ಸಾರಾಂಶ
ನವದೆಹಲಿ: ‘ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣವಾಗಬೇಕು ಎಂಬುದು ದೈವೇಚ್ಛೆಯಾಗಿತ್ತು ಮತ್ತು ಇದಕ್ಕಾಗಿ (ಮಂದಿರ ನಿರ್ಮಾಣ ಹಾಗೂ ಪ್ರಾಣಪ್ರತಿಷ್ಠೆಗಾಗಿ) ಪ್ರಧಾನಿ ನರೇಂದ್ರ ಮೋದಿ ಅವರನ್ನು ದೇವರು ಆಯ್ಕೆ ಮಾಡಿಕೊಂಡಿದ್ದಾನೆ’ ಎಂದು ಬಿಜೆಪಿ ಹಿರಿಯ ನಾಯಕ ಹಾಗೂ 90ರ ದಶಕಾರಂಭದಲ್ಲಿ ರಾಮ ರಥಯಾತ್ರೆಯ ಮೂಲಕ ಬಿಜೆಪಿಯನ್ನು ಜನಮಾನಸದಲ್ಲಿ ಬೇರೂರುವಂತೆ ಮಾಡಿದ ಎಲ್.ಕೆ.ಅಡ್ವಾಣಿ ಹೇಳಿದ್ದಾರೆ.76 ವರ್ಷದ ಇತಿಹಾಸ ಹೊಂದಿರುವ ಹಿಂದಿ ನಿಯತಕಾಲಿಕೆ ‘ರಾಷ್ಟ್ರಧರ್ಮ’ವು ರಾಮಮಂದಿರ ಉದ್ಘಾಟನೆಯ ಹಿನ್ನೆಲೆಯಲ್ಲಿ ವಿಶೇಷ ಆವೃತ್ತಿ ಹೊರತರುತ್ತಿದ್ದು, ಜ.16ರಂದು ಪ್ರಕಟವಾಗಲಿದೆ. ಅದರಲ್ಲಿ ಬರೆದಿರುವ ಲೇಖನದಲ್ಲಿ ಇಂಥ ಅನೇಕ ಕುತೂಹಲದ ವಿಷಯಗಳನ್ನು ಅಡ್ವಾಣಿ ಅವರು ಉಲ್ಲೇಖಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ.
‘ರಾಮ್ ಮಂದಿರ್ ನಿರ್ಮಾಣ್, ಏಕ್ ದಿವ್ಯ ಸ್ವಪ್ನ ಕಿ ಪೂರ್ತಿ’ ಹೆಸರಿನ ಲೇಖನ ಇದಾಗಿದೆ. ಈ ಲೇಖನದಲ್ಲಿ 33 ವರ್ಷದ ಹಿಂದಿನ ರಥಯಾತ್ರೆ ಮತ್ತು ಅಂದಿನ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರ ಬಗ್ಗೆ ಅಡ್ವಾಣಿ ಮೆಲುಕು ಹಾಕಿದ್ದಾರೆ.ರಾಮನಿಂದಲೇ ಮೋದಿ ಆಯ್ಕೆ:‘ಈಗ ರಥಯಾತ್ರೆಗ 33 ವರ್ಷಗಳಾಗಿವೆ. 1990ರಲ್ಲಿ ನಾವು ಇದನ್ನು ಆರಂಭಿಸಿದಾಗ ಇದೊಂದು ರಾಷ್ಟ್ರೀಯ ಚಳವಳಿಯಾಗಬಹುದು ಎಂದು ನಾವು ಊಹಿಸಿರಲಿಲ್ಲ. ಅದೇ ರೀತಿ ಅವರು (ನರೇಂದ್ರ ಮೋದಿ) ಆ ಸಮಯದಲ್ಲಿ ಪ್ರಸಿದ್ಧರಾಗಿರಲಿಲ್ಲ. ಆದರೆ ರಾಮಮಂದಿರ ನಿರ್ಮಾಣಕ್ಕೆ ತನ್ನ ಭಕ್ತನಾದ ಅವರನ್ನು (ಮೋದಿ) ರಾಮ ಆಯ್ಕೆ ಮಾಡಿಕೊಂಡ. ಆ ದಿನವೇ ನನಗೆ ಒಂದು ದಿನ ಭವ್ಯ ರಾಮಮಂದಿರ ನಿರ್ಮಾಣವಾಗಲಿದೆ. ವಿಧಿ ಈಗಾಗಲೇ ಮಂದಿರ ನಿರ್ಮಾಣ ಆಗುವುದನ್ನು ಬರೆದಿದೆ ಎಂದು ನನಗೆ ಎನ್ನಿಸಿತ್ತು. ಈಗ ಆ ಸಮಯ ಬಂದಿದೆ’ ಎಂದು ಅಡ್ವಾಣಿ ಹೇಳಿದ್ದಾರೆ.ನಾನು ರಾಮರಥ ಯಾತ್ರೆಯ ಸಾರಥಿ ಮಾತ್ರ:
1999ರ ಸೆ.22ರಂದು ಗುಜರಾತ್‌ನ ಸೋಮನಾಥದಲ್ಲಿ ಆರಂಭವಾದ ರಾಮರಥಯಾತ್ರೆಯಲ್ಲಿ ನಾನು ಸಾರಥಿ ಮಾತ್ರ. ಆದರೆ ಈ ರಥ ಎಲ್ಲಿಗೆ ತಲುಪಬೇಕು ಎಂಬುದನ್ನು ದೇವರು ನಿರ್ಧರಿಸಿದ್ದ. ರಥಯಾತ್ರೆ ಆರಂಭವಾದ ಕೆಲವು ದಿನಗಳಲ್ಲೇ ಇದು ನನಗೆ ಅರಿವಾಯಿತು. ರಾಮಮಂದಿರ ನಿರ್ಮಾಣವಾಗಬೇಕು ಎಂದು ದೇವರು ನಿರ್ಧರಿಸಿದ್ದ, ನಾನು ಸಾರಥಿಯಾಗಿ ರಥವನ್ನು ಕೊಂಡೊಯ್ದೆ ಅಷ್ಟೇ ಎಂದು ಅವರು ಹೇಳಿದ್ದಾರೆ. ‘ರಾಮಮಂದಿರದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ರಾಮಲಲ್ಲಾ ವಿಗ್ರಹವನ್ನು ಪ್ರತಿಷ್ಠಾಪನೆ ಮಾಡುವ ಸಮಯದಲ್ಲಿ ಅವರು ದೇಶದ ಪ್ರತಿಯೊಬ್ಬ ಪ್ರಜೆಯನ್ನು ಪ್ರತಿನಿಧಿಸುತ್ತಾರೆ. ಹಾಗೆಯೇ ಎಲ್ಲಾ ಭಾರತೀಯರು ರಾಮನ ಆದರ್ಶಗಳನ್ನು ಅಳವಡಿಸಿಕೊಳ್ಳುವಂತೆ ರಾಮನ ದೇವಸ್ಥಾನ ಎಲ್ಲರಿಗೂ ಸ್ಪೂರ್ತಿ ನೀಡಲಿ ಎಂದು ನಾನು ಬಯಸುತ್ತೇನೆ’ ಎಂದು ಅವರು ಆಶಿಸಿದ್ದಾರೆ.ದೇಶದ ಕನಸು ಈಡೇರಲಿದೆ:‘ರಥಯಾತ್ರೆಯ ಸಮಯದಲ್ಲಿ ಹಲವು ವಿಷಯಗಳು ನನ್ನ ಮೇಲೆ ಪ್ರಭಾವ ಬೀರಿದವು. ಕುಗ್ರಾಮಗಳಿಂದ ಬಂದ ಹೆಸರೇ ಗೊತ್ತಿಲ್ಲದ ವ್ಯಕ್ತಿಗಳು ನಮಗೆ ಬೆಂಬಲ ಸೂಚಿಸುತ್ತಿದ್ದರು. ಅವರು ನಮ್ಮನ್ನು ಭಾವುಕರನ್ನಾಗಿಸಿದರು. ಅವರೆಲ್ಲರೂ ರಾಮರಥಕ್ಕೆ ನಮಸ್ಕರಿಸಿ, ಜೈ ಶ್ರೀರಾಂ ಎಂದು ಘೋಷಣೆ ಕೂಗುತ್ತಿದ್ದರು. ಇದು ದೇಶದ ಬಹುತೇಕ ಜನರು ರಾಮಮಂದಿರ ನಿರ್ಮಾಣದ ಕನಸು ಕಾಣುತ್ತಿದ್ದಾರೆ ಎಂಬುದನ್ನು ನಮಗೆ ಅರ್ಥ ಮಾಡಿಸಿತು. ಜ.22ರಂದು ರಾಮಲಲ್ಲಾನ ಪ್ರತಿಷ್ಠಾಪನೆಯೊಂದಿಗೆ ಈ ಕನಸು ನನಸಾಗುತ್ತದೆ’ ಎಂದು ಅವರು ಹೇಳಿದ್ದಾರೆ ಎಂದು ಮೂಲಗಳು ತಿಳಿಸಿವೆ. ಅಲ್ಲದೇ ಮಂದಿರ ನಿರ್ಮಾಣಕ್ಕೆ ಹೆಚ್ಚಿನ ಮುತುವರ್ಜಿ ವಹಿಸಿದ್ದಕ್ಕೆ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಅಡ್ವಾಣಿ ಈ ಲೇಖನದಲ್ಲಿ ಅಭಿನಂದನೆಗಳನ್ನು ಸಲ್ಲಿಸಿದ್ದಾರೆ.ಈ ಲೇಖನವುಳ್ಳ ನಿಯತಕಾಲಿಕೆಯನ್ನು ಪ್ರತಿಷ್ಠಾಪನೆ ದಿನಾಚರಣೆ ವೇಳೆ ಅಯೋಧ್ಯೆಯಲ್ಲಿ ಹಂಚಲಾಗುವುದು ಎಂದು ಅವು ತಿಳಿಸಿವೆ. ವಿಶ್ವ ಹಿಂದೂ ಪರಿಷತ್ ಪ್ರಕಾರ, 96 ವರ್ಷದ ಅಡ್ವಾಣಿ ಅವರು ಅಯೋಧ್ಯೆಗೆ ಜ.22ರಂದು ಪ್ರಾಣಪ್ರತಿಷ್ಠಾಪನೆಗೆ ಆಗಮಿಸಲಿದ್ದಾರೆ.