ಮುಂದಿನ ವಾರದಿಂದ ಯಶ್‌ ರಾಮಾಯಣ ಶೂಟಿಂಗ್‌

| Published : Apr 23 2025, 12:34 AM IST

ಸಾರಾಂಶ

ಯಶ್ ನಟನೆಯ ರಾಮಾಯಣ 1 ಚಿತ್ರಕ್ಕೆ ಮುಂದಿನ ವಾರದಿಂದ ಚಿತ್ರೀಕರಣ ಶುರುವಾಗಲಿದೆ.

ಕನ್ನಡಪ್ರಭ ಸಿನಿವಾರ್ತೆ

ಭಾರತೀಯ ಚಿತ್ರರಂಗದ ಬಹು ನಿರೀಕ್ಷಿತ ‘ರಾಮಾಯಣ’ ಚಿತ್ರದ ಶೂಟಿಂಗ್‌ನಲ್ಲಿ ಮುಂದಿನ ವಾರದಿಂದ ಯಶ್‌ ಭಾಗವಹಿಸುತ್ತಿದ್ದಾರೆ. ಮುಂಬೈನಲ್ಲಿ ಮುಂದಿನ ವಾರ ಚಿತ್ರಕ್ಕೆ ಅದ್ದೂರಿಯಾಗಿ ಚಿತ್ರೀಕರಣ ಆರಂಭವಾಗಲಿದ್ದು, ‘ಟಾಕ್ಸಿಕ್‌’ ಚಿತ್ರದ ಕೆಲಸಗಳ ನಡುವೆಯೇ ಯಶ್‌ ‘ರಾಮಾಯಣ 1’ ಚಿತ್ರೀಕರಣದಲ್ಲಿ ಪಾಲ್ಗೊಳ್ಳಲಿದ್ದಾರೆ. ಅದಕ್ಕೂ ಮುನ್ನ ಯಶ್‌ ಮಧ್ಯಪ್ರದೇಶದ ಉಜ್ಜಯಿನಿಯಲ್ಲಿರುವ ವಿಶ್ವವಿಖ್ಯಾತ ಶ್ರೀ ಮಹಾಕಾಳೇಶ್ವರ ದೇವಸ್ಥಾನಕ್ಕೆ ಭೇಟಿ ನೀಡಿ ವಿಶೇಷ ಪೂಜೆ ಸಲ್ಲಿಸಿದ್ದಾರೆ.

ಪುರಾಣಗಳ ಪ್ರಕಾರ ರಾವಣನು ಶಿವನ ಪರಮ ಭಕ್ತ ಮತ್ತು ಆರಾಧಕ. ಶಿವ ಭಕ್ತನಾಗಿರುವ ರಾವಣನಿಗೂ ಉಜ್ಜಯಿನಿಯ ಶ್ರೀ ಮಹಾಕಾಲೇಶ್ವರನಿಗೂ ಸಂಬಂಧವಿದೆ ಎಂಬುದು ಪ್ರತೀತಿ. ರಾವಣನು ಉಜ್ಜಯಿನಿಯ ಶ್ರೀ ಮಹಾಕಾಲೇಶ್ವರ ಲಿಂಗವನ್ನು ಲಂಕೆಗೆ ಕೊಂಡೊಯ್ಯಲು ಯತ್ನಿಸಿದ್ದ ಎಂಬ ಕತೆ ಇದೆ. ಅದಕ್ಕೆ ಪೂರಕವಾಗಿ ರಾವಣ ಪಾತ್ರ ಮಾಡುತ್ತಿರುವ ನಟ ಯಶ್‌ ಅವರು ಮಹಾಕಾಲೇಶ್ವರ ದೇವಸ್ಥಾನಕ್ಕೆ ಭೇಟಿ ನೀಡಿದ್ದಾರೆ ಎನ್ನಲಾಗಿದೆ.

ವಿಶೇಷ ಎಂದರೆ ಮಹಾಕಾಲೇಶ್ವರ ದೇವಸ್ಥಾನದ ಅತ್ಯಂತ ಪವಿತ್ರ ಆಚರಣೆಗಳಲ್ಲಿ ಒಂದಾಗಿರುವ ಬೆಳಗಿನ ಜಾವದ ಭಸ್ಮಾರತಿಯಲ್ಲಿ ಯಶ್ ಭಾಗವಹಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ. ಬೆಳಗಿನ ಜಾವ ಬ್ರಹ್ಮ ಮುಹೂರ್ತದ ಸಮಯದಲ್ಲಿ ನಡೆಯುವ ಈ ಪೂಜೆಯಲ್ಲಿ ಯಶ್‌ ಸರಳವಾಗಿ ಸಾಂಪ್ರದಾಯಿಕ ಉಡುಗೆ ತೊಟ್ಟು ಪಾಲ್ಗೊಂಡಿದ್ದರು.

ಈ ಸಂದರ್ಭ, ‘ಶ್ರೀ ಮಹಾಕಾಲೇಶ್ವರ ದೇವಸ್ಥಾನಕ್ಕೆ ಭೇಟಿ ನೀಡಿದ್ದಕ್ಕೆ ಸಂತೋಷವಾಗಿದೆ. ನಾನು ಕೂಡ ಶಿವನ ದೊಡ್ಡ ಭಕ್ತ. ನಮ್ಮ ಮನೆ ದೇವರು ಕೂಡ ಶಿವ. ಹೀಗಾಗಿ ಮಹಾಶಿವನ ಆಶೀರ್ವಾದ ಪಡೆಯಲು ಇಲ್ಲಿಗೆ ಬಂದಿದ್ದೇನೆ’ ಎಂದಿದ್ದಾರೆ ಯಶ್.

ತಾವು ನಟಿಸುವ ಚಿತ್ರಗಳ ಶೂಟಿಂಗ್‌ನಲ್ಲಿ ಪಾಲ್ಗೊಳ್ಳುವ ಮೊದಲು ಹೀಗೆ ದೇವಸ್ಥಾನಗಳಿಗೆ ಹೋಗಿ ವಿಶೇಷ ಪೂಜೆ ಸಲ್ಲಿಸುವ ತಮ್ಮ ಪರಂಪರೆಯನ್ನು ಯಶ್‌ ‘ರಾಮಾಯಣ’ ಚಿತ್ರಕ್ಕೂ ಮುಂದುವರಿಸಿದ್ದಾರೆ. ಈ ಚಿತ್ರದಲ್ಲಿ ಯಶ್ ನಟಿಸುವ ಜೊತೆಗೆ ನಮಿತ್ ಮಲ್ಹೋತ್ರಾ ಜತೆ ಸೇರಿ ನಿರ್ಮಾಣದಲ್ಲೂ ಪಾಲುದಾರರಾಗಿದ್ದಾರೆ.

ನಿತೇಶ್ ತಿವಾರಿ ನಿರ್ದೇಶನದ ಈ ಚಿತ್ರದಲ್ಲಿ ರಣಬೀರ್‌ ಕಪೂರ್‌ ರಾಮನಾಗಿ, ಸಾಯಿ ಪಲ್ಲವಿ ಸೀತೆಯಾಗಿ ಹಾಗೂ ಸನ್ನಿ ಡಿಯೋಲ್‌ ಹನುಮಂತನಾಗಿ ನಟಿಸುತ್ತಿದ್ದಾರೆ. ಏಪ್ರಿಲ್‌ ಕೊನೆಯ ವಾರದಿಂದ ಯಶ್‌ ಪಾತ್ರದ ದೃಶ್ಯಗಳ ಚಿತ್ರೀಕರಣ ನಡೆಯಲಿದೆ. ಇದಕ್ಕಾಗಿ ಮುಂಬೈನಲ್ಲಿ ವಿಶೇಷ ಸೆಟ್‌ ಕೂಡ ನಿರ್ಮಿಸಲಾಗಿದ್ದು, ರಾವಣನ ವೈಭವವನ್ನು ಬಿಂಬಿಸುವ ಸೆಟ್‌ ಇದಾಗಿದೆ. ಎರಡು ಭಾಗಗಳಲ್ಲಿ ಮೂಡಿಬರಲಿರುವ ಈ ಚಿತ್ರದ ಮೊದಲ ಭಾಗವು 2026ರ ದೀಪಾವಳಿ ಹಬ್ಬದ ಅಂಗವಾಗಿ ಬಿಡುಗಡೆಯಾಗಲಿದ್ದು, ಎರಡನೇ ಭಾಗವು 2027ರಲ್ಲಿ ತೆರೆಗೆ ಬರಲಿದೆ.