ಸಾರಾಂಶ
ವಾಷಿಂಗ್ಟನ್: ಉಕ್ರೇನ್ ಯುದ್ಧವನ್ನು ‘ಮೋದಿ ಅವರ ಯುದ್ಧ’ ಎಂದು ಕರೆದಿದ್ದ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ವ್ಯಾಪಾರ ನೀತಿ ಸಲಹೆಗಾರ ಪೀಟರ್ ನವಾರೋ ಇದೀಗ, ರಷ್ಯಾ ತೈಲ ಖರೀದಿ ವಿಚಾರವಾಗಿ ಭಾರತದ ವಿರುದ್ಧ ಮತ್ತೆ ಕಿಡಿಕಾರಿದ್ದಾರೆ. ‘ಅಮೆರಿಕದ ಡಾಲರ್ ಬಳಸಿಕೊಂಡು ರಿಯಾಯ್ತಿ ದರದಲ್ಲಿ ಭಾರತ ರಷ್ಯಾ ತೈಲ ಖರೀದಿಸುತ್ತಿದೆ ಈ ಹಣ ನೇರವಾಗಿ ರಷ್ಯಾ ಅಧ್ಯಕ್ಷ ವ್ಲಾದಿಮಿರ್ ಪುಟಿನ್ ಅವರ ಯುದ್ಧನಿಧಿಗೆ ಹೋಗುತ್ತದೆ’ ಎಂದು ಆರೋಪಿಸಿದ್ದಾರೆ.
ಸಾಮಾಜಿಕ ಜಾಲತಾಣ ಎಕ್ಸ್‌ನಲ್ಲಿ ಪ್ರಧಾನಿ ಮೋದಿ ಅವರು ಧ್ಯಾನ ಮಾಡುತ್ತಿರುವ ಫೋಟೋ ಹಂಚಿಕೊಂಡಿರುವ ನವಾರೋ ಅವರು, ಉಕ್ರೇನ್ ಶಾಂತಿಯ ಮಾರ್ಗ ನವದೆಹಲಿ ಮೂಲಕ ಹಾದು ಹೋಗುತ್ತದೆ ಎಂದು ವ್ಯಂಗ್ಯವಾಡಿದ್ದಾರೆ.
‘ಅಮೆರಿಕದ ಗ್ರಾಹಕರು ಭಾರತದ ವಸ್ತುಗಳನ್ನು ಖರೀದಿಸುತ್ತಾರೆ. ಆದರೆ, ಅಮೆರಿಕದ ಉತ್ಪನ್ನಗಳನ್ನು ಭಾರೀ ಸುಂಕ ಹಾಗೂ ಇತರೆ ಅಡೆತಡೆಗಳ ಮೂಲಕ ಭಾರತ ದೂರವಿಡುತ್ತದೆ. ಭಾರತವು ನಮ್ಮ ಡಾಲರ್ ಅನ್ನು ರಿಯಾಯ್ತಿ ದರದಲ್ಲಿ ಸಿಗುವ ರಷ್ಯಾ ತೈಲ ಖರೀದಿಗೆ ಬಳಸುತ್ತದೆ’ ಎಂದು ಕಿಡಿಕಾರಿದ್ದಾರೆ.
‘ಭಾರತೀಯ ರಿಫೈನರಿಗಳು ರಷ್ಯಾದ ಸಹಯೋಗಿಗಳ ಮೂಲಕ ತೈಲ ಸಂಸ್ಕರಿಸುತ್ತವೆ. ಬ್ಲ್ಯಾಕ್ ಮಾರುಕಟ್ಟೆಯಲ್ಲಿ ಸಿಗುವ ತೈಲವನ್ನು ಭಾರೀ ಲಾಭಕ್ಕಾಗಿ ಅಂತಾರಾಷ್ಟ್ರೀಯ ಮಾರುಕಟ್ಟೆಗೆ ಮಾರಾಟ ಮಾಡಲಾಗುತ್ತದೆ. ಈ ರೀತಿಯಲ್ಲಿ ಸಂಪಾದಿಸಿದ ಹಣವನ್ನು ರಷ್ಯಾವು ಉಕ್ರೇನ್ ವಿರುದ್ಧದ ಯುದ್ಧಕ್ಕೆ ಬಳಸಿಕೊಳ್ಳುತ್ತದೆ’ ಎಂದು ಆರೋಪಿಸಿದ್ದಾರೆ.