ಏ.15ರಿಂದ ಬೆಂಗಳೂರಿನಲ್ಲೇ ಟಾಕ್ಸಿಕ್‌ ಶೂಟಿಂಗ್‌

| Published : Apr 05 2024, 01:10 AM IST / Updated: Apr 05 2024, 05:57 AM IST

ಸಾರಾಂಶ

ಏ.15 ರಿಂದ ಯಶ್‌ ನಟನೆಯ ಟಾಕ್ಸಿಕ್‌ ಸಿನಿಮಾ ಶೂಟಿಂಗ್‌ ಕಿಕ್‌ಸ್ಟಾರ್ಟ್‌. ಬೆಂಗಳೂರಿನಲ್ಲೇ ಅದ್ದೂರಿ ಸೆಟ್‌.

ಏ.15ರಿಂದ ಯಶ್‌ ನಟನೆಯ ‘ಟಾಕ್ಸಿಕ್‌’ ಸಿನಿಮಾ ಶೂಟಿಂಗ್‌ ಆರಂಭವಾಗಲಿದೆ. ಇದಕ್ಕಾಗಿ ಬೆಂಗಳೂರಿನ ಹೆಚ್‌ಎಂಟಿ ಫ್ಯಾಕ್ಟರಿ ಆವರಣದಲ್ಲಿ ಬೃಹತ್‌ ಸೆಟ್‌ ಕೆಲಸ ಭರದಿಂದ ನಡೆಯುತ್ತಿದೆ. ನೂರಾರು ಕಾರ್ಮಿಕರು ಸೆಟ್‌ ಸಿದ್ಧತೆಯಲ್ಲಿ ತೊಡಗಿದ್ದು, ಎರಡು ಎಕರೆಗಳಷ್ಟು ವಿಶಾಲ ಪ್ರದೇಶದಲ್ಲಿ ‘ಟಾಕ್ಸಿಕ್‌’ ಸೆಟ್‌ ತಲೆ ಎತ್ತಲಿದೆ.

ಈ ಬಗ್ಗೆ ವಿವರ ನೀಡಿರುವ ಚಿತ್ರತಂಡ, ‘ಕನ್ನಡದ ಹೆಚ್ಚಿನ ಬಿಗ್‌ ಬಜೆಟ್‌ ಚಿತ್ರಗಳು ರಾಜ್ಯದ ಹೊರಗೆ ಚಿತ್ರೀಕರಣಗೊಳ್ಳುತ್ತವೆ. ಇದಕ್ಕೆ ನೀಡುವ ಕಾರಣ ಇಲ್ಲಿನ ಸೌಲಭ್ಯದ ಕೊರತೆ. ಯಶ್ ಈ ವಿಚಾರವನ್ನು ಗಂಭೀರವಾಗಿ ಪರಿಗಣಿಸಿದ್ದರು. ಇಲ್ಲೇ ಚಿತ್ರೀಕರಣ ನಡೆಸುವ ಬಗ್ಗೆ ಚರ್ಚಿಸಿದರು. ಹೀಗಾಗಿ ಕರ್ನಾಟಕದಲ್ಲೇ ಚಿತ್ರೀಕರಣ ಆರಂಭಿಸಲು ಮುಂದಾಗಿದ್ದೇವೆ. ನಾವು ಈಗಾಗಲೇ ಬೃಹತ್ ಸೆಟ್‌ಗಳನ್ನು ನಿರ್ಮಿಸಿದ್ದೇವೆ. ಇಲ್ಲಿನ ಜನರು, ತಂತ್ರಜ್ಞರು ಮತ್ತು ಉದಯೋನ್ಮುಖ ಪ್ರತಿಭೆಗಳಿಗೆ ಉದ್ಯೋಗ ಅವಕಾಶ ಸೃಷ್ಟಿಸಿದ್ದೇವೆ. ಇವರೆಲ್ಲರ ಸಹಕಾರದಲ್ಲಿ ಜಾಗತಿಕ ಮಟ್ಟದ ಸಿನಿಮಾ ನಿರ್ಮಿಸಲು ಶ್ರಮಿಸುತ್ತಿದ್ದೇವೆ. ಈ ಚಿತ್ರಕ್ಕಾಗಿ ಬೇರೆ ಬೇರೆ ಇಂಡಸ್ಟ್ರಿ ಕಲಾವಿದರು, ತಂತ್ರಜ್ಞರು, ಜೊತೆಗೆ ಅಂತಾರಾಷ್ಟ್ರೀಯ ಪ್ರತಿಭೆಗಳೂ ಕೆಲಸ ಮಾಡುತ್ತಿದ್ದಾರೆ. ಇಲ್ಲೇ ನಾವು ಚಿತ್ರೀಕರಣ ನಡೆಸುವ ಮೂಲಕ ನಮ್ಮ ರಾಜ್ಯ, ನಮ್ಮ ಜನರ ಸಾಮರ್ಥ್ಯ ಪ್ರದರ್ಶಿಸಲು ತೀರ್ಮಾನಿಸಿದ್ದೇವೆ’ ಎಂದು ತಿಳಿಸಿದೆ.

ಕೆವಿಎನ್ ಪ್ರೊಡಕ್ಷನ್ಸ್ ಹಾಗೂ ಯಶ್‌ ಅವರ ಮಾನ್‌ಸ್ಟರ್‌ ಬ್ಯಾನರ್‌ನಲ್ಲಿ ‘ಟಾಕ್ಸಿಕ್’ ಸಿನಿಮಾ ನಿರ್ಮಾಣವಾಗುತ್ತಿದೆ. ಮಲಯಾಳಂ ಮೂಲದ ಗೀತು ಮೋಹನ್‌ ದಾಸ್ ನಿರ್ದೇಶಕಿ. 2025ರ ಏಪ್ರಿಲ್ 10ಕ್ಕೆ ‘ಟಾಕ್ಸಿಕ್’ ಸಿನಿಮಾ ಬಿಡುಗಡೆ ಘೋಷಿಸಲಾಗಿದೆ.