ಉತ್ತರ ಪ್ರದೇಶದ ಲಲಿತ್‌ಪುರದಿಂದ ಪೂರೈಸಲಾದ ಕಳ್ಳಭಟ್ಟಿ ಮದ್ಯ ಸೇವಿಸಿ 11 ಮಂದಿ ಮೃತಪಟ್ಟು, ಸುಮಾರು 25 ಮಂದಿ ತೀವ್ರವಾಗಿ ಅಸ್ವಸ್ಥರಾದ ಆಘಾತಕಾರಿ ಘಟನೆ ಮಧ್ಯಪ್ರದೇಶದ ಸಾಗರ್ ಜಿಲ್ಲೆಯ ಬಾಂದಾ ತಾಲೂಕಿನಲ್ಲಿ ಭಾನುವಾರ ನಡೆದಿದೆ. ಅಸ್ವಸ್ಥರನ್ನು ಆಸ್ಪತ್ರೆಗೆ ಸಾಗಿಸಿ ಚಿಕಿತ್ಸೆ ನೀಡಲಾಗುತ್ತಿದೆ.
-ಉತ್ತರ ಪ್ರದೇಶದ ಲಲಿತ್‌ಪುರದ ಗ್ಯಾಂಗ್‌ನಿಂದ ಪೂರೈಕೆ
-ಗುಜರಾತ್‌ನಲ್ಲಿ 13 ಮಂದಿ ಮೃತಪಟ್ಟ ಬೆನ್ನಲ್ಲೇ ದುರಂತಪಿಟಿಐ ಸಾಗರ್ (ಮಧ್ಯಪ್ರದೇಶ)ಉತ್ತರ ಪ್ರದೇಶದ ಲಲಿತ್‌ಪುರದಿಂದ ಪೂರೈಸಲಾದ ಕಳ್ಳಭಟ್ಟಿ ಮದ್ಯ ಸೇವಿಸಿ 11 ಮಂದಿ ಮೃತಪಟ್ಟು, ಸುಮಾರು 25 ಮಂದಿ ತೀವ್ರವಾಗಿ ಅಸ್ವಸ್ಥರಾದ ಆಘಾತಕಾರಿ ಘಟನೆ ಮಧ್ಯಪ್ರದೇಶದ ಸಾಗರ್ ಜಿಲ್ಲೆಯ ಬಾಂದಾ ತಾಲೂಕಿನಲ್ಲಿ ಭಾನುವಾರ ನಡೆದಿದೆ. ಅಸ್ವಸ್ಥರನ್ನು ಆಸ್ಪತ್ರೆಗೆ ಸಾಗಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಸಾಗರ್ ಜಿಲ್ಲೆಯ ಪಕ್ಕದಲ್ಲೇ ಇರುವ ಉತ್ತರ ಪ್ರದೇಶದ ಲಲಿತ್‌ಪುರದಲ್ಲಿ ಕಳ್ಳಭಟ್ಟಿ ತಯಾರಿಕೆಯ ಗ್ಯಾಂಗ್ ಸಕ್ರಿಯವಾಗಿದ್ದು, ಅದು ಬಾಂದಾ ಜಿಲ್ಲೆಯ ಕೆಲವು ಹಳ್ಳಿಗಳಿಗೆ ಕಳ್ಳಭಟ್ಟಿಯನ್ನು ಪೂರೈಸಿದೆ ಎಂದು ಪ್ರಾಥಮಿಕ ತನಿಖೆಯಿಂದ ತಿಳಿದುಬಂದಿದೆ. ಗುಜರಾತ್‌ನ ಭಾವನಗರ ಜಿಲ್ಲೆಯಲ್ಲಿ ಕಳೆದ ತಿಂಗಳು ಕಳ್ಳಭಟ್ಟಿ ಸೇವನೆಯಿಂದ 13 ಮಂದಿ ಮೃತಪಟ್ಟ ಬೆನ್ನಲ್ಲೇ ಈ ದುರಂತ ಸಂಭವಿಸಿದೆ. 7 ಮದ್ಯದಂಗಡಿ ಸೀಲ್:ಘಟನೆಯ ಕುರಿತು ಆಘಾತ ವ್ಯಕ್ತಪಡಿಸಿರುವ ಮುಖ್ಯಮಂತ್ರಿ ಮೋಹನ್ ಯಾದವ್, ತಕ್ಷಣ ತನಿಖೆ ನಡೆಸುವಂತೆ ಹಾಗೂ ಆರೋಪಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ಉಸ್ತುವಾರಿ ಸಚಿವರು ಮತ್ತು ಅಧಿಕಾರಿಗಳಿಗೆ ಸೂಚಿಸಿದ್ದಾರೆ. ಮುನ್ನೆಚ್ಚರಿಕೆ ಕ್ರಮವಾಗಿ ಬಾಧಿತ ಪ್ರದೇಶದಲ್ಲಿನ 7 ಮದ್ಯದಂಗಡಿಗಳನ್ನು ಜಿಲ್ಲಾಡಳಿತವು ಸೀಲ್ ಮಾಡಿದೆ ಮತ್ತು ತಕ್ಷಣವೇ ಮದ್ಯದ ಮಾದರಿಗಳನ್ನು ಸಂಗ್ರಹಿಸುವಂತೆ ಆದೇಶಿಸಿದೆ. ಅಕ್ರಮ ಮದ್ಯದ ವ್ಯವಹಾರದಲ್ಲಿ ತೊಡಗಿರುವವರ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳುವಂತೆಯೂ ಅಧಿಕಾರಿಗಳಿಗೆ ನಿರ್ದೇಶನ ನೀಡಲಾಗಿದೆ. ಅಧಿಕಾರಿಗಳ ಭೇಟಿ:ಸಾಗರ್ ವಿಭಾಗೀಯ ಆಯುಕ್ತರು, ಪೊಲೀಸ್ ಮಹಾನಿರೀಕ್ಷಕರು, ಜಿಲ್ಲಾಧಿಕಾರಿ ಮತ್ತು ಪೊಲೀಸ್ ವರಿಷ್ಠಾಧಿಕಾರಿ ಸೇರಿದಂತೆ ಹಿರಿಯ ಅಧಿಕಾರಿಗಳು ಬಾಧಿತ ಪ್ರದೇಶಕ್ಕೆ ತಲುಪಿ ಪರಿಸ್ಥಿತಿಯನ್ನು ಅವಲೋಕಿಸಿದ್ದಾರೆ. ಮದ್ಯ ಸೇವಿಸಿ ವಾಂತಿ, ತಲೆನೋವು ಅಥವಾ ಜ್ವರದಂತಹ ಲಕ್ಷಣಗಳನ್ನು ಅನುಭವಿಸುತ್ತಿರುವವರು ತಕ್ಷಣವೇ ಹತ್ತಿರದ ಆರೋಗ್ಯ ಕೇಂದ್ರಕ್ಕೆ ತೆರಳಿ ತಪಾಸಣೆಗೆ ಒಳಗಾಗುವಂತೆ ಆಡಳಿತ ಮನವಿ ಮಾಡಿದೆ.
ಕಾಂಗ್ರೆಸ್ ಕಿಡಿ: ಈ ನಡುವೆ, ರಾಜ್ಯ ಕಾಂಗ್ರೆಸ್ ಅಧ್ಯಕ್ಷ ಜಿತು ಪಟ್ವಾರಿ ಈ ದುರಂತದ ವಿಚಾರವಾಗಿ ಬಿಜೆಪಿ ನೇತೃತ್ವದ ರಾಜ್ಯ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. ‘ರಾಜ್ಯಾದ್ಯಂತ ಮದ್ಯದ ಮಾಫಿಯಾಗಳು ನಿರ್ಭಯವಾಗಿ ಜನರ ಪ್ರಾಣ ತೆಗೆಯುತ್ತಿವೆ. ಈ ಕುರಿತು ನ್ಯಾಯಾಂಗ ತನಿಖೆಯಾಗಬೇಕು’ ಎಂದು ಆಗ್ರಹಿಸಿದ್ದಾರೆ.