ ಪಾತ್ರದ ಕಾರಣಕ್ಕೆ ರೋಬೋಟ್‌ ಕಲ್ಪನೆ ಬಂದಿದ್ದು. ಮೊದಲು ಈ ಐಡಿಯಾ ಇರಲಿಲ್ಲ. ಅಲೆಕ್ಸಾ, ಸಿರಿ ರೀತಿ ಮಿಷನ್‌ಗಳ ಜೊತೆಗೆ ಪಾತ್ರಧಾರಿ ಮಾತನಾಡುತ್ತಾನೆ ಎಂದು ಬರೆದುಕೊಂಡಿದ್ವಿ. ಆದರೆ, ನಮ್ಮ ನಿರ್ಮಾಪಕರು ದುಬೈಗೆ ಹೋದಾಗ ಅಲ್ಲಿ ಈ ಜಿಯಾ ಹೆಸರಿನ ನೈಜ ಹ್ಯೂಮನಾಯ್ಡ್ ರೋಬೋಟ್ ನೋಡಿ ಅದನ್ನು ಚಿತ್ರದಲ್ಲಿ ಬಳಸಿದ್ದೇವೆ. ಇದನ್ನು ತಯಾರಿಸಿದ್ದು ಬೆಂಗಳೂರು ಮೂಲದ ಕಂಪನಿಯೇ.

ಈ ಚಿತ್ರದ ಮೂಲಕ ಏನು ಹೇಳುತ್ತಿದ್ದೀರಿ?

ಡಿಜಿಟಲ್‌ ಸ್ಕ್ಯಾಮ್‌ಗಳನ್ನು ಹೇಳುವ ಜೊತೆಗೆ, ಸೋಶಿಯಲ್ ಮೀಡಿಯಾ, ಲೈಕ್ಸ್, ಫಾಲೋವರ್ಸ್, ಡಿಜಿಟಲ್ ಜಗತ್ತೇ ಒಂದು ಬದುಕಾಗಿಸಿಕೊಂಡಿರುವವರ ಜಗತ್ತಿನ ಬಗ್ಗೆ ಈ ಸಿನಿಮಾ ಮಾತನಾಡುತ್ತದೆ. ಸಿನಿಮಾ ನೋಡಿದ ಮೇಲೆ ನಾವು ಯಾವೆಲ್ಲ ಆಪ್‌ಗಳು ಬಳಸುತ್ತಿದ್ದೇವೆ, ಲೈವ್‌ ಎಕ್ಸ್‌ಪಿರಿಯೆನ್ಸ್‌ನಿಂದ ದೂರವಾಗಿರುವ ಡೇ ಟು ಡೇ ಲೈಫ್‌... ಇದೆಲ್ಲವೂ ಚಿತ್ರದಲ್ಲಿ ಬರಲಿದೆ. ಕೊನೆಗೆ ಮನುಷ್ಯನಿಗೆ ಹ್ಯಾಪಿನೆಸ್‌ ಎನ್ನುವುದು ಎಲ್ಲಿದೆ ಎಂಬುದನ್ನು ಚಿತ್ರದಲ್ಲಿ ಹೇಳಲಾಗಿದೆ.

ಬಾಲಿವುಡ್‌ ನಟ ಕುನಾಲ್‌ ಕಪೂರ್‌ ಈ ಚಿತ್ರಕ್ಕೆ ಯಾಕೆ ಬೇಕಿತ್ತು?

ನಮ್ಮ ಚಿತ್ರದಲ್ಲಿ ಹೊರಗಿನಿಂದ ಬರುವ ಒಂದು ಪಾತ್ರಧಾರಿ ಬೇಕಿತ್ತು. ಒಂದು ರೀತಿಯಲ್ಲಿ ಎಲಾನ್‌ ಮಸ್ಕ್‌ ನನ್ನು ನೆನಪಿಸುವಂತ ಪಾತ್ರಧಾರಿ. ಅದಕ್ಕೆ ಕುನಾಲ್‌ ಸೂಕ್ತ ಅನಿಸಿತು. ಅವರ ಪಾತ್ರ ಚಿತ್ರಕ್ಕೆ ತುಂಬಾ ಮಹತ್ವ ಕೊಡುತ್ತದೆ.

ಈ ರೀತಿಯ ಚಿತ್ರಗಳನ್ನು ರೂಪಿಸುವುದರಲ್ಲಿ ಎಷ್ಟು ರಿಸ್ಕ್‌ ಇದೆ?

ಪ್ರಯೋಗ ಅನ್ನೋದೇ ರಿಸ್ಕ್‌. ಎಷ್ಟು ರಿಸ್ಕ್‌, ಸವಾಲು ಎಂಬುದು ಇಂಥ ಚಿತ್ರಗಳು ಬಿಡುಗಡೆ ನಂತರ ಕೊಡುವ ರಿಜಲ್ಟ್‌ ಮೇಲೆ ನಿಂತಿರುತ್ತದೆ.