ಸಾರಾಂಶ
ನವದೆಹಲಿ: ‘ದೇಶದಲ್ಲಿ ತುರ್ತುಸ್ಥಿತಿ ವೇಳೆ ಸಂವಿಧಾನದ ಪೀಠಿಕೆಗೆ ಸೇರಿಸಲಾದ ಸಮಾಜವಾದಿ ಮತ್ತು ಜಾತ್ಯತೀತ ಎಂಬ ಪದಗಳು ಸೈದ್ಧಾಂತಿಕ ನೆಲಬಾಂಬ್‌ಗಳಿದ್ದಂತೆ’ ಎಂದು ಕರ್ನಾಟಕ ಮೂಲದ ಡಾ।ನಿರಂಜನ್ ಪೂಜಾರ್, ಆರ್‌ಎಸ್‌ಎಸ್‌ನ ಮುಖವಾಣಿ ಆರ್ಗನೈಸರ್‌ನಲ್ಲಿ ಪ್ರಕಟವಾದ ಲೇಖನವೊಂದರಲ್ಲಿ ಬರೆದಿದ್ದಾರೆ.
ಆ 2 ಪದಗಳನ್ನು ಸಂವಿಧಾನದಿಂದ ತೆಗೆದುಹಾಕಬೇಕು ಎಂದು ಸಂಘದ ಪರ್ಧಾನ ಕಾರ್ಯದರ್ಶಿ ದತ್ತಾತ್ರೇಯ ಹೊಸಬಾಳೆಯವರ ಆಗ್ರಹದ ಬೆನ್ನಲ್ಲೇ ಈ ಬೆಳವಣಿಗೆಯಾಗಿದೆ.
‘ಪೀಠಿಕೆಯಲ್ಲಿ ಸಮಾಜವಾದಿ ಮತ್ತು ಜಾತ್ಯತೀತತೆಯ ಪುನರ್ವಿಮರ್ಶೆ’ ಎಂಬ ತಲೆಬರಹದ ಲೇಖನದಲ್ಲಿ, ‘ಧಾರ್ಮಿಕ ಮೌಲ್ಯಗಳನ್ನು ಬುಡಮೇಲು ಮಾಡಲು ಮತ್ತು ರಾಜಕೀಯ ಓಲೈಕೆಗಾಗಿ ಸಮಾಜವಾದಿ, ಜಾತ್ಯತೀತ ಪದಗಳ ಸೇರ್ಪಡೆಯಾಗಿತ್ತು. ಇವು ಭಾರತದ ನಾಗರಿಕತೆಯ ಗುರುತು ಮತ್ತು ಸಾಂವಿಧಾನಿಕ ಪ್ರಜಾಪ್ರಭುತ್ವದ ಆಶಯಕ್ಕೆ ವಿರುದ್ಧವಾಗಿವೆ. ಇವುಗಳನ್ನು ಸಂವಿಧಾನ ಸಭೆಯಲ್ಲಿ ಅಂಗೀಕರಿಸಲಾಗಿರಲಿಲ್ಲ. ತುರ್ತುಸ್ಥಿತಿ ಸಮಯದಲ್ಲಿ ಅವುಗಳ ಸೇರ್ಪಡೆ ಸಾಂವಿಧಾನಿಕ ವಂಚನೆ’ ಎಂದು ಪೂಜಾರ್ ಬರೆದಿದ್ದಾರೆ. ಅಂತೆಯೇ, ‘ನಿಜವಾಗಿಯೂ ಅಂಬೆಡ್ಕರ್ ಅವರನ್ನು, ಪ್ರಜಾಪ್ರಭುತ್ವವನ್ನು ಗೌರವಿಸುವುದಾದರೆ, ಭಾರತದಲ್ಲಿ ನಂಬಿಕೆಯಿದ್ದರೆ, ಭಾರತವು ಮೂಲ ಪೀಠಿಕೆಗೆ ಮರಳಬೇಕು’ ಎಂದು ಅವರು ಆಗ್ರಹಿಸಿದ್ದಾರೆ.