ಸಾರಾಂಶ
ಕನ್ನಡಪ್ರಭ ವಾರ್ತೆ ಬೆಂಗಳೂರು
ರಾಮಮಂದಿರ ಉದ್ಘಾಟನೆ ವಿಚಾರವಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಸೇರಿದಂತೆ ಕಾಂಗ್ರೆಸ್ ಸಚಿವರು ಮತ್ತು ನಾಯಕರು ಬಿಜೆಪಿ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದು, ಬಿಜೆಪಿಯು ರಾಮಚಂದ್ರನನ್ನು ರಾಜಕೀಯ ವಿಷಯವಾಗಿ ಮಾಡಿಕೊಂಡಿದೆ ಎಂದು ವಾಗ್ದಾಳಿ ನಡೆಸಿದ್ದಾರೆ.
‘ಅಯೋಧ್ಯೆಯಲ್ಲಿ ಜ.22 ರಂದು ನಡೆಯಲಿರುವ ರಾಮಲಲ್ಲಾ ಪ್ರತಿಷ್ಠಾಪನಾ ಕಾರ್ಯಕ್ರಮವನ್ನು ಒಂದು ಪಕ್ಷದ ಕಾರ್ಯಕ್ರಮವಾಗಿ ಮಾಡಿರುವುದರಿಂದ ಸದರಿ ಸಮಾರಂಭದಲ್ಲಿ ಭಾಗವಹಿಸದಿರುವ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಮಾಜಿ ಅಧ್ಯಕ್ಷೆ ಸೋನಿಯಾ ಗಾಂಧಿ ಮತ್ತು ಲೋಕಸಭೆ ವಿರೋಧ ಪಕ್ಷದ ನಾಯಕ ಅಧೀರ್ ರಂಜನ್ ಚೌಧರಿ ತೀರ್ಮಾನ ಸರಿಯಾಗಿದ್ದು, ಇದಕ್ಕೆ ನನ್ನ ಬೆಂಬಲವಿದೆ’ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ.
ಸಚಿವರಾದ ಡಾ.ಜಿ.ಪರಮೇಶ್ವರ್, ಎಚ್.ಸಿ.ಮಹದೇವಪ್ಪ, ಈಶ್ವರ್ ಖಂಡ್ರೆ ಹಾಗೂ ಮಾಜಿ ಸಚಿವ ಆಂಜನೇಯ ಕೂಡ ಇದಕ್ಕೆ ದನಿಗೂಡಿಸಿ ಬಿಜೆಪಿ ವಿರುದ್ಧ ಕಿಡಿಕಾರಿದ್ದಾರೆ.
ನಾವೂ ರಾಮಭಕ್ತರೇ- ಸಿದ್ದು: ವಿಧಾನಸೌಧದಲ್ಲಿ ಗುರುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಹಾಗೂ ಪತ್ರಿಕೆ ಹೇಳಿಕೆ ಬಿಡುಗಡೆ ಮಾಡಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ, ನಾವ್ಯಾರೂ ಶ್ರೀ ರಾಮಚಂದ್ರನ ವಿರುದ್ಧವಾಗಿಲ್ಲ.
ಬಿಜೆಪಿ ಶ್ರೀ ರಾಮನನ್ನು ರಾಜಕೀಯವಾಗಿ ಬಳಸಿಕೊಳ್ಳಲು ಹೊರಟಿದೆ. ಶ್ರೀ ರಾಮಚಂದ್ರನನ್ನು ದೊಡ್ಡ ರಾಜಕೀಯ ವಿಷಯವಾಗಿ ಮಾಡಿಕೊಂಡಿರುವುದನ್ನು ನಾವು ವಿರೋಧಿಸುತ್ತೇವೆ. ನಾವೆಲ್ಲರೂ ಶ್ರೀ ರಾಮಚಂದ್ರನ ಭಕ್ತರೇ. ಬಿಜೆಪಿ ಮಾತ್ರ ರಾಜಕೀಯವಾಗಿ ರಾಮನನ್ನು ಬಳಸಿಕೊಳ್ಳುತ್ತಿದೆ ಮತ್ತು ಮಾತನಾಡುತ್ತಿದೆ.
ಅದಕ್ಕೆ ಯಾವುದೇ ಔಷಧಿ ಇಲ್ಲ ಎಂದರು.ರಾಮಮಂದಿರ ಉದ್ಘಾಟನೆಯಲ್ಲಿ ಪಾಲ್ಗೊಳ್ಳದಿರುವ ಕಾಂಗ್ರೆಸ್ ಪಕ್ಷದ ನಿರ್ಧಾರದ ಬಗ್ಗೆ ಪ್ರತಿಕ್ರಿಯಿಸಿದ ಸಿದ್ದರಾಮಯ್ಯ, ನಾವು ರಾಮಚಂದ್ರನನ್ನು ಪೂಜಿಸಿ, ಭಜಿಸಿ, ರಾಮಮಂದಿರವನ್ನು ಕಟ್ಟಿದ್ದೇವೆ. ದೇವರ ಹೆಸರಿನಲ್ಲಿ ರಾಜಕೀಯ ಮಾಡುವುದಕ್ಕೆ ಮಾತ್ರ ನಾವು ವಿರೋಧವಾಗಿದ್ದೇವೆ.
ರಾಮಮಂದಿರ ಉದ್ಘಾಟನೆಯಲ್ಲಿ ಪಾಲ್ಗೊಳ್ಳುವ ವಿಚಾರದಲ್ಲಿ ಪಕ್ಷದ ತೀರ್ಮಾನವೇ ನಮ್ಮ ತೀರ್ಮಾನ ಎಂದು ಸ್ಪಷ್ಟಪಡಿಸಿದರು.ರಾಮಮಂದಿರ ಉದ್ಘಾಟನೆ ದಿನದಂದು ರಾಜ್ಯದ ದೇವಸ್ಥಾನಗಳಲ್ಲಿ ಸರ್ಕಾರದ ವತಿಯಿಂದ ವಿಶೇಷ ಪೂಜೆ ಮಾಡುವಂತೆ ನಾನು ಸೂಚಿಸಿಲ್ಲ.
ಬಿಜೆಪಿಯವರು ಅಯೋಧ್ಯೆಗೆ ಏಕೆ ಹೋಗುತ್ತಾರೆ? ಶ್ರೀ ರಾಮಚಂದ್ರ ಇಲ್ಲಿ ಇಲ್ಲವೇ? ನಮ್ಮಲ್ಲಿರುವ ಶ್ರೀ ರಾಮನಿಗೆ ಬೆಲೆ ಇಲ್ಲವೇ? ಹೀಗಾಗಿ ಇಲ್ಲಿನ ದೇವಸ್ಥಾನಗಳಲ್ಲೂ ಪೂಜೆ ನಡೆಯಲಿದೆ ಎಂದು ಹೇಳಿದರು.
ಅಕ್ಕಿ ಕೊಡದವರಿಂದ ಅಕ್ಷತೆ: ಸಮಾಜ ಕಲ್ಯಾಣ ಸಚಿವ ಡಾ. ಎಚ್.ಸಿ.ಮಹದೇವಪ್ಪ ಪ್ರತಿಕ್ರಿಯಿಸಿ, ಹಸಿವು ಮುಕ್ತ ಕರ್ನಾಟಕದ ಉದ್ದೇಶದಿಂದ ಜಾರಿಗೊಳಿಸಲಾದ ಅನ್ನಭಾಗ್ಯ ಯೋಜನೆಗೆ ಹೆಚ್ಚಿನ ಹಣ ನೀಡಿ ಕೊಂಡುಕೊಳ್ಳುತ್ತೇವೆ ಎಂದಾಗಲೂ ಕೇಂದ್ರ ಅಕ್ಕಿ ನೀಡಲಿಲ್ಲ.
ಆದರೆ, ಈಗ ಧರ್ಮದ ಹೆಸರಿನಲ್ಲಿ ಅಕ್ಷತೆಯ ಗಂಟನ್ನು ಮನೆಮನೆಗೆ ಕಳುಹಿಸುತ್ತಿರುವುದನ್ನು ನೋಡಿದರೆ ಬಿಜೆಪಿಯವರಿಗೆ ಧರ್ಮದ ನೈಜ ಜವಾಬ್ದಾರಿಯ ಬಗ್ಗೆ ತಿಳುವಳಿಕೆ ಇಲ್ಲ ಎಂಬುದು ಸ್ಪಷ್ಟವಾಗುತ್ತದೆ ಎಂದರು.
ಬಡವರ ಹಸಿವಿಗೆ ಅನ್ನ ನೀಡುವುದಕ್ಕಿಂತ ದೊಡ್ಡ ಧರ್ಮ ಈ ಜಗತ್ತಿನಲ್ಲಿ ಯಾವುದೂ ಇಲ್ಲ. ಬಡವರ ಹಸಿವಿಗೆ ನೀಡುವ ಅನ್ನದ ವಿಷಯದಲ್ಲೂ ರಾಜಕೀಯ ಮಾಡುವಂತಹ ಅಮಾನವೀಯ ಪ್ರವೃತ್ತಿ ತೋರಿದ ಬಿಜೆಪಿಗರು ಧರ್ಮದ ಕುರಿತಂತೆ ಮಾತನಾಡುತ್ತಿರುವುದನ್ನು ನೋಡಿ ನಗಬೇಕೋ, ಅಳಬೇಕೋ ತಿಳಿಯುತ್ತಿಲ್ಲ ಎಂದು ವ್ಯಂಗ್ಯವಾಡಿದರು.
ಮಾಜಿ ಸಚಿವ ಎಚ್. ಆಂಜನೇಯ ಮಾತನಾಡಿ, ಬಿಜೆಪಿಯವರು ಶ್ರೀ ರಾಮನನ್ನು ಮತ್ತು ರಾಮಮಂದಿರವನ್ನು ಕೊಂಡುಕೊಂಡಂತಾಡುತ್ತಿದ್ದಾರೆ. ಶ್ರೀ ರಾಮಮಂದಿರ ಉದ್ಘಾಟನೆಯನ್ನು ಪಕ್ಷಾತೀತ, ಧರ್ಮಾತೀತವಾಗಿ ಮಾಡಬೇಕಿತ್ತು. ಆದರೆ, ಬಿಜೆಪಿ ಅದಕ್ಕ ರಾಜಕೀಯ ಬಣ್ಣ ಬಳಿದಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಪ್ರಾಣಪ್ರತಿಷ್ಠಾಪನೆಗೆ ಇಬ್ಬರು ಶಂಕರಾಚಾರ್ಯರ ವಿರೋಧ
ಅಯೋಧ್ಯೆಯಲ್ಲಿ ರಾಮಮಂದಿರ ಪ್ರಾಣಪ್ರಾತಿಷ್ಠಾಪನಾ ಕಾರ್ಯಕ್ರಮಕ್ಕೆ ಗೈರಾಗುವುದಾಗಿ ದೇಶದ ನಾಲ್ಕು ದಿಕ್ಕುಗಳಲ್ಲಿರುವ ನಾಲ್ಕು ಶಂಕರಾಚಾರ್ಯರ ಪೀಠದ ಪೀಠಾಧಿಪತಿಗಳ ಪೈಕಿ ಇಬ್ಬರು ಘೋಷಿಸಿದ್ದಾರೆ.
ನಿರ್ಮಾಣ ಮಾಡಲಾಗುತ್ತಿರುವ ರಾಮಮಂದಿರ ಪೂರ್ಣಗೊಳ್ಳುವ ಮೊದಲೇ ದೇವರ ಪ್ರತಿಷ್ಠಾಪನೆ ಮಾಡುತ್ತಿರುವುದು ನಿಯಮಬದ್ಧವಾಗಿಲ್ಲ. ಹೀಗಾಗಿ ಪ್ರಾಣಪ್ರತಿಷ್ಠಾಪನೆ ಕಾರ್ಯಕ್ರಮದಲ್ಲಿ ಭಾಗಿಯಾಗುತ್ತಿಲ್ಲ ಎಂದು ಉತ್ತರಾಖಂಡದ ಬದರಿನಾಥದ ಜ್ಯೋರ್ತಿಮಠದ ಅವಿಮುಕ್ತೇಶ್ವರಾನಂದ ಸರಸ್ವತಿ ಸ್ವಾಮೀಜಿ ಮತ್ತು ಪುರಿಯ ಗೋವರ್ಧನ ಪೀಠದ ನಿಶ್ಚಲಾನಂದ ಸರಸ್ವತಿ ಸ್ವಾಮೀಜಿ ಹೇಳಿದ್ದಾರೆ.
ಈ ಬಗ್ಗೆ ಮಾತನಾಡಿರುವ ಅವಿಮುಕ್ತೇಶ್ವರಾನಂದ ಸರಸ್ವತಿ, ‘ರಾಮಮಂದಿರ ಉದ್ಘಾಟನೆಯನ್ನು ನಾವು ವಿರೋಧಿಸುತ್ತಿಲ್ಲ. ಆದರೆ ರಾಮಮಂದಿರ ಪ್ರತಿಷ್ಠಾಪನೆಯಲ್ಲಿ ಸನಾತನ ಧರ್ಮದ ನಿಯಮಗಳನ್ನು ಮುರಿಯಲಾಗಿದೆ. ಧರ್ಮದ ನಿಯಮಗಳು ಪಾಲನೆಯಾಗುವಂತೆ ನೋಡಿಕೊಳ್ಳುವುದು ಶಂಕರಾಚಾರ್ಯರ ಕರ್ತವ್ಯವಾಗಿದೆ.
ನಿರ್ಮಾಣ ಪೂರ್ಣಗೊಳ್ಳದ ದೇವಸ್ಥಾನದಲ್ಲಿ ದೇವರನ್ನು ಪ್ರತಿಷ್ಠಾಪಿಸುತ್ತಿರುವುದು ನಿಯಮಗಳಿಗೆ ವಿರುದ್ಧವಾಗಿದೆ. ಹೀಗಾಗಿ ನಾವು ಮೌನವಾಗಿ ಉಳಿಯಲು ಸಾಧ್ಯವಿಲ್ಲ. ಇದರಿಂದ ನಮ್ಮನ್ನು ಮೋದಿ ವಿರೋಧಿ ಎಂದು ಕರೆಯಲಾಗುತ್ತಿದೆ. ಆದರೆ ನಾವು ಮೋದಿ ವಿರೋಧಿಯಲ್ಲ. ಅದೇ ರೀತಿ ಧರ್ಮಶಾಸ್ತ್ರದ ವಿರುದ್ಧವೂ ನಡೆಯುವುದಿಲ್ಲ ಎಂದು ಹೇಳಿದ್ದಾರೆ.
ಗೋವರ್ಧನ ಪೀಠದ ನಿಶ್ಚಲಾನಂದರ ಸರಸ್ವತಿ ಅವರು ಸಹ ಮಂದಿರ ಉದ್ಘಾಟನೆಗೆ ಹೋಗುವುದಿಲ್ಲ ಎಂದು ನುಡಿದಿದ್ದು, ‘ಪ್ರಧಾನಿ ನರೇಂದ್ರ ಮೋದಿ ಅವರು ಗರ್ಭಗೃಹವನ್ನು ಪ್ರವೇಶಿಸಿ ರಾಮನ ಮೂರ್ತಿಯನ್ನು ಪ್ರತಿಷ್ಠಾಪಿಸಲಿದ್ದಾರೆ.
ಹೀಗಾಗಿ ಇದು ರಾಜಕೀಯದ ದೃಷ್ಟಿಕೋನವನ್ನು ಹೊಂದಿದೆ. ರಾಮನ ಪ್ರಾಣಪ್ರತಿಷ್ಠಾಪನೆಯನ್ನು ಗೌರವದಿಂದ ಮಾಡಬೇಕು. ನಾವು ಇದನ್ನು ವಿರೋಧಿಸುವುದಿಲ್ಲ.
ಆದರೆ ಪ್ರಾಣಪ್ರತಿಷ್ಠಾಪನೆ ಕಾರ್ಯಕ್ರಮಕ್ಕೆ ಹೋಗುವುದಿಲ್ಲ ಎಂದು ಹೇಳಿದ್ದಾರೆ. ಈ ಮೊದಲು ನಾಲ್ಕು ಪೀಠಗಳ ಶಂಕರಾಚಾರ್ಯರೂ ಸಹ ರಾಮಮಂದಿರ ಉದ್ಘಾಟನೆಯಲ್ಲಿ ಭಾಗಿಯಾಗುವುದಿಲ್ಲ ಎಂಬ ಸುದ್ದಿ ವೈರಲ್ ಆಗಿತ್ತು. ಈ ಕುರಿತಾಗಿ ಸ್ಪಷ್ಟನೆ ನೀಡಿರುವ ಶೃಂಗೇರಿ ಶಾರದಾ ಪೀಠ ಹಾಗೂ ದ್ವಾರಕಾ ಶಾರದಾ ಪೀಠದ ಶಂಕರಾಚಾರ್ಯರು ತಮ್ಮ ಹೆಸರಲ್ಲಿ ಸುಳ್ಳುಸುದ್ದಿ ಹರಡಲಾಗಿದೆ ಎಂದು ಹೇಳಿದ್ದಾರೆ.
ಜ.22ರಂದು ಅಯೋಧ್ಯೆಯ ರಾಮಮಂದಿರದಲ್ಲಿ ರಾಮಲಲ್ಲಾ ಮೂರ್ತಿಯ ಪ್ರಾಣಪ್ರತಿಷ್ಠಾಪನೆ ನಡೆಯಲಿದ್ದು, ಪ್ರಧಾನಿ ನರೇಂದ್ರ ಮೋದಿ ಅವರು ಇದನ್ನು ನೆರವೇರಿಸಲಿದ್ದಾರೆ. ಈವರೆಗೆ ರಾಮಮಂದಿರದ ಮೊದಲ ಹಂತ ಮುಕ್ತಾಯಗೊಂಡಿದ್ದು, 2ನೇ ಹಂತದಲ್ಲಿ ಮಂದಿರ ಉಳಿದ ಅಂತಸ್ತುಗಳನ್ನು ನಿರ್ಮಾಣ ಮಾಡಲಾಗುತ್ತದೆ.