ಸಾರಾಂಶ
ವಿಕಸಿತ ಭಾರತಕ್ಕಾಗಿ ನಿರ್ಮಲಾ ಬಜೆಟ್‌ನಲ್ಲಿ 10 ಅಭಿವೃದ್ಧಿ ಎಂಜಿನ್‌ಗಳು, ರೈತರು, ಯುವಕರು, ಮಹಿಳೆಯರು, ಬಡವರಿಗೆ ಒತ್ತು
ನವದೆಹಲಿ : ಪ್ರಧಾನಿ ನರೇಂದ್ರ ಮೋದಿ ಅವರ 3ನೇ ಅವಧಿಯ ಮೊದಲ ಬಜೆಟ್ ‘ವಿಕಸಿತ ಭಾರತ’ ನಿರ್ಮಾಣದ ಗುರಿ ಹೊಂದಿದ್ದು, ದೇಶದ ಬೆನ್ನೆಲುಬು ಹಾಗೂ ಪ್ರಮುಖ ವರ್ಗಗಳೆಂದು ಪರಿಗಣಿಸಲಾಗುವ ರೈತರು, ಯುವಕರು, ಮಹಿಳೆಯರು ಹಾಗೂ ಬಡವರನ್ನು ಕೇಂದ್ರವಾಗಿಟ್ಟುಕೊಂಡು ರೂಪಿಸಲಾಗಿದೆ ಎಂದು ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಹೇಳಿದ್ದಾರೆ.
ಇದರ ಭಾಗವಾಗಿ ಕೃಷಿ ಕ್ಷೇತ್ರಕ್ಕೆ ಬೆಂಬಲ, ನುರಿತ ಯುವ ಕಾರ್ಮಿಕರಿಗೆ ಉದ್ಯೋಗ, ಬಡತನ ನಿರ್ಮೂಲನೆ ಸೇರಿ ಅನೇಕ ಯೋಜನೆಗಳನ್ನು ಕೈಗೊಳ್ಳುವ ಭರವಸೆಯನ್ನು ನೀಡಲಾಗಿದೆ. ಇದಕ್ಕಾಗಿ 10 ಅಭಿವೃದ್ಧಿ ಎಂಜಿನ್‌ಗಳನ್ನು ನಿರ್ಮಲಾ ಸೀತಾರಾಮನ್ ಅವರು ತಮ್ಮ ಬಜೆಟ್‌ನಲ್ಲಿ ಘೋಷಿಸಿದ್ದಾರೆ. ಅವುಗಳು ಇಂತಿವೆ.
1. ಕೃಷಿ ಕ್ಷೇತ್ರ ಬೆಳವಣಿಗೆ ಹಾಗೂ ಉತ್ಪಾದಕತೆಗೆ ಉತ್ತೇಜನ
2. ಗ್ರಾಮೀಣ ಸಮೃದ್ಧಿ ಮತ್ತು ಸ್ಥಿತಿಸ್ಥಾಪಕತ್ವ ಸಾಧನೆ
3. ಎಲ್ಲರನ್ನೂ ಒಳಗೊಂಡ ಬೆಳವಣಿಗೆ ಸಾಧಿಸಲು ಕ್ರಮ
4. ಉತ್ಪಾದನೆಗೆ ಬಲ ತುಂಬಿ, ಮೇಕ್ ಇನ್ ಇಂಡಿಯಾ ಯೋಜನೆಯ ಮುಂದುವರೆಸುವಿಕೆ
5. ಎಂಎಸ್‌ಎಂಇಗಳಿಗೆ ಬೆಂಬಲ
6. ಉದ್ಯೋಗ ಸೃಷ್ಟಿಯ ಮೂಲಕ ಅಭಿವೃದ್ಧಿ
7. ಜನ, ಆರ್ಥಿಕತೆ ಹಾಗೂ ನಾವೀನ್ಯತೆಯ ಮೇಲೆ ಹೂಡಿಕೆ
8. ಇಂಧನ ಪೂರೈಕೆಯ ಭದ್ರತೆ ಕಾಪಾಡುವುದು
9. ರಫ್ತಿಗೆ ಒತ್ತು ನೀಡುವುದು
10. ನಾವೀನ್ಯತೆಯ ಪೋಷಣೆ
ಆಹಾರ, ರಸಗೊಬ್ಬರ ಸಬ್ಸಿಡಿ 3.71 ಲಕ್ಷ ಕೋಟಿಗೆ ನಿಗದಿ
ಆಹಾರ ಮತ್ತು ರಸಗೊಬ್ಬರಗಳ ಮೇಲಿನ ಸರ್ಕಾರದ ಸಬ್ಸಿಡಿಯನ್ನು 2025-26ರ ಆರ್ಥಿಕ ವರ್ಷಕ್ಕೆ 3.71 ಲಕ್ಷ ಕೋಟಿ ರೂ.ಗೆ ನಿಗದಿಪಡಿಸಲಾಗಿದೆ. ಪ್ರಸ್ತುತ ಹಣಕಾಸು ವರ್ಷದ ಅಂದಾಜು ಹೊರಹೋಗುವಿಕೆಗಿಂತ ಶೇ.0.70ರಷ್ಟು ಏರಿಕೆಯಾಗಿದೆ.
ಕೇಂದ್ರದ 2025-26ನೇ ಸಾಲಿನ ಬಜೆಟ್ ಪ್ರಕಾರ ಮುಂದಿನ ಆರ್ಥಿಕ ವರ್ಷಕ್ಕೆ ಆಹಾರ ಮತ್ತು ರಸಗೊಬ್ಬರ ವಲಯಕ್ಕೆ 2,03,420 ಕೋಟಿ ರು.ಗಳನ್ನು ಮೀಸಲಿಡಲಾಗಿದೆ. ಇದು 2024-25ನೇ ಸಾಲಿನ ಪರಿಷ್ಕೃತ ಅಂದಾಜು 1,97,420 ಕೋ.ರು. ಕ್ಕಿಂತ ಅಧಿಕ. 2023-24ನೇ ಸಾಲಿನಲ್ಲಿ ಆಹಾರ ಸಬ್ಸಿಡಿ 2.11 ಲಕ್ಷ ಕೋಟಿ ರು,ಇತ್ತು. ರಸಗೊಬ್ಬರ ಸಬ್ಸಿಡಿಗಾಗಿ 2025-26ಕ್ಕೆ 1.67 ಲಕ್ಷ ಕೋಟಿ ರು,ಗಳು ಹಂಚಿಕೆಯಾಗಿದ್ದು, ಪ್ರಸ್ತಕ ಆರ್ಥಿಕ ವರ್ಷದ ಪರಿಷ್ಕೃತ ಅಂದಾಜು 1.71 ಲಕ್ಷ ಕೋಟಿ ರು.ಗಿಂತ ಕಡಿಮೆಯಾಗಿದೆ. ಹಿಂದಿನ ವರ್ಷದಲ್ಲಿ ರಸಗೊಬ್ಬರ ಸಬ್ಸಿಡಿಗೆ ಸರ್ಕಾರ 1.88 ಲಕ್ಷ ಕೋಟಿ ರು.ಗಳನ್ನು ಮೀಸಲಿಟ್ಟಿತ್ತು.
ಸಚಿವರ ಸಂಬಳ, ಆತಿಥ್ಯ, ಪ್ರಯಾಣಕ್ಕೆ 1024 ಕೋಟಿ
2025-26ರ ಕೇಂದ್ರ ಬಜೆಟ್‌ನಲ್ಲಿ ಸಚಿವ ಸಂಪುಟ, ಸಚಿವಾಲಯ, ಪ್ರಧಾನ ಮಂತ್ರಿಗಳ ಕಚೇರಿ, ರಾಜ್ಯದ ಅತಿಥಿಗಳ ಆತಿಥ್ಯ, ಮನರಂಜನೆ ಇತ್ಯಾದಿ ಖರ್ಚಿಗಾಗಿ 1,024.30 ಕೋಟಿ ರು.ಗಳನ್ನು ಮೀಸಲಿಡಲಾಗಿದೆ. ಕಳೆದ ಬಾರಿ ಈ ಮೊತ್ತ 1,021.83 ಕೋಟಿ ರು. ಇತ್ತು. ಮುಂಬರುವ ಹಣಕಾಸು ವರ್ಷದಲ್ಲಿ ಸಚಿವ ಸಂಪುಟದ ವೆಚ್ಚಕ್ಕಾಗಿ ಒಟ್ಟು 619.04 ಕೋಟಿ ರು.ಗಳನ್ನು ನಿಗದಿಪಡಿಸಲಾಗಿದೆ. ಈ ಮೊತ್ತವು ಕೇಂದ್ರ ಮತ್ತು ರಾಜ್ಯದ ಮಂತ್ರಿಗಳ, ಮಾಜಿ ಪ್ರಧಾನ ಮಂತ್ರಿಗಳ ಸಂಬಳ, ಭತ್ಯೆ ಮತ್ತು ಪ್ರಯಾಣದ ವೆಚ್ಚವನ್ನು ಒಳಗೊಂಡಿರುತ್ತದೆ.
ರಾಷ್ಟ್ರೀಯ ಭದ್ರತಾ ಮಂಡಳಿಯ ಸಚಿವಾಲಯಕ್ಕೆ ಈ ಬಾರಿ 182.75 ಕೋಟಿ ರು.ಗಳನ್ನು ಘೋಷಿಸಿದ್ದು, 2024-25ರ ಬಜೆಟ್‌ಗಿಂತ (270.08 ಕೋಟಿ ರು.) ಇದು ಕಡಿಮೆಯಿದೆ. ಪ್ರಧಾನ ವೈಜ್ಞಾನಿಕ ಸಲಹೆಗಾರರ (2024-25ರಲ್ಲಿ 65.72 ಕೋಟಿ ರು. ) ಕಚೇರಿ ಮತ್ತು ರಾಷ್ಟ್ರೀಯ ಸಂಶೋಧನಾ ಪ್ರತಿಷ್ಠಾನದ ಆಡಳಿತಾತ್ಮಕ ವೆಚ್ಚಗಳನ್ನು ಭರಿಸಲು ಒಟ್ಟು 70.12 ಕೋಟಿ ರೂ.ಗಳನ್ನು ನಿಗದಿಪಡಿಸಲಾಗಿದೆ. ರಾಷ್ಟ್ರಪತಿ ಭವನದ ಕಾರ್ಯಕ್ರಮಗಳ ಖರ್ಚು, ವಿದೇಶಿ ಅತಿಥಿಗಳ ಆತಿಥ್ಯ ಮತ್ತು ಮನರಂಜನಾ ವೆಚ್ಚಕ್ಕಾಗಿ 4 ಕೋಟಿ ರು.ಗಳನ್ನು ಘೋಷಿಸಲಾಗಿದೆ. 2024-25ರಂತೆಯೇ ಮಾಜಿ ರಾಜ್ಯಪಾಲರ ಸಚಿವಾಲಯದ ನೆರವಿಗಾಗಿ 1.80 ಕೋಟಿ ರು.ಗಳನ್ನು ನಿಗದಿಪಡಿಸಲಾಗಿದೆ.
ನಗರ ವಲಯ ಅಭಿವೃದ್ಧಿ
(ಕಳೆದ ವರ್ಷದ ಬಜೆಟ್‌ನಲ್ಲಿ ನಗರ ವಲಯಗಳ ಕುರಿತು ಹಲವು ಯೋಜನೆಗಳನ್ನು ಘೋಷಿಸಿದ್ದ ಕೇಂದ್ರ ಸರ್ಕಾರ, ಈ ಬಜೆಟ್‌ನಲ್ಲಿ ಅದರ ಮುಂದುವರೆದ ಮತ್ತೊಂದಿಷ್ಟು ಯೋಜನೆಗಳನ್ನು ಪ್ರಕಟಿಸಿದೆ. ಜೊತೆಗೆ ಹಲವು ಹೊಸ ಯೋಜನೆಗಳನ್ನು ಪ್ರಕಟಿಸಿದೆ. ಆಡಳಿತದಲ್ಲಿ ಹಲವು ಹೊಸ ಸುಧಾರಣೆ, ಮುನಿಸಿಪಲ್ ಸೇವೆಗಳಲ್ಲಿ ಸುಧಾರಣೆ, ನಗರ ಭೂಪ್ರದೇಶ ಮತ್ತು ಯೋಜನೆಗಳಿಗೆ ಪ್ರೋತ್ಸಾಹಕ ನೀಡುವ ಹಲವು ಅಂಶಗಳನ್ನು ಸಚಿವೆ ನಿರ್ಮಲಾ ಸೀತಾರಾಮನ್ ಶನಿವಾರ ಮಂಡಿಸಿದ ಬಜೆಟ್‌ನಲ್ಲಿ ಪ್ರಸ್ತಾಪಿಸಿದ್ದಾರೆ.)
1 ಲಕ್ಷ ಕೋಟಿ ರು. ಮೊತ್ತದ ನಗರ ಸವಾಲ್ ಫಂಡ್
ಕಳೆದ ವರ್ಷದ ಬಜೆಟ್‌ನಲ್ಲಿ ಘೋಷಿಸಿದ್ದ ‘ನಗರಗಳನ್ನು ಅಭಿವೃದ್ಧಿ ಕೇಂದ್ರ’ಗಳನ್ನಾಗಿ ರೂಪಿಸುವ, ‘ರಚನಾತ್ಮಕ ನಗರಗಳ ನಿರ್ಮಾಣ’ ಮತ್ತು ‘ನೀರು ಹಾಗೂ ನೈರ್ಮಲ್ಯ’ ಯೋಜನೆಗಳ ಜಾರಿಗಾಗಿ 1 ಲಕ್ಷ ಕೋಟಿ ರು.ನಿಧಿ ಒಳಗೊಂಡ ನಗರ ಸವಾಲ್ ಫಂಡ್ ಎಂಬ ನಿಧಿ ಸ್ಥಾಪನೆಗೆ ಸರ್ಕಾರ ನಿರ್ಧರಿಸಿದೆ.
ಈ ನಿಧಿಯ ಮೂಲಕ ಮೇಲ್ಕಂಡ ಮೂರು ಯೋಜನೆಗಳ ಪೈಕಿ ಅರ್ಹ ಯೋಜನೆಗಳಿಗೆ ಕೇಂದ್ರ ಸರ್ಕಾರ ಶೇ.25ರವರೆಗೂ ನೆರವು ನೀಡಲಿದೆ. ಆದರೆ ಉಳಿದ ಶೇ.50ರಷ್ಟು ಹಣವನ್ನು ಬಾಂಡ್, ಬ್ಯಾಂಕ್ ಸಾಲ ಮತ್ತು ಪಿಪಿಪಿ ಯೋಜನೆಗಳ ಮೂಲಕ ಭರಿಸಬೇಕು ಎಂಬ ಷರತ್ತು ಇದಕ್ಕೆ ಇರಲಿದೆ. ಇದಕ್ಕಾಗಿ ಪ್ರಸಕ್ತ ಬಜೆಟ್‌ನಲ್ಲಿ 10000 ಕೋಟಿ ರು. ನೀಡಲು ಸರ್ಕಾರ ನಿರ್ಧರಿಸಿದೆ.
ಇಂಧನ ವಲಯದಲ್ಲಿ ಸುಧಾರಣೆ
ವಿದ್ಯುತ್ ವಿತರಣೆ ವಲಯದಲ್ಲಿ ಸುಧಾರಣೆ ಮತ್ತು ಅಂತಾರಾಜ್ಯ ವಿದ್ಯುತ್ ಪ್ರಸರಣಕ್ಕೆ ಮೂಲಸೌಕರ್ಯ ಹೆಚ್ಚಿಸುವ ರಾಜ್ಯ ಸರ್ಕಾರದ ಯೋಜನೆಗಳಿಗೆ ಪ್ರೋತ್ಸಾಹಕ ನೀಡಲಾಗುವುದು ಎಂದು ಕೇಂದ್ರ ಸರ್ಕಾರ ಹೇಳಿದೆ. ಇದು ವಿದ್ಯುತ್ ಕಂಪನಿಗಳ ಆರ್ಥಿಕ ಸ್ತಿತಿ ಸುಧಾರಿಸಲು ಅನುಕೂಲವಾಗುವುರ ಜೊತೆ ಅವುಗಳ ಸಾಮರ್ಥ್ಯ ವೃದ್ಧಿಗೂ ನೆರವಾಗಲಿದೆ. ಜೊತೆಗೆ ಈ ಯೋಜನೆಯ ಭಾಗವಾಗಿ ರಾಜ್ಯಗಳು ತಮ್ಮ ಒಟ್ಟು ಸಮಗ್ರ ಆರ್ಥಿಕ ಉತ್ಪನ್ನದ ಶೇ.0.5ರಷ್ಟು ಹಣವನ್ನು ಹೆಚ್ಚುವರಿ ಸಾಲವಾಗಿ ಪಡೆಯಲು ಅವಕಾಶ ಕಲ್ಪಿಸಲಾಗುವುದು ಎಂದು ಸರ್ಕಾರ ಹೇಳಿದೆ.
ಪರಮಾಣು ಇಂಧನ ಉತ್ಪಾದನೆಯಲ್ಲಿ ಖಾಸಗಿ ಪಾಲುದಾರಿಕೆ
2047ರ ವೇಳೆಗೆ ವಿಕಸಿತ ಭಾರತ ಗುರಿ ಹಾಕಿಕೊಂಡಿರುವ ಕೇಂದ್ರ ಸರ್ಕಾರ, ಇದಕ್ಲಾಗಿ ದೇಶ 100 ಗಿಗಾವ್ಯಾಟ್‌ನಷ್ಟು ವಿದ್ಯುತ್ ಉತ್ಪಾದನೆಯ ಅವಶ್ಯಕತೆ ಇದೆ ಎಂದು ಅಂದಾಜಿಸಿದೆ. ಈ ಬೃಹತ್ ಗುರಿಯನ್ನು ಮುಟ್ಟುವ ನಿಟ್ಟಿನಲ್ಲಿ ಪರಮಾಣು ಇಂಧನ ಉತ್ಪಾದನೆಯಲ್ಲಿ ಖಾಸಗಿ ಪಾಲುದಾರಿಕೆಗೂ ನಿರ್ಧರಿಸಿದೆ. ಇದಕ್ಕಾಗಿ ಪರಮಾಣು ಇಂಧನ ಕಾಯ್ದೆ ಮತ್ತು ಪರಮಾಣು ನಷ್ಟಕ್ಕಾಗಿನ ನಾಗರಿಕ ಹೊಣೆಗಾರಿಕಾ ಮಸೂದೆಯಲ್ಲಿ ತಿದ್ದುಪಡಿಯನ್ನೂ ಮಾಡಲಾಗುವುದು ಎಂದು ಸರ್ಕಾರ ತಿಳಿಸಿದೆ.
ಇದೇ ವೇಳೆ ಸಣ್ಣ ಮಾಡ್ಯುಲರ್ ರಿಯಾಕ್ಟರ್ (ಎಸ್‌ಎಂಆರ್)ಗಳ ಸಂಶೋಧನೆ ಮತ್ತು ಅಭಿವೃದ್ಧಿಗಾಗಿ ಪ್ರಸ್ತಕ ಸಾಲಿನಲ್ಲಿ 20000 ಕೋಟಿ ರು. ಅನುದಾನ ಒದಗಿಸಲು ಸರ್ಕಾರ ನಿರ್ಧರಿಸಿದೆ ಜೊತೆಗೆ 2033ರ ವೇಳೆಗೆ ದೇಶೀಯವಾಗಿಯೇ ಅಭಿವೃದ್ಧಿಪಡಿಸಲಾದ ಕನಿಷ್ಠ 5 ಎಸ್‌ಎಂಆರ್‌ಗಳನ್ನು ಹೊಂದುವ ಗುರಿ ಹಾಕಿಕೊಳ್ಳಲಾಗಿದೆ ಎಂದು ಸರ್ಕಾರ ಹೇಳಿದೆ.
ಮೂಲಸೌಕರ್ಯ ವಲಯ
ಹಡಗು ನಿರ್ಮಾಣಕ್ಕಾಗಿನ ಹಣಕಾಸು ನೆರವಿನ ನೀತಿಯಲ್ಲಿ ಕೆಲವೊಂದು ಬದಲಾವಣೆಗೆ ನಿರ್ಧರಿಸಿರುವುದಾಗಿ ಕೇಂದ್ರ ಸರ್ಕಾರ ಹೇಳಿದೆ. ಯೋಜನೆಯಲ್ಲಿನ ಕೆಲವೊಂದು ವೆಚ್ಚ ನ್ಯೂನತೆ ಹಿನ್ನೆಲೆಯಲ್ಲಿ ಈ ಬದಲಾವಣೆ ಮಾಡಲಾಗುವುದು ಎಂದು ಸರ್ಕಾರ ಹೇಳಿದೆ. ಇದರಲ್ಲಿ ಭಾರತೀಯ ಬಂದರುಗಳಲ್ಲೇ ಹಡಗು ಒಡೆಯುವ ಉದ್ಯಮದ ಕ್ರೆಡಿಟ್ ನೋಟ್ ಕೂಡಾ ಒಳಗೊಂಡಿರಲಿದೆ. ಇದು ಸರ್ಕ್ಯುಲರ್ ಎಕಾನಮಿಗೆ ಉತ್ತೇಜನ ನೀಡಲಿದೆ ಎಂದು ಸರ್ಕಾರ ಹೇಳಿದೆ.
ನಿರ್ದಿಷ್ಟ ಗಾತ್ರಕ್ಕಿಂತ ದೊಡ್ಡದಾದ ಹಡಗುಗಳನ್ನೂ ಮೂಲಸೌಕರ್ಯ ಸಮನ್ವಯಗೊಳಿಸಿದ ಪಟ್ಟಿಯಲ್ಲಿ ಸೇರಿಸಲು ಸರ್ಕಾರ ನಿರ್ಧರಿಸಿದೆ. ಹೀಗಾಗಿ ಈ ಗಾತ್ರದ ಹಡಗುಗಳ ನಿರ್ಮಾಣಕ್ಕೆ ಅಗತ್ಯ ಪ್ರಮಾಣದ ಸಾಲ ಸೌಲಭ್ಯವು ಸಾಕಷ್ಟು ಅಗ್ಗದ ಬಡ್ಡಿದರಲ್ಲಿ ಲಭ್ಯವಾಗಲಿದೆ.
ಇದರ ಜೊತೆಗೆ ಹಡಗು ನಿರ್ಮಾಣ ಕ್ಲಸ್ಟರ್‌ಗಳಿಗೆ ಹಡಗುಗಳ ಸಾಗುವ ದೂರ ಹೆಚ್ಚಳ, ವರ್ಗೀಕರಣ, ಸಾಮರ್ಥ್ಯವನ್ನು ಹೆಚ್ಚಿಸುವ ಅವಕಾಶ ಕಲ್ಪಿಸಲಾಗುವುದು. ಇದರಲ್ಲಿ ಹೆಚ್ಚುವರಿ ಮೂಲಸೌಕರ್ಯ ಒದಗಿಸುವುದು ಮತ್ತು ಕೌಶಲ್ಯ ನೀಡುವುದು ಮತ್ತು ತಂತ್ರಜ್ಞಾನ ಅಳವಡಿಕೆ ಕೂಡಾ ಸೇರಿರಲಿದೆ.
ಸಮುದ್ರ ವಲಯದ ಉದ್ಯಮಕ್ಕೆ 25000 ಕೋಟಿ ರು.ನಿಧಿ
ಸಮುದ್ರ ತೀರದ ಉದ್ಯಮಗಳಿಗೆ ದೀರ್ಘಕಾಲೀನ ಸಾಲ ಸೌಲಭ್ಯ ಒದಗಿಸುವ ನಿಟ್ಟಿನಲ್ಲಿ 25000 ಕೋಟಿ ರು. ಮೊತ್ತದ ಸಮುದ್ರತೀರ ಅಭಿವೃದ್ಧಿ ಮಂಡಳಿ ಸ್ಥಾಪಿಸಲು ಸರ್ಕಾರ ನಿರ್ಧರಿಸಿದೆ.
ಇನ್ನೂ 120 ಹೊಸ ಸ್ಥಳಗಳಿಗೆ ಉಡಾನ್ ಸೇವೆ
ಸಣ್ಣ ಸಣ್ಣ ನಗರಗಳಿಗೂ ವಿಮಾನಯಾನ ಸೇವೆ ಕಲ್ಪಿಸುವ ಉದ್ದೇಶದಿಂದ ಆರಂಭಿಸಿದ್ದ ಉಡಾನ್ ಯೋಜನೆಯನ್ನು ಇನ್ನೂ ಹೊಸ 120 ಸ್ಥಳಗಳಿಗೆ ವಿಸ್ತರಿಸಲಾಗುವುದು ಎಂದು ಸರ್ಕಾರ ಹೇಳಿದೆ. ಉಡಾನ್ ಯೋಜನೆಯು ಹಾಲಿ 88 ವಿಮಾನ ನಿಲ್ದಾಣಗಳ ಮೂಲಕ 619 ಮಾರ್ಗಗಳನ್ನು ಸಂಪರ್ಕಿಸುತ್ತಿದೆ. ಯೋಜನೆ ಫಲವಾಗಿ ಸುಮಾರು 1.5 ಕೋಟಿ ಮಧ್ಯಮ ವರ್ಗದ ಭಾರತೀಯರು ತಮ್ಮ ವಿಮಾನಯಾನದ ಕನಸು ನನಸು ಮಾಡಿಕೊಂಡಿದ್ದಾರೆ.
ಈ ಯೋಜನೆಗೆ ಸಿಕ್ಕ ಉತ್ತಮ ಯಶಸ್ಸಿನ ಹಿನ್ನೆಲೆಯಲ್ಲಿ ಯೋಜನೆಯನ್ನು ಇನ್ನೂ 120 ಸ್ಥಳಗಳಿಗೆ ವಿಸ್ತರಿಸಲು ಉದ್ದೇಶಿಸಲಾಗಿದೆ. ಇದು ಮುಂದಿನ 10 ವರ್ಷಗಳಲ್ಲಿ ಹೆಚ್ಚುವರಿಯಾಗಿ 4 ಕೋಟಿ ಪ್ರಯಾಣಿಕರ ಸಂಚಾರಕ್ಕೆ ಅನುವು ಮಾಡಿಕೊಡಲಿದೆ ಎಂದು ಸರ್ಕಾರ ಹೇಳಿದೆ.
ಗಣಿ ವಲಯದಲ್ಲಿ ಸುಧಾರಣೆ
ಸಾಮಾನ್ಯ ಖನಿಜಗಳೂ ಸೇರಿದಂತೆ ಒಟ್ಟಾರೆ ಗಣಿ ವಲಯದ ಅಭಿವೃದ್ಧಿಗಾಗಿ ಸರ್ಕಾರ ಕ್ರಮ ಕೈಗೊಳ್ಳಲಿದೆ. ಇದರಲ್ಲಿ ರಾಜ್ಯ ಗಣಿ ಸೂಚ್ಯಂಕ ಆರಂಭ ಮತ್ತು ದೇಶೀಯವಾಗಿ ಮತ್ತು ಜಾಗತಿಕವಾಗಿ ಲಭ್ಯವಿರುವ ಉನ್ನತ ತಂತ್ರಜ್ಞಾನ ಬಳಕೆ ಕೂಡಾ ಸೇರಿದೆ ಎಂದು ಸರ್ಕಾರ ಹೇಳಿದೆ.
ಸಂಕಷ್ಟದಲ್ಲಿರುವ ರಿಯಲ್ ಎಸ್ಟೇಟ್ ವಲಯಕ್ಕೆ ನೆರವು
ನಾನಾ ಕಾರಣಗಳಿಂದ ನಿರ್ಮಾಣ ಹಂತದಲ್ಲೇ ಬಾಕಿ ಉಳಿದುಕೊಂಡ ಮನೆ ನಿರ್ಮಾಣದ ಯೋಜನೆಗಳಿಗೆ ಅಗತ್ಯ ಹಣಕಾಸಿನ ನೆರವು ಒದಗಿಸಲು ಜಾರಿಗೆ ತಂದಿದ್ದ ಸ್ವಾಮಿಹ್ ನಿಧಿ 1ರ ಮೂಲಕ ಒಟ್ಟು 50000 ಮನೆಗಳನ್ನು ಗ್ರಾಹಕರಿಗೆ ಹಸ್ತಾಂತರ ಮಾಡಲಾಗಿತ್ತು. ಇನ್ನೂ 4000 ಮನೆಗಳು ಈ ವರ್ಷ ಜನರಿಗೆ ಹಸ್ತಾಂತರ ಮಾಡಲಾಗುವುದು. ಇದು ತಾವು ಹೊಸ ಮನೆ ಖರೀದಿಗೆ ಮಾಡಿದ ಸಾಲಕ್ಕೆ ಇಎಂಐ ಪಾವತಿ ಮಾಡುವ ಜೊತೆಗೆ, ಹಾಲಿ ಇರುವ ಮನೆಗೂ ಬಾಡಿಗೆ ಪಾವತಿಸುವ ಸಂಕದಷ್ಟದಲ್ಲಿದ್ದ ಸಾವಿರಾರು ಜನರಿಗೆ ನೆರವಾಗಿತ್ತು.
ಇದೀಗ ಸ್ವಾಮಿಹ್ 2 ಯೋಜನೆ ಮೂಲಕ ಮತ್ತೆ 15000 ಕೋಟಿ ರು.ನಿಧಿ ಒದಗಿಸಲಾಗುವುದು. ಇದರ ಮೂಲಕ ನಿರ್ಮಾಣ ಹಂತದಲ್ಲಿದ್ದು ನಾನಾ ಕಾರಣಗಳಿಂದಾಗಿ ಪೂರ್ಣಗೊಳ್ಳದ ಸುಮಾರು 1 ಲಕ್ಷ ಮನೆಗಳ ನಿರ್ಮಾಣ ಪೂರ್ಣಗೊಳಿಸಿ ಅದನ್ನು ಅವರ ಮಾಲೀಕರಿಗೆ ಹಸ್ತಾಂತರ ಮಾಡಲು ನೆರವು ನೀಡಲಿದೆ ಎಂದು ಸರ್ಕಾರ ಹೇಳಿದೆ.