ಸಾರಾಂಶ
ಭುವನ್ ಪೊನ್ನಣ್ಣ ಮತ್ತು ಹರ್ಷಿಕಾ ಪೂಣಚ್ಚ ಪ್ರೇಮಕತೆ
ಕನ್ನಡಪ್ರಭ ಸಿನಿವಾರ್ತೆ
ಹರ್ಷಿಕಾ ಪೂಣಚ್ಚ ಮತ್ತು ಭುವನ್ ಗೌಡ ಅವರದು ಲವ್ ಕಮ್ ಅರೇಂಜ್‌ಡ್ ಮ್ಯಾರೇಜ್. ಸುದೀರ್ಘ ವರ್ಷ ಪ್ರೇಮದಲ್ಲಿದ್ದ ಇವರು ಈಗ ಮದುವೆಯಾಗಿ ಸುಖ ದಾಂಪತ್ಯ ನಡೆಸುತ್ತಿದ್ದಾರೆ. ಅವರ ಪ್ರೇಮಕತೆಯನ್ನು ಹಂಚಿಕೊಂಡಿದ್ದಾರೆ ಭುವನ್ ಪೊನ್ನಣ್ಣ.ನಾನು ಹರ್ಷಿಕಾ ಅವರನ್ನು ನೋಡಿದ್ದು ಬೆಂಗಳೂರಿನಲ್ಲಿ ನಡೆದ ಕೊಡವ ಸಮಾಜದ 100ನೇ ವರ್ಷದ ಸಮಾರಂಭದಲ್ಲಿ. ಈ ಸಮಾರಂಭದ ಪ್ಯಾಷನ್ ಶೋನ ಕೋರಿಯೋಗ್ರಫಿ ಮಾಡಿದ್ದೆ. ಇದಕ್ಕೆ ಶೋ ಟಾಪರ್ ಆಗಿ ಹರ್ಷಿಕಾ ಪೂಣಚ್ಚ ಅವರನ್ನು ಕರೆಸಿದ್ವಿ. ಈ ಶೋ ಭಾಗವಾಗಿ ನಾನು ಹರ್ಷಿಕಾ ಅವರಿಗೆ ಫೋನ್ ಮಾಡಿದಾಗ ಅವರು ನನ್ನ ಅಂಕಲ್ ಅಂತ ಕರೆದಿದ್ದು ಇನ್ನೂ ನೆನಪಿದೆ. ಅದಕ್ಕೆ ಕಾರಣ ನನ್ನ ಹರ್ಷಿಕಾ ಅವರಿಗೆ ಪರಿಚಯ ಮಾಡಿಸಿದ್ದು 60 ವರ್ಷದ ವ್ಯಕ್ತಿ. ನನ್ನ ನೋಡಿರದ ಹರ್ಷಿಕಾ ಅವರಿಗೆ ನಾನು ಫೋನ್ ಮಾಡಿದಾಗ ಅವರಿಂದ ನಾನು ಅಂಕಲ್ ಅನಿಸಿಕೊಂಡೆ. ನಂತರ ಕೊಡವ ಸಮಾಜದ ಸಮಾರಂಭದಲ್ಲಿ ಭೇಟಿ, ನಾವು ಅಂದುಕೊಂಡಂಕ್ಕಿಂತ ತುಂಬಾ ಚೆನ್ನಾಗಿ ಫ್ಯಾಷನ್ ಶೋ ಮಾಡಿದ್ದು, ಅಲ್ಲಿ ಹರ್ಷಿಕಾ ಎಲ್ಲರ ಮೆಚ್ಚುಗೆಗೆ ಪಾತ್ರವಾಗಿದ್ದು, ಮುಂದೆ ನಾವಿಬ್ಬರು ಸ್ನೇಹಿತರು ಆಗಿದ್ದು, ಒಬ್ಬರನ್ನೊಬ್ಬರು ಇಷ್ಟಪಡುತ್ತಿರುವುದನ್ನು ಹೇಳಿಕೊಂಡಿದ್ದು ಎಲ್ಲವೂ ಆಯಿತು. ನಮ್ಮ ಪ್ರೀತಿಗೆ ಮನೆಯವರು ಒಪ್ಪಿಗೆ ಕೊಟ್ಟರು. ಎರಡೂ ಫ್ಯಾಮಿಲಿಗಳ ಜತೆಗೆ ದೇಶಗಳನ್ನು ಸುತ್ತಿದ್ದೇವೆ. ಹೀಗೆ ಮದುವೆಗೂ ಮುಂಚೆ ಸುಮಾರು 60 ದೇಶಗಳನ್ನು ಸುತ್ತಿದ್ದೇವೆ. ಈ ಸುತ್ತಾಟದಲ್ಲಿ ಒಬ್ಬರನ್ನೊಬ್ಬರು ಅರ್ಥ ಮಾಡಿಕೊಂಡಿದ್ದೇವೆ. ಗೌರವಿಸುವುದು, ಪ್ರೀತಿಸುವುದನ್ನು ಕಲಿತಿದ್ದೇವೆ. ಪ್ರೀತಿ ಎಂದರೆ ಹುಡುಗ- ಹುಡುಗಿ ಮಾತ್ರವಲ್ಲ ಅಲ್ಲಿ ಎರಡು ಕುಟುಂಬಗಳು, ಸಂಬಂಧಗಳು ಇರುತ್ತವೆ ಎಂಬುದನ್ನು ತಿಳಿದುಕೊಂಡಿದ್ದೇವೆ. ನಮ್ಮ ಈ ಪ್ರೀತಿಯ ಪಯಣದಲ್ಲಿ ನನಗೆ ಸಿಕ್ಕ ಗಿಫ್ಟ್ ಎಂದರೆ ಒಳ್ಳೆಯ ಮನಸ್ಸಿನ ಹರ್ಷಿಕಾ.