‘ವಿವಾಹಿತ ಸ್ತ್ರೀಯರಿಗೆ ಕೆಲಸವಿಲ್ಲ’ ನಿಯಮ ತೆಗೆದ ಐಫೋನ್‌ಗಳನ್ನು ತಯಾರಿಸಿ ಕೊಡುವ ಫಾಕ್ಸ್‌ಕಾನ್‌

| Published : Nov 19 2024, 12:48 AM IST / Updated: Nov 19 2024, 04:52 AM IST

‘ವಿವಾಹಿತ ಸ್ತ್ರೀಯರಿಗೆ ಕೆಲಸವಿಲ್ಲ’ ನಿಯಮ ತೆಗೆದ ಐಫೋನ್‌ಗಳನ್ನು ತಯಾರಿಸಿ ಕೊಡುವ ಫಾಕ್ಸ್‌ಕಾನ್‌
Share this Article
  • FB
  • TW
  • Linkdin
  • Email

ಸಾರಾಂಶ

ಆ್ಯಪಲ್‌ ಕಂಪನಿಗೆ ಐಫೋನ್‌ಗಳನ್ನು ತಯಾರಿಸಿ ಕೊಡುವ ಫಾಕ್ಸ್‌ಕಾನ್‌ ಕಂಪನಿ ಭಾರತದಲ್ಲಿ ಈ ಹಿಂದೆ ತನ್ನ ಘಟಕಗಳಿಗೆ ನೌಕರರನ್ನು ನೇಮಕ ಮಾಡಿಕೊಳ್ಳುವಾಗ ವಿಧಿಸುತ್ತಿದ್ದ ‘ವಿವಾಹಿತ ಸ್ತ್ರೀಯರಿಗೆ ನೌಕರಿ ಇಲ್ಲ’ ಎಂಬ ಷರತ್ತನ್ನು ಈಗ ತೆಗೆದುಹಾಕಿದೆ ಎಂದು ರಾಯಿಟರ್ಸ್‌ ಸುದ್ದಿಸಂಸ್ಥೆ ವರದಿ ಮಾಡಿದೆ.

ಚೆನ್ನೈ: ಆ್ಯಪಲ್‌ ಕಂಪನಿಗೆ ಐಫೋನ್‌ಗಳನ್ನು ತಯಾರಿಸಿ ಕೊಡುವ ಫಾಕ್ಸ್‌ಕಾನ್‌ ಕಂಪನಿ ಭಾರತದಲ್ಲಿ ಈ ಹಿಂದೆ ತನ್ನ ಘಟಕಗಳಿಗೆ ನೌಕರರನ್ನು ನೇಮಕ ಮಾಡಿಕೊಳ್ಳುವಾಗ ವಿಧಿಸುತ್ತಿದ್ದ ‘ವಿವಾಹಿತ ಸ್ತ್ರೀಯರಿಗೆ ನೌಕರಿ ಇಲ್ಲ’ ಎಂಬ ಷರತ್ತನ್ನು ಈಗ ತೆಗೆದುಹಾಕಿದೆ ಎಂದು ರಾಯಿಟರ್ಸ್‌ ಸುದ್ದಿಸಂಸ್ಥೆ ವರದಿ ಮಾಡಿದೆ.

‘ಫಾಕ್ಸ್‌ಕಾನ್‌ ಕಂಪನಿ ವಿವಾಹಿತ ಸ್ತ್ರೀಯರಿಗೆ ಕೆಲಸ ನೀಡುವುದಿಲ್ಲ ಎಂಬ ನಿಯಮ ಅಳವಡಿಸಿಕೊಂಡಿದೆ’ ಎಂಬ ಸಂಗತಿ ಈ ಹಿಂದೆ ತಮಿಳುನಾಡಿನ ಶ್ರೀಪೆರಂಬದೂರು ಘಟಕದಲ್ಲಿ ವಿವಾದಕ್ಕೆ ಗುರಿಯಾಗಿತ್ತು. ಅದರ ಬೆನ್ನಲ್ಲೇ, ತನ್ನ ಘಟಕಗಳಿಗೆ ನೌಕರರನ್ನು ನೇಮಕಾತಿ ಮಾಡುವ ಏಜೆಂಟರಿಗೆ ಈ ಷರತ್ತನ್ನು ಉದ್ಯೋಗದ ಜಾಹೀರಾತಿನಿಂದ ತೆಗೆಯುವಂತೆ ಫಾಕ್ಸ್‌ಕಾನ್‌ ಸೂಚಿಸಿದೆ ಎನ್ನಲಾಗಿದೆ.

‘ಅದರಂತೆ ಫಾಕ್ಸ್‌ಕಾನ್‌ಗೆ ನೌಕರರನ್ನು ಪೂರೈಸುವ ಏಜೆನ್ಸಿಗಳು ಈಗ ಬಿಡುಗಡೆ ಮಾಡಿರುವ ಜಾಹೀರಾತಿನಲ್ಲಿ ಮದುವೆಯ ಪ್ರಸ್ತಾಪವನ್ನೇ ಮಾಡಿಲ್ಲ. ಅಲ್ಲದೆ, ವಯಸ್ಸು, ಲಿಂಗವನ್ನು ಕೂಡ ಕೇಳಿಲ್ಲ. ಮೇಲಾಗಿ, ತಾವು ನೇಮಕಾತಿ ಮಾಡಿಕೊಳ್ಳುತ್ತಿರುವುದು ಫಾಕ್ಸ್‌ಕಾನ್‌ ಕಂಪನಿಗೆ ಎಂಬುದನ್ನೂ ಹೇಳುತ್ತಿಲ್ಲ’ ಎಂದು ರಾಯಿಟರ್ಸ್‌ ವರದಿ ಮಾಡಿದೆ.

‘ಈ ಕುರಿತ ಯಾವುದೇ ವಿಷಯವನ್ನೂ ಮಾಧ್ಯಮಗಳಿಗೆ ತಿಳಿಸದಂತೆ ನಮಗೆ ಫಾಕ್ಸ್‌ಕಾನ್‌ನಿಂದ ಸೂಚನೆಯಿದೆ’ ಎಂದು ನೇಮಕಾತಿ ಏಜೆನ್ಸಿಗಳು ಹೇಳಿವೆ.

ಜಾಹೀರಾತಿನಲ್ಲಿ, ‘ಎ.ಸಿ. ಆಫೀಸಿನಲ್ಲಿ ಕೆಲಸ, ಉಚಿತ ಸಾರಿಗೆ, ಕ್ಯಾಂಟೀನ್‌ ಸೌಕರ್ಯ, ಉಚಿತ ಹಾಸ್ಟೆಲ್‌ ಮತ್ತು ಮಾಸಿಕ 177 ಡಾಲರ್‌ (14,974 ರು.) ಸಂಬಳ’ ಎಂದಷ್ಟೇ ಹೇಳಲಾಗಿದೆ.

ಫಾಕ್ಸ್‌ಕಾನ್‌ ಕಂಪನಿ ಆ್ಯಪಲ್ ಕಂಪನಿಗೆ ಐಫೋನ್‌ಗಳನ್ನು ತಯಾರಿಸಿ ಕೊಡುತ್ತದೆ. ಬೇರೆ ಬೇರೆ ಕಂಪನಿಗಳಿಂದ ಖರೀದಿಸುವ ಬಿಡಿಭಾಗಗಳನ್ನು ಫಾಕ್ಸ್‌ಕಾನ್‌ ಕಂಪನಿ ಜೋಡಿಸಿ ಐಫೋನ್‌ ತಯಾರಿಸುತ್ತದೆ. ಭಾರತದಲ್ಲಿ ತಮಿಳುನಾಡಿನ ಶ್ರೀಪೆರಂಬದೂರು ಮತ್ತು ಬೆಂಗಳೂರಿನ ದೇವನಹಳ್ಳಿ ಬಳಿ ಫಾಕ್ಸ್‌ಕಾನ್‌ ಘಟಕಗಳಿವೆ.