2 ಹಂತದಲ್ಲಿ ಏಕ ಚುನಾವಣೆಗೆ ಕೋವಿಂದ್‌ ಸಮಿತಿ ಶಿಫಾರಸು

| Published : Mar 15 2024, 01:21 AM IST / Updated: Mar 15 2024, 11:19 AM IST

ಸಾರಾಂಶ

ಪ್ರಧಾನಿ ನರೇಂದ್ರ ಮೋದಿಯವರ ಮಹತ್ವಾಕಾಂಕ್ಷಿ ಚುನಾವಣಾ ಸುಧಾರಣೆಯ ಕನಸಾದ ‘ಏಕ ದೇಶ, ಏಕ ಚುನಾವಣೆ’ ವ್ಯವಸ್ಥೆಯ ಕುರಿತು ಅಧ್ಯಯನ ನಡೆಸಲು ರಚಿಸಲಾಗಿದ್ದ ಮಾಜಿ ರಾಷ್ಟ್ರಪತಿ ರಾಮನಾಥ್‌ ಕೋವಿಂದ್‌ ಅವರ ಸಮಿತಿಯು ದೇಶದಲ್ಲಿ 2 ಹಂತದಲ್ಲಿ ಏಕಕಾಲಕ್ಕೆ ಚುನಾವಣೆ ನಡೆಸಲು ಶಿಫಾರಸು ಮಾಡಿ ತನ್ನ ವರದಿ ಸಲ್ಲಿಸಿದೆ.

ಪಿಟಿಐ ನವದೆಹಲಿ

ಪ್ರಧಾನಿ ನರೇಂದ್ರ ಮೋದಿಯವರ ಮಹತ್ವಾಕಾಂಕ್ಷಿ ಚುನಾವಣಾ ಸುಧಾರಣೆಯ ಕನಸಾದ ‘ಏಕ ದೇಶ, ಏಕ ಚುನಾವಣೆ’ ವ್ಯವಸ್ಥೆಯ ಕುರಿತು ಅಧ್ಯಯನ ನಡೆಸಲು ರಚಿಸಲಾಗಿದ್ದ ಮಾಜಿ ರಾಷ್ಟ್ರಪತಿ ರಾಮನಾಥ್‌ ಕೋವಿಂದ್‌ ಅವರ ಸಮಿತಿಯು ದೇಶದಲ್ಲಿ 2 ಹಂತದಲ್ಲಿ ಏಕಕಾಲಕ್ಕೆ ಚುನಾವಣೆ ನಡೆಸಲು ಶಿಫಾರಸು ಮಾಡಿ ತನ್ನ ವರದಿ ಸಲ್ಲಿಸಿದೆ.

ರಾಷ್ಟ್ರಪತಿ ದ್ರೌಪದಿ ಮುರ್ಮು ಅವರಿಗೆ ಗುರುವಾರ ಕೋವಿಂದ್‌ ಸಮಿತಿ ತನ್ನ 18,000 ಪುಟಗಳ ಬೃಹತ್‌ ವರದಿ ಸಲ್ಲಿಕೆ ಮಾಡಿದೆ. 

ಅದರಲ್ಲಿ ಲೋಕಸಭೆ ಹಾಗೂ ರಾಜ್ಯಗಳ ವಿಧಾನಸಭೆಗಳಿಗೆ ಒಂದು ಸಲ ಹಾಗೂ ಈ ಚುನಾವಣೆ ನಡೆದ 100 ದಿನಗಳ ಒಳಗೆ ಮುನ್ಸಿಪಾಲಿಟಿಗಳು ಹಾಗೂ ಪಂಚಾಯ್ತಿಗಳಿಗೆ ಇನ್ನೊಂದು ಸಲ ಚುನಾವಣೆ ನಡೆಸುವಂತೆ ಶಿಫಾರಸು ಮಾಡಿದೆ. 

ಅತಂತ್ರ ಲೋಕಸಭೆ/ವಿಧಾನಸಭೆ ಸೃಷ್ಟಿಯಾದರೆ ಪುನಃ ಹೊಸತಾಗಿ ಚುನಾವಣೆ ನಡೆಸಬೇಕು. ಆದರೆ ಹಾಗೆ ಅಧಿಕಾರಕ್ಕೆ ಬರುವ ಸರ್ಕಾರ ಈ ಹಿಂದಿನಂತೆ 5 ವರ್ಷಗಳ ಪೂರ್ಣಾವಧಿಯ ಬದಲು ಹಿಂದಿನ ಲೋಕಸಭೆ/ವಿಧಾನಸಭೆ ಅವಧಿ ಪೂರ್ಣಗೊಳ್ಳುವವರೆಗೆ ಮಾತ್ರ ಅಸ್ತಿತ್ವದಲ್ಲಿರಬೇಕು. 

ರಾಜ್ಯಗಳಿಗೆ ಅವಧಿಗೂ ಮೊದಲೇ ವಿಧಾನಸಭೆ ಚುನಾವಣೆ ನಡೆದ ಪಕ್ಷದಲ್ಲಿ ಸರ್ಕಾರದ ಅಸ್ತಿತ್ವವು ಆಗಿನ ಲೋಕಸಭೆ ಅವಧಿ ಪೂರ್ಣಗೊಳ್ಳುವವರೆಗೆ ಮಾತ್ರ ಇರಬೇಕು ಎಂದು ವರದಿಯಲ್ಲಿ ಹೇಳಲಾಗಿದೆ.

ರಾಜ್ಯಗಳಿಗೆ ಒಂದು ಸಲ ಅವಧಿ ಕಡಿತ: ಕೋವಿಂದ್‌ ಸಮಿತಿಯ ಶಿಫಾರಸಿನಲ್ಲಿ, 2029ರಿಂದ ‘ಏಕ ದೇಶ, ಏಕ ಚುನಾವಣೆ’ ವ್ಯವಸ್ಥೆ ಜಾರಿಗೊಳಿಸಲು ಶಿಫಾರಸು ಮಾಡಲಾಗಿದೆ. 

ಅದರ ಪ್ರಕಾರ, 2024ರ ಲೋಕಸಭೆ ಚುನಾವಣೆಯ ಬಳಿಕ ಯಾವ್ಯಾವ ರಾಜ್ಯಗಳಲ್ಲಿ ವಿಧಾನಸಭೆ ಚುನಾವಣೆ ನಡೆಯುತ್ತದೆಯೋ ಆ ರಾಜ್ಯಗಳಲ್ಲಿ ಸರ್ಕಾರದ ಅಸ್ತಿತ್ವವು 2029ರವರೆಗೆ ಮಾತ್ರ ಇರುತ್ತದೆ. 

2029ರಲ್ಲಿ ಲೋಕಸಭೆ ಚುನಾವಣೆ ನಡೆಯುವಾಗಲೇ ಅವಧಿಗೂ ಮುನ್ನ ಆ ರಾಜ್ಯಗಳಿಗೆ ವಿಧಾನಸಭೆ ಚುನಾವಣೆ ನಡೆಸಲಾಗುತ್ತದೆ. ಅಂದರೆ, 2024ರ ಬಳಿಕ ಅಸ್ತಿತ್ವಕ್ಕೆ ಬರುವ ರಾಜ್ಯ ಸರ್ಕಾರಗಳಿಗೆ 5 ವರ್ಷಗಳ ಪೂರ್ಣಾವಧಿ ಅಧಿಕಾರ ಸಿಗುವುದಿಲ್ಲ.

ಕಾಯ್ದೆಗಳಿಗೆ ತಿದ್ದುಪಡಿ: ಏಕ ಚುನಾವಣೆ ವ್ಯವಸ್ಥೆ ಜಾರಿಗೆ ತರಲು ಸಂವಿಧಾನದ 83ನೇ ಪರಿಚ್ಛೇದ (ಸಂಸತ್ತಿನ ಅವಧಿಯ ಕುರಿತಾದ) ಮತ್ತು 172ನೇ ಪರಿಚ್ಛೇದಕ್ಕೆ (ರಾಜ್ಯಗಳ ವಿಧಾನಸಭೆ ಅವಧಿಯ ಕುರಿತಾದ) ತಿದ್ದುಪಡಿ ತರಬೇಕು. 

ಈ ತಿದ್ದುಪಡಿಗೆ ರಾಜ್ಯಗಳ ಒಪ್ಪಿಗೆ ಬೇಕಾಗಿಲ್ಲ. ಇಂಥ ಒಟ್ಟು 18 ಸಾಂವಿಧಾನಿಕ ತಿದ್ದುಪಡಿ ಆಗಬೇಕು ಎಂದು ವರದಿಯಲ್ಲಿ ಹೇಳಲಾಗಿದೆ.

ಲೋಕಸಭೆ ಮತ್ತು ವಿಧಾನಸಭೆಗಳಿಗೆ ಹಾಗೂ ಸ್ಥಳೀಯ ಸಂಸ್ಥೆಗಳಿಗೆ ಒಂದೇ ಸಲ ಚುನಾವಣೆ ನಡೆಸುವುದರಿಂದ ಪ್ರಜಾಪ್ರಭುತ್ವದ ತಳಪಾಯ ಗಟ್ಟಿಗೊಳ್ಳುವ ಮೂಲಕ ದೇಶದ ಅಭಿವೃದ್ಧಿ ಮತ್ತು ಸಾಮಾಜಿಕ ಏಕತೆಗೆ ಉತ್ತೇಜನ ಸಿಗಲಿದೆ ಎಂದು ಸಮಿತಿ ಅಭಿಪ್ರಾಯಪಟ್ಟಿದೆ.

ಒಂದೇ ಬಾರಿ ಮತದಾರರ ಪಟ್ಟಿ ಸಿದ್ಧ: ರಾಜ್ಯ ಚುನಾವಣಾಧಿಕಾರಿಗಳ ಜೊತೆ ಸಮನ್ವಯ ಸಾಧಿಸಿ ಒಂದೇ ಸಲ ಎಲ್ಲಾ ಚುನಾವಣೆಗಳಿಗೂ ಅನ್ವಯಿಸುವ ಸಾಮಾನ್ಯ ಮತದಾರರ ಪಟ್ಟಿ ಸಿದ್ಧಪಡಿಸಿ, ಮತದಾರರ ಗುರುತಿನ ಚೀಟಿಗಳನ್ನು ವಿತರಿಸಬೇಕು. 

ಇದಕ್ಕಾಗಿ ಮತದಾರರ ಪಟ್ಟಿಗೆ ಸಂಬಂಧಿಸಿದ ಸಂವಿಧಾನದ 325ನೇ ವಿಧಿಗೆ ತಿದ್ದುಪಡಿ ತರಬೇಕು ಎಂದು ವರದಿಯಲ್ಲಿ ಶಿಫಾರಸು ಮಾಡಲಾಗಿದೆ.

ಏಕೆ ಒಂದೇ ಸಲ ಚುನಾವಣೆ ಬೇಕು?
ಸದ್ಯ ದೇಶದಲ್ಲಿ ಪ್ರತಿ ವರ್ಷ ಬೇರೆ ಬೇರೆ ಚುನಾವಣೆಗಳು ನಡೆಯುತ್ತಿರುತ್ತವೆ. ಅದರಿಂದಾಗಿ ಸರ್ಕಾರ, ಉದ್ದಿಮೆಗಳು, ನೌಕರರು, ನ್ಯಾಯಾಲಯಗಳು, ರಾಜಕೀಯ ಪಕ್ಷಗಳು ಹಾಗೂ ಚುನಾವಣೆಯಲ್ಲಿ ಸ್ಪರ್ಧಿಸುವ ಅಭ್ಯರ್ಥಿಗಳ ಮೇಲೆ ಒತ್ತಡ ಬೀಳುತ್ತಿದೆ ಮತ್ತು ಒಟ್ಟಾರೆಯಾಗಿ ಸಮಾಜಕ್ಕೆ ಇದು ಹೊರೆಯಾಗುತ್ತಿದೆ. 

ಪದೇಪದೇ ಚುನಾವಣೆ ನಡೆಯುವುದನ್ನು ತಪ್ಪಿಸಲು ಕಾನೂನುಸಮ್ಮತವಾದ ವ್ಯವಸ್ಥೆಯನ್ನು ಸರ್ಕಾರ ಜಾರಿಗೆ ತರಬೇಕಿದೆ. ಆ ವ್ಯವಸ್ಥೆಯೇ ‘ಏಕ ದೇಶ, ಏಕ ಚುನಾವಣೆ’ ವ್ಯವಸ್ಥೆ ಎಂದು ಕೋವಿಂದ್‌ ಸಮಿತಿ ಅಭಿಪ್ರಾಯಪಟ್ಟಿದೆ.

ರಾಷ್ಟ್ರಪತಿಗಳಿಗೆ ವರದಿ ಸಲ್ಲಿಸುವ ವೇಳೆ ಸಮಿತಿಯ ಸಹ ಸದಸ್ಯರಾದ ಕೇಂದ್ರ ಗೃಹ ಸಚಿವ ಅಮಿತ್‌ ಶಾ, ಮಾಜಿ ಹಣಕಾಸು ಆಯೋಗದ ಅಧ್ಯಕ್ಷ ಎನ್‌.ಕೆ.ಸಿಂಗ್‌, ಮಾಜಿ ಲೋಕಸಭಾ ಕಾರ್ಯದರ್ಶಿ ಸುಭಾಷ್‌ ಕಶ್ಯಪ್‌, ರಾಜ್ಯಸಭೆಯ ಮಾಜಿ ವಿರೋಧ ಪಕ್ಷದ ನಾಯಕ ಗುಲಾಂ ನಬಿ ಆಜಾದ್‌ ಹಾಗೂ ಕಾನೂನು ಸಚಿವ ಅರ್ಜುನ್‌ ರಾಮ್‌ ಮೇಘವಾಲ್‌ ಇದ್ದರು. 

7 ದೇಶಗಳ ವ್ಯವಸ್ಥೆ ಅಧ್ಯಯನ ಮಾಡಿ ವರದಿ: ರಾಮನಾಥ್‌ ಕೋವಿಂದ್‌ ಸಮಿತಿಯು ‘ಏಕ ದೇಶ, ಏಕ ಚುನಾವಣೆ’ ಕುರಿತು ವರದಿ ಸಿದ್ಧಪಡಿಸಲು ಇಂತಹ ವ್ಯವಸ್ಥೆಯಿರುವ 7 ದೇಶಗಳ ಚುನಾವಣೆಯನ್ನು ಅಧ್ಯಯನ ನಡೆಸಿದೆ. 

ದಕ್ಷಿಣ ಆಫ್ರಿಕಾ, ಸ್ವೀಡನ್‌, ಬೆಲ್ಜಿಯಂ, ಜರ್ಮನಿ, ಜಪಾನ್‌, ಇಂಡೋನೇಷ್ಯಾ ಮತ್ತು ಫಿಲಿಪ್ಪೀನ್ಸ್‌ನ ಚುನಾವಣೆ ವ್ಯವಸ್ಥೆಯನ್ನು ಅಧ್ಯಯನಕ್ಕೆ ಒಳಪಡಿಸಲಾಗಿದೆ. 

ಅಲ್ಲದೆ, ತಜ್ಞರು ಹಾಗೂ ಸಂಬಂಧಪಟ್ಟವರಿಂದ 191 ದಿನಗಳ ಕಾಲ ಅಭಿಪ್ರಾಯ ಸಂಗ್ರಹಿಸಿದೆ. ವರದಿ ಒಟ್ಟು 18,000 ಪುಟಗಳಷ್ಟಿದೆ. 

ಕಾಂಗ್ರೆಸ್‌ ವಿರೋಧ, ಬಿಜೆಪಿ ಬೆಂಬಲ: ರಾಮನಾಥ್‌ ಕೋವಿಂದ್‌ ಸಮಿತಿಯು ವರದಿ ಸಿದ್ಧಪಡಿಸಲು ಒಟ್ಟು 62 ರಾಜಕೀಯ ಪಕ್ಷಗಳನ್ನು ಸಂಪರ್ಕಿಸಿದ್ದು, ಅವುಗಳ ಪೈಕಿ 47 ಪಕ್ಷಗಳು ತಮ್ಮ ಅಭಿಪ್ರಾಯ ಸಲ್ಲಿಸಿವೆ. 

ಅವುಗಳಲ್ಲಿ 32 ರಾಜಕೀಯ ಪಕ್ಷಗಳು ಹೊಸ ವ್ಯವಸ್ಥೆಗೆ ಬೆಂಬಲವನ್ನೂ, 15 ಪಕ್ಷಗಳು ವಿರೋಧವನ್ನೂ ವ್ಯಕ್ತಪಡಿಸಿವೆ. 15 ಪಕ್ಷಗಳು ಅಭಿಪ್ರಾಯ ಸಲ್ಲಿಸಿಲ್ಲ. 

ರಾಷ್ಟ್ರೀಯ ಪಕ್ಷಗಳಾದ ಕಾಂಗ್ರೆಸ್‌, ಬಿಎಸ್‌ಪಿ, ಆಪ್‌ ಹಾಗೂ ಸಿಪಿಎಂ ವಿರೋಧ ವ್ಯಕ್ತಪಡಿಸಿವೆ. ಬಿಜೆಪಿ ಹಾಗೂ ಎನ್‌ಪಿಪಿ ಬೆಂಬಲಿಸಿವೆ. ಇದೇ ವೇಳೆ, 3 ಸುಪ್ರೀಂ ಕೋರ್ಟ್ ನಿವೃತ್ತ ನ್ಯಾಯಾಧೀಶರು ಹಾಗೂ ಒಬ್ಬ ಮಾಜಿ ಚುನಾವಣಾ ಮುಖ್ಯ ಆಯುಕ್ತರು ಇದನ್ನು ಬೆಂಬಲಿಸಿದ್ದಾರೆ.

ಏಕ ಚುನಾವಣೆ ಹೇಗೆ?
2024ರ ಲೋಕಸಭೆ ಚುನಾವಣೆಯ ಬಳಿಕ ಯಾವ್ಯಾವ ರಾಜ್ಯಗಳಲ್ಲಿ ವಿಧಾನಸಭೆ ಚುನಾವಣೆ ನಡೆಯುತ್ತದೆಯೋ ಆ ರಾಜ್ಯಗಳಲ್ಲಿ ಸರ್ಕಾರದ ಅಸ್ತಿತ್ವವು 2029ರವರೆಗೆ ಮಾತ್ರ ಇರುತ್ತದೆ.

ಅಂದರೆ ಪ.ಬಂಗಾಳ, ತಮಿಳುನಾಡು ಹಾಗೂ ಕೇರಳದಲ್ಲಿ ಕ್ರಮವಾಗಿ 2026, 2027 ಹಾಗೂ 2028ರಲ್ಲಿ ಚುನಾವಣೆ ನಡೆಯಬೇಕು. ಈ ರಾಜ್ಯಗಳಲ್ಲಿ ಚುನಾವಣೆ ನಡೆದರೆ ವಿಧಾನಸಭೆ ಅವಧಿ 2029ಕ್ಕೇ ಮುಗಿಯುತ್ತದೆ

ಅಂದರೆ, 2024ರ ಬಳಿಕ ಅಸ್ತಿತ್ವಕ್ಕೆ ಬರುವ ರಾಜ್ಯ ಸರ್ಕಾರಗಳಿಗೆ 5 ವರ್ಷಗಳ ಪೂರ್ಣಾವಧಿ ಅಧಿಕಾರ ಸಿಗುವುದಿಲ್ಲ.

2029ರಲ್ಲಿ ಲೋಕಸಭೆ ಚುನಾವಣೆ ನಡೆಯುವಾಗಲೇ ಅವಧಿಗೂ ಮುನ್ನ ಆ ರಾಜ್ಯಗಳಿಗೆ ವಿಧಾನಸಭೆ ಚುನಾವಣೆ ನಡೆಸಲಾಗುತ್ತದೆ.

ಅತಂತ್ರ ಲೋಕಸಭೆ/ವಿಧಾನಸಭೆ ಸೃಷ್ಟಿಯಾದರೆ ಪುನಃ ಹೊಸತಾಗಿ ಚುನಾವಣೆ ನಡೆಸಬಹುದು

ಮಧ್ಯಂತರ ಚುನಾವಣೆಯಲ್ಲಿ ಅಧಿಕಾರಕ್ಕೆ ಬರುವ ಸರ್ಕಾರ ಈ ಹಿಂದಿನಂತೆ 5 ವರ್ಷ ಪೂರ್ಣಾವಧಿ ಬದಲು ಹಿಂದಿನ ಲೋಕಸಭೆ/ವಿಧಾನಸಭೆ ಅವಧಿ ಮುಗಿವವರೆಗೆ ಮಾತ್ರ ಅಸ್ತಿತ್ವ ಹೊಂದಿರಬೇಕು.