ಸಾರಾಂಶ
ಕನ್ನಡಪ್ರಭ ವಾರ್ತೆ ಬೆಂಗಳೂರು‘ನನಗೆ ಬೇರೆ ಬೇರೆ ಸಿನಿಮಾಗಳಿಂದ ಆಫರ್‌ಗಳು ಬರುತ್ತಿರುವುದು ನಿಜ. ಅದರರ್ಥ ಸಿನಿಮಾ ಒಪ್ಪಿಕೊಂಡಿದ್ದೇನೆ ಅಂತಲ್ಲ. ಒಂದು ವೇಳೆ ನಾನು ಯಾವುದಾದರೂ ಸಿನಿಮಾಕ್ಕೆ ಸೈನ್ ಮಾಡಿದರೆ ಖುದ್ದಾಗಿ ನಾನೇ ಹೇಳುತ್ತೇನೆ. ಟಾಕ್ಸಿಕ್ ಯಾವುದೇ ರಾಜಿಯಿಲ್ಲದೇ ಮಾಡುತ್ತಿರುವ ಸಿನಿಮಾ. ಅದಕ್ಕೆ ದೊಡ್ಡ ಮಟ್ಟದ ಪ್ಲಾನ್ ನಡೆಯುತ್ತಿದೆ’ ಎಂದು ರಾಕಿಂಗ್ ಸ್ಟಾರ್ ಯಶ್ ಹೇಳಿದ್ದಾರೆ.ಜಿಮ್ ತರಬೇತುದಾರ ಪಾನಿಪುರಿ ಕಿಟ್ಟಿ ಅವರ ‘ಕಿಟ್ಟೀಸ್ ಮಸಲ್ ಪ್ಲಾನೆಟ್’ ಜಿಮ್ ಅನ್ನು ಉದ್ಘಾಟಿಸಿ ಯಶ್ ಮಾತನಾಡುತ್ತಿದ್ದರು.‘ಕನ್ನಡ ಚಿತ್ರರಂಗದ ಬೆಳವಣಿಗೆಗೆ ನಾನು ಸಿದ್ಧನಿದ್ದೇನೆ. ಆದರೆ ಅದು ನನ್ನೊಬ್ಬನಿಂದ ಮಾತ್ರ ಆಗುವ ಕೆಲಸವಲ್ಲ. ನನ್ನ ಓಟಕ್ಕೆ ಸರಿಯಾಗಿ ಉಳಿದವರೂ ಬಂದರೆ ನಾವು ಜೊತೆಯಾಗಿ ಇಂಡಸ್ಟ್ರಿಯನ್ನು ಮುನ್ನಡೆಸಬಹುದು. ಬದಲಾಗಿ ಎಲ್ಲರನ್ನೂ ಹೆಗಲ ಮೇಲೆ ಹೊತ್ತುಕೊಂಡು ಹೋಗಬೇಕು ಅಂದರೆ ಕಷ್ಟ. ರಾಷ್ಟ್ರಮಟ್ಟದಲ್ಲಿ ಕನ್ನಡ ಚಿತ್ರರಂಗವನ್ನು ಹಿಂದೆ ಹೇಗೆ ನೋಡುತ್ತಿದ್ದರು, ಈಗ ಹೇಗೆ ನೋಡುತ್ತಿದ್ದಾರೆ ಅನ್ನುವುದನ್ನೂ ಗಮನಿಸಬೇಕಿದೆ’ ಎಂದೂ ಯಶ್ ಹೇಳಿದ್ದಾರೆ.‘ನಮ್ಮ ಚಿತ್ರರಂಗ ಹೊಸ ಪ್ರತಿಭೆಗಳಿಗೆ ಪ್ರೋತ್ಸಾಹ ನೀಡಬೇಕು. ಎಲ್ಲರಿಗೂ ಮಹತ್ವ ನೀಡಬೇಕು. ಅದದೇ ಮೂರ್ನಾಲ್ಕು ಜನ ಹೀರೋಗಳನ್ನಷ್ಟೇ ನೋಡುತ್ತಾ ಕುಳಿತರೆ ಪ್ರಯೋಜನವಿಲ್ಲ. ನಮ್ಮ ಚಿತ್ರರಂಗ ನಿರ್ದೇಶಕರನ್ನು ಹೇಗೆ ನೋಡುತ್ತಿದೆ, ಅವರು ಅಪ್‌ಗ್ರೇಡ್ ಆಗೋದಕ್ಕೆ ಏನು ಅವಕಾಶ ಕೊಡುತ್ತಿದೆ ಅನ್ನುವುದನ್ನು ನಾವು ನೋಡಬೇಕು. ಪ್ರಶಾಂತ್ ನೀಲ್ ಉಗ್ರಂ ಸಿನಿಮಾ ಮಾಡಿದಾಗ ಅದರ ಸ್ಯಾಟಲೈಟ್ ರೈಟ್ಸ್ ಯಾರೂ ತಗೊಳ್ಳಲಿಕ್ಕೆ ಮುಂದೆ ಬರಲಿಲ್ಲ. ನೀಲ್ ಬಹಳ ಕಷ್ಟಪಡಬೇಕಾಗಿ ಬಂತು. ಕೆಜಿಎಫ್ ಬಂದ ಮೇಲೆ ಜಗತ್ತಿಗೆ ಅವರ ಬೆಲೆ ಗೊತ್ತಾಯಿತು’ ಎಂದು ಹೇಳಿದ ಯಶ್, ‘ರಾಜಕೀಯಕ್ಕೆ ಬರುವುದಿಲ್ಲ. ನನ್ನ ಗುರಿ ಬೇರೆಯೇ ಇದೆ’ ಎಂಬ ಮಾತನ್ನೂ ಈ ವೇಳೆ ಪುನರುಚ್ಚರಿಸಿದರು.ಕಲಾವಿದರಾದ ನೆನಪಿರಲಿ ಪ್ರೇಮ್, ಅಮೃತಾ ಪ್ರೇಮ್, ಅಜಯ್ ರಾವ್, ಶ್ರೀ ಮಹಾದೇವ್ ಮೊದಲಾದವರು ಈ ವೇಳೆ ಹಾಜರಿದ್ದರು.(ಫೋಟೋ - ಬೆಂಗಳೂರು ಫೋಲ್ಡರ್- ಯಶ್ ಫೈಲ್‌ನೇಮ್)