ಜಾತಿ ಜಾತಿಗಳು ಒಟ್ಟಾಗಿದ್ದರೆ ಸುರಕ್ಷಿತವಾಗಿರುತ್ತೀರಿ : ಪ್ರಧಾನಿ ನರೇಂದ್ರ ಮೋದಿ

| Published : Nov 11 2024, 12:45 AM IST / Updated: Nov 11 2024, 05:07 AM IST

pm modi

ಸಾರಾಂಶ

ಉಪಪಂಗಡಗಳನ್ನು ಪರಸ್ಪರ ಎತ್ತಿ ಕಟ್ಟುವ ಮೂಲಕ ಕಾಂಗ್ರೆಸ್- ಜೆಎಂಎಂ ಮಿತ್ರ ಕೂಟ ಜಾರ್ಖಂಡ್‌ನಲ್ಲಿ ಒಬಿಸಿಗಳನ್ನು ಒಡೆಯಲು ಯತ್ನಿಸುತ್ತಿದೆ. ಹೀಗಾಗಿ ಎಲ್ಲರೂ ಒಟ್ಟಾಗಿದ್ದರೆ ಸುರಕ್ಷಿತವಾಗಿರುತ್ತೀರಿ ಎಂದು ಪ್ರಧಾನಿ ನರೇಂದ್ರ ಮೋದಿ ಅವರು ಕರೆ ನೀಡಿದ್ದಾರೆ.

 ಬೊಕಾರೋ : ಉಪಪಂಗಡಗಳನ್ನು ಪರಸ್ಪರ ಎತ್ತಿ ಕಟ್ಟುವ ಮೂಲಕ ಕಾಂಗ್ರೆಸ್- ಜೆಎಂಎಂ ಮಿತ್ರ ಕೂಟ ಜಾರ್ಖಂಡ್‌ನಲ್ಲಿ ಒಬಿಸಿಗಳನ್ನು ಒಡೆಯಲು ಯತ್ನಿಸುತ್ತಿದೆ. ಹೀಗಾಗಿ ಎಲ್ಲರೂ ಒಟ್ಟಾಗಿದ್ದರೆ ಸುರಕ್ಷಿತವಾಗಿರುತ್ತೀರಿ ಎಂದು ಪ್ರಧಾನಿ ನರೇಂದ್ರ ಮೋದಿ ಅವರು ಕರೆ ನೀಡಿದ್ದಾರೆ.

ಮಹಾರಾಷ್ಟ್ರ ವಿಧಾನಸಭೆ ಚುನಾವಣೆ ಪ್ರಚಾರದ ವೇಳೆ ‘ಏಕ್‌ ಹೀ ತೋ ಸೇಫ್‌ ಹೈ’ (ಒಗ್ಗಟ್ಟಿಂದ ಇದ್ದರೆ ಸುರಕ್ಷಿತ) ಎಂಬ ಮಂತ್ರ ಬೋಧಿಸಿದ್ದ ಮೋದಿ ಅವರು ಜಾರ್ಖಂಡ್‌ ಚುನಾವಣಾ ಪ್ರಚಾರದ ವೇಳೆ ಭಾನುವಾರ ‘ಏಕ್‌ ರಹೋಗೆ ತೋ ಸೇಫ್‌ ರಹೋಗೆ’ (ಒಟ್ಟಾಗಿದ್ದರೆ ಸುರಕ್ಷಿತವಾಗಿರುತ್ತೀರಿ) ಎಂಬ ಹೇಳಿದರು.

ಕಾಂಗ್ರೆಸ್‌- ಜೆಎಂಎಂ ಮಿತ್ರಕೂಟದ ದುಷ್ಟ ಯೋಜನೆ ಹಾಗೂ ಸಂಚುಗಳ ಬಗ್ಗೆ ಎಚ್ಚರದಿಂದ ಇರಿ. ಅಧಿಕಾರ ಕಸಿಯಲು ಅವರು ಯಾವುದೇ ಹಂತಕ್ಕೆ ಬೇಕಾದರೂ ಹೋಗುತ್ತಾರೆ. ಸ್ವಾತಂತ್ರ್ಯ ಬಂದಾಗಿನಿಂದಲೂ ಎಸ್ಸಿ, ಎಸ್ಟಿ ಹಾಗೂ ಒಬಿಸಿ ಒಗ್ಗಟ್ಟಿಗೆ ಕಾಂಗ್ರೆಸ್‌ ವಿರುದ್ಧವಾಗಿತ್ತು. ಒಗ್ಗಟ್ಟು ಮೂಡುವವರೆಗೂ ಕಾಂಗ್ರೆಸ್‌ ಕೇಂದ್ರದಲ್ಲಿ ಸರ್ಕಾರ ರಚಿಸಿ, ದೇಶವನ್ನು ಲೂಟಿ ಹೊಡೆಯಿತು ಎಂದು ಬೊಕಾರೋದಲ್ಲಿ ನಡೆದ ಬಿಜೆಪಿ ರ್‍ಯಾಲಿಯಲ್ಲಿ ಟೀಕಾ ಪ್ರಹಾರ ನಡೆಸಿದರು.

ಜಮ್ಮು-ಕಾಶ್ಮೀರದಲ್ಲಿ ಕಾಂಗ್ರೆಸ್‌ ಹಾಗೂ ಅದರ ಮಿತ್ರಪಕ್ಷಗಳು ಸಂವಿಧಾನದ 370ನೇ ವಿಧಿಯನ್ನು ಮರುತರಲು ಬಯಸುತ್ತಿವೆ. ತನ್ಮೂಲಕ ಭಯೋತ್ಪಾದನೆಯ ಬೆಂಕಿಯ ಬಿಸಿಯನ್ನು ನಮ್ಮ ಯೋಧರು ಎದುರಿಸುವಂತಾಗಲಿ ಎಂದು ಬಯಸುತ್ತಿವೆ. 

370ನೇ ವಿಧಿಯನ್ನು ಜಮ್ಮು-ಕಾಶ್ಮೀರದಲ್ಲಿ ಮೋದಿ ಹೂತಿದ್ದರಿಂದಾಗಿ ಏಳು ದಶಕಗಳ ಬಳಿಕ ಅಂಬೇಡ್ಕರ್‌ ಸಂವಿಧಾನ ಆ ರಾಜ್ಯದಲ್ಲಿ ಜಾರಿಗೆ ಬಂದಿದೆ. ಜಮ್ಮು-ಕಾಶ್ಮೀರ ಮುಖ್ಯಮಂತ್ರಿಯೊಬ್ಬರು ಮೊದಲ ಬಾರಿಗೆ ಸಂವಿಧಾನದ ಹೆಸರಿನಲ್ಲಿ ಶಪಥ ಮಾಡುತ್ತಾರೆ ಎಂದು ಮೋದಿ ಹೇಳಿದರು.