ಭಾರತೀಯ ಪರಾಗ್ ಬಳಿಕ ಎಕ್ಸ್ ಸಿಇಒ ಹುದ್ದೆ ಏರಿದ್ದ ಲಿಂಡಾ ದಿಢೀರ್‌ ಗುಡ್‌ಬೈ

| N/A | Published : Jul 11 2025, 12:32 AM IST / Updated: Jul 11 2025, 05:21 AM IST

ಭಾರತೀಯ ಪರಾಗ್ ಬಳಿಕ ಎಕ್ಸ್ ಸಿಇಒ ಹುದ್ದೆ ಏರಿದ್ದ ಲಿಂಡಾ ದಿಢೀರ್‌ ಗುಡ್‌ಬೈ
Share this Article
  • FB
  • TW
  • Linkdin
  • Email

ಸಾರಾಂಶ

ವಿಶ್ವದ ನಂ.1 ಶ್ರೀಮಂತ ಎಲಾನ್ ಮಸ್ಕ್ ಒಡೆತನದ ‘ಎಕ್ಸ್’ ಸಂಸ್ಥೆಯ ಸಿಇಒ ಹುದ್ದೆಗೆ ಲಿಂಡಾ ಯಾಕರಿನೋ ರಾಜೀನಾಮೆ ನೀಡಿದ್ದಾರೆ.

ಸ್ಯಾನ್ ಫ್ರಾನ್ಸಿಸ್ಕೊ: ವಿಶ್ವದ ನಂ.1 ಶ್ರೀಮಂತ ಎಲಾನ್ ಮಸ್ಕ್ ಒಡೆತನದ ‘ಎಕ್ಸ್’ ಸಂಸ್ಥೆಯ ಸಿಇಒ ಹುದ್ದೆಗೆ ಲಿಂಡಾ ಯಾಕರಿನೋ ರಾಜೀನಾಮೆ ನೀಡಿದ್ದಾರೆ. 2022ರಲ್ಲಿ ಮಸ್ಕ್‌, ಟ್ವೀಟರ್‌ ಅನ್ನು ಖರೀದಿಸಿದ ಕೆಲವೇ ದಿನಗಳಲ್ಲಿ ಆಗ ಕಂಪನಿಯ ಸಿಇಒ ಆಗಿದ್ದ ಭಾರತೀಯ ಪರಾಗ್‌ ಅಗರವಾಲ್‌ ಅವರನ್ನು ಕಿತ್ತುಹಾಕಿ ಅವರ ಸ್ಥಾನಕ್ಕೆ ಲಿಂಡಾರನ್ನು ನೇಮಕ ಮಾಡಿದ್ದರು. ಆದರೆ ಎರಡನೇ ವರ್ಷಗಳಲ್ಲಿ ಲಿಂಡಾ ಹುದ್ದೆ ತೊರೆದಿದ್ದಾರೆ.

ಮುಟ್ಟು ಪರೀಕ್ಷೆಗೆ ಬಟ್ಟೆ ಬಿಚ್ಚಿಸಿದ ಪ್ರಾಂಶುಪಾಲ, ಶಾಲಾ ಸಿಬ್ಬಂದಿ ಬಂಧನ

ಥಾಣೆ: ಶಾಲೆಯ ಶೌಚಾಲಯದಲ್ಲಿ ರಕ್ತದ ಕಲೆ ಕಂಡಿದ್ದಕ್ಕೆ ವಿದ್ಯಾರ್ಥಿಗಳು ಋತುಸ್ರಾವ ಆಗಿದ್ದಾರೆ ಎಂದು ಭಾವಿಸಿ ಪರೀಕ್ಷೆಗಾಗಿ ಬಾಲಕಿಯರ ಬಟ್ಟೆ ಬಿಚ್ಚಿಸಿದ ಅಮಾನವೀಯ ಘಟನೆ ಮಹಾರಾಷ್ಟ್ರದ ಥಾಣೆ ಜಿಲ್ಲೆಯಲ್ಲಿ ನಡೆದಿದೆ. ಈ ಸಂಬಂಧ ಪ್ರಿನ್ಸಿಪಾಲ್ ಮತ್ತು ಸಿಬ್ಬಂದಿಯನ್ನು ಪೊಲೀಸರು ಬಂಧಿಸಿದ್ದಾರೆ. ಇಲ್ಲಿನ ಶಹಾಪುರ ಶಾಲೆಯಲ್ಲಿ ಈ ಘಟನೆ ನಡೆದಿದೆ. 5 -10 ತರಗತಿಯ ವಿದ್ಯಾರ್ಥಿಗಳು ಕಲಿಯುವ ಶಾಲೆಯ ಶೌಚಾಲಯದಲ್ಲಿ ರಕ್ತದ ಕಲೆ ಕಂಡು ಬಂದಿದೆ. ಬಳಿಕ ಶಾಲಾ ಸಿಬ್ಬಂದಿ ಹುಡುಗಿಯರನ್ನು ಸಭಾಂಗಣಕ್ಕೆ ಕರೆದೊಯ್ದು ಮಹಿಳಾ ಸಿಬ್ಬಂದಿ ಮೂಲಕ ಬಟ್ಟೆ ಬಿಚ್ಚಿ ಪರೀಕ್ಷಿಸಿದ್ದರು. ಈ ವಿಷಯ ಭಾರೀ ಆಕ್ರೋಶಕ್ಕೆ ಕಾರಣವಾದ ಬೆನ್ನಲ್ಲೇ ಶಿಸ್ತು ಕ್ರಮ ಕೈಗೊಳ್ಳಲಾಗಿದೆ.

ಶೇಖ್‌ ಹಸೀನಾ ವಿರುದ್ಧ ಸಾಮಾಹಿಕ ಹತ್ಯೆಯ ದೋಷಾರೋಪ ಸಲ್ಲಿಕೆ

ಢಾಕಾ: ಭಾರತದಲ್ಲಿ ಆಶ್ರಯ ಪಡೆದಿರುವ ಬಾಂಗ್ಲಾದೇಶದ ಪದಚ್ಯುತ ಪ್ರಧಾನಿ ಶೇಖ್‌ ಹಸೀನಾ ಅವರ ವಿರುದ್ಧ ಮಾನವೀಯತೆಯ ವಿರುದ್ಧದ ಅಪರಾಧಗಳಿಗೆ ಸಂಬಂಧಿಸಿದಂತೆ ಇದೇ ಮೊದಲ ಬಾರಿಗೆ ಅಧಿಕೃತವಾಗಿ ಬಾಂಗ್ಲಾದ ಅಂತಾರಾಷ್ಟ್ರೀಯ ಅಪರಾಧ ನ್ಯಾಯಮಂಡಳಿಯು ಗುರುವಾರ ದೋಷಾರೋಪಣೆ ಸಲ್ಲಿಸಿದೆ. ತಮ್ಮ ವಿರುದ್ಧ ದಂಗೆಯೆದ್ದ ವಿದ್ಯಾರ್ಥಿಗಳ ಪ್ರತಿಭಟನೆ ತಡೆಯುವ ಭರದಲ್ಲಿ ಅವರನ್ನು ಕೊಲೆಗೈದದ್ದು, ಪ್ರಚೋದನಕಾರಿ ಭಾಷಣ ಮಾಡಿದ, ಸಾಮೂಹಿಕ ಹತ್ಯೆಗೆ ಆದೇಶಿಸಿದ, ಹಿಂಸಾಚಾರ ನಡೆಸಿದ್ದು ಸೇರಿದಂತೆ 5 ಆರೋಪಗಳನ್ನು ಹಸೀನಾ ಮೇಲೆ ಹೊರಿಸಲಾಗಿದೆ. ಆರೋಪ ಸಾಬೀತಾದಲ್ಲಿ, ಅಪರಾಧಿಗಳಿಗೆ ಗಲ್ಲುಶಿಕ್ಷೆಯಾಗುವ ಸಾಧ್ಯತೆಯೂ ಇದೆ.

ಅಫ್ಘಾನಿಸ್ತಾನದಿಂದ ಸೇನೆ ಅಮೆರಿಕ ಹಿಂಪಡೆದ ಸೇನಾ ಮುಖ್ಯಸ್ಥ ಮೂರ್ಖ: ಟ್ರಂಪ್‌

ವಾಷಿಂಗ್ಟನ್‌: ಅಪ್ಘಾನಿಸ್ತಾನದಲ್ಲಿ ಹಿಡಿತ ಸಾಧಿಸಿದ್ದ ಅಮೆರಿಕ ಸೇನೆಯನ್ನು ಜೋ ಬೈಡೆನ್ ಅಧ್ಯಕ್ಷರಾಗಿದ್ದ ಸಂದರ್ಭದಲ್ಲಿ ಹಿಂತೆಗೆದುಕೊಂಡಿರುವ ನಡೆಯನ್ನು ಹಾಲಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಟೀಕಿಸಿದ್ದಾರೆ. ಸಂಪುಟ ಸಭೆಯಲ್ಲಿ ಈ ಕುರಿತು ಮಾತನಾಡಿದ ಟ್ರಂಪ್ ಅಮೆರಿಕದ ಮಿಲಿಟರಿ ಕಮಾಂಡರ್‌ಗಳು ಅದರಲ್ಲಿಯೂ ಜಂಟಿ ಮುಖ್ಯಸ್ಥರಾಗಿದ್ದ ಮಾರ್ಕ್‌ ಮಿಲ್ಲೆ ನಡೆ ಪ್ರಶ್ನಿಸಿದ್ದಾರೆ. ‘ನಮ್ಮ ಬಳಿ ಅಪ್ಘಾನಿಸ್ತಾನವಿತ್ತು. ಆದರೆ ನಾವು ಅದರಿಂದ ಹೊರ ಬಂದೆವು. ಇದು ನಮ್ಮ ದೇಶದ ಇತಿಹಾಸದಲ್ಲಿ ಅದು ಅತ್ಯಂತ ಮುಜುಗರದ ಕ್ಷಣ. ಅಮೆರಿಕ ಸೇನಾ ಮುಖ್ಯಸ್ಥ ಅಪ್ಘನ್ ಬಿಟ್ಟು ಬಂದಿದ್ದು ಸರಿಯಲ್ಲ. ಆತ ಒಬ್ಬ ಮೂರ್ಖ’ ಎಂದಿದ್ದಾರೆ.

ಹರ್ಯಾಣ, ದೆಹಲಿಯಲ್ಲಿ 4.4 ತೀವ್ರತೆ ಭೂಕಂಪ: ಯಾವುದೇ ಹಾನಿ ಇಲ್ಲ

ನವದೆಹಲಿ: ಗುರುವಾರ ಬೆಳಿಗ್ಗೆ ಹರ್ಯಾಣದ ಝಜ್ಜರ್ ಬಳಿ ರಿಕ್ಟರ್ ಮಾಪಕದಲ್ಲಿ 4.4 ತೀವ್ರತೆಯ ಭೂಕಂಪ ಸಂಭವಿಸಿದೆ. ದೆಹಲಿ, ಉತ್ತರ ಪ್ರದೇಶದ ಹಲವು ಪ್ರದೇಶಗಳಲ್ಲಿ ಕಂಪನ ಉಂಟಾಗಿದೆ. ಆದರೆ ಯಾವುದೇ ಹಾನಿ ವರದಿಯಾಗಿಲ್ಲ. ಝಜ್ಜರ್‌ನಿಂದ ಈಶಾನ್ಯಕ್ಕೆ 3 ಕಿ.ಮೀ. ಮತ್ತು ದೆಹಲಿಯಿಂದ ಪಶ್ಚಿಮಕ್ಕೆ 51 ಕಿ.ಮೀ. ದೂರದಲ್ಲಿ ಭೂಕಂಪದ ಕೇಂದ್ರಬಿಂದು ಇತ್ತು. ಬೆಳಿಗ್ಗೆ 9.04ಕ್ಕೆ 10 ಕಿ.ಮೀ. ಆಳದಲ್ಲಿ ಭೂಕಂಪ ಸಂಭವಿಸಿದೆ ಎಂದು ರಾಷ್ಟ್ರೀಯ ಭೂಕಂಪಶಾಸ್ತ್ರ ಕೇಂದ್ರ ತಿಳಿಸಿದೆ. ದೆಹಲಿ, ಗುರುಗ್ರಾಮ, ರೋಹ್ಟಕ್, ಪಾಣಿಪತ್, ಹಿಸ್ಸಾರ್‌, ಮೇರಠ್ ಸೇರಿದಂತೆ ಹಲವು ನಗರಗಳಲ್ಲಿ ಭೂಕಂಪದ ಅನುಭವವಾಗಿದೆ.

Read more Articles on