ಸಾರಾಂಶ
ಬಿಜಾಪುರ: ಛತ್ತೀಸಗಢದಲ್ಲಿ ನಕ್ಸಲೀಯರ ಬೇಟೆಯನ್ನು ಮುಂದುವರೆಸಿರುವ ಭದ್ರತಾ ಪಡೆಗಳು ಗುರುವಾರ ಇಲ್ಲಿನ ಬಿಜಾಪುರ ಜಿಲ್ಲೆಯಲ್ಲಿ 12 ನಕ್ಸಲರನ್ನು ಹೊಡೆದುರುಳಿಸಿದ್ದಾರೆ.
ಗುರುವಾರ ಬೆಳಗ್ಗೆ ಜಿಲ್ಲೆಯ ದಟ್ಟ ಅರಣ್ಯ ಪ್ರದೇಶದಲ್ಲಿ ಪೊಲೀಸರು, ಸಿಆರ್‌ಪಿಎಫ್‌ನ ಕೋಬ್ರಾ ಪಡೆಗಳು ಜಂಟಿಯಾಗಿ ಜಂಟಿಯಾಗಿ ನಕ್ಸಲ್ ವಿರೋಧಿ ಕಾರ್ಯಾಚರಣೆ ನಡೆಸುತ್ತಿದ್ದ ವೇಳೆ ನಕ್ಸಲರು ಎದುರಾಗಿದ್ದರು. ಈ ವೇಳೆ ಎರಡೂ ಬಣಗಳ ತೀವ್ರ ಗುಂಡಿನ ಚಕಮಕಿ ಆರಂಭವಾಗಿ ಅದು ಸಂಜೆಯವರೆಗೂ ಮುಂದುವರೆದಿತ್ತು. ಸಂಜೆ ಗುಂಡಿನ ಸದ್ದು ನಿಂತ ಬಳಿಕ ಸ್ಥಳ ಪರಿಶೀಲನೆ ವೇಳೆ ಗುಂಡಿನ ಚಕಮಕಿ ನಡೆದ ಜಾಗದಲ್ಲಿ 12 ನಕ್ಸಲರ ಶವಗಳು ಪತ್ತೆಯಾದವು ಎಂದು ಭದ್ರತಾ ಪಡೆಗಳು ತಿಳಿಸಿವೆ. ಗುಂಡಿನ ಚಕಮಿಯಲ್ಲಿ ಯಾವುದೇ ಭದ್ರತಾ ಸಿಬ್ಬಂದಿಗೆ ಯಾವುದೇ ಗಾಯಗಳಾಗಿಲ್ಲ. ಶೋಧ ಕಾರ್ಯ ಮುಂದುವರೆದಿದೆ ಎಂದು ಹಿರಿಯ ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.
ಗುರುವಾರದ ಘಟನೆಯೊಂದಿಗೆ 2025ರಲ್ಲಿ ಈವರೆಗೆ ಒಟ್ಟು 26 ನಕ್ಸಲರನ್ನು ಹೊಡೆದುರುಳಿಸಿದಂತೆ ಆಗಿದೆ. ಕಳೆದ ವರ್ಷ 219 ನಕ್ಸಲರನ್ನು ಎನ್‌ಕೌಂಟರ್ ಮಾಡಲಾಗಿತ್ತು.