3ನೇ ಹಂತ : 94 ಸ್ಥಾನಕ್ಕೆ 1,352 ಅಭ್ಯರ್ಥಿಗಳು ಕಣಕ್ಕೆ

| Published : Apr 30 2024, 02:10 AM IST / Updated: Apr 30 2024, 04:57 AM IST

ಸಾರಾಂಶ

ಲೋಕಸಭೆಯ ಮೂರನೇ ಹಂತದ ಚುನಾವಣೆಗೆ ನಾಮಪತ್ರ ಹಿಂಪಡೆಯುವ ಅವಧಿ ಮುಕ್ತಾಯವಾಗಿದ್ದು, ಅಂತಿಮವಾಗಿ 94 ಸ್ಥಾನಕ್ಕೆ 1352 ಅಭ್ಯರ್ಥಿಗಳು ಉಳಿದುಕೊಂಡಿದ್ದಾರೆ.

ನವದೆಹಲಿ: ಲೋಕಸಭೆಯ ಮೂರನೇ ಹಂತದ ಚುನಾವಣೆಗೆ ನಾಮಪತ್ರ ಹಿಂಪಡೆಯುವ ಅವಧಿ ಮುಕ್ತಾಯವಾಗಿದ್ದು, ಅಂತಿಮವಾಗಿ 94 ಸ್ಥಾನಕ್ಕೆ 1352 ಅಭ್ಯರ್ಥಿಗಳು ಉಳಿದುಕೊಂಡಿದ್ದಾರೆ.1352 ಅಭ್ಯರ್ಥಿಗಳ ಪೈಕಿ 244 (ಶೇ.18) ಜನರ ವಿರುದ್ಧ ವಿವಿಧ ರೀತಿಯ ಕ್ರಿಮಿನಲ್‌ ಕೇಸು ದಾಖಲಾಗಿವೆ.

 ಇನ್ನು ಅಭ್ಯರ್ಥಿಗಳ ಸರಾಸರಿ ಆಸ್ತಿ 5.66 ಕೋಟಿ ರು. ಈ ಪೈಕಿ 392 ಜನರ ಆಸ್ತಿ 1 ಕೋಟಿ ರು.ಗಿಂತಲೂ ಅಧಿಕ. ಅತ್ಯಂತ ಶ್ರೀಮಂತ ಅಭ್ಯರ್ಥಿಯ ಆಸ್ತಿ 1,361 ಕೋಟಿ ರು. ಎಂದು ಎಡಿಆರ್‌ ವರದಿ ಹೇಳಿದೆ.

ಕ್ರಿಮಿನಲ್‌ ಮೊಕದ್ದಮೆ ಇರುವ 244 ಮಂದಿಯ ಪೈಕಿ 7 ಮಂದಿ ಈಗಾಗಲೇ ನ್ಯಾಯಾಲಯದಲ್ಲಿ ಅಪರಾಧಿ ಎಂದು ಸಾಬೀತಾಗಿ ಶಿಕ್ಷೆ ಅನುಭವಿಸಿದ್ದಾರೆ. ಇದರಲ್ಲಿ 5 ಮಂದಿಯ ಮೇಲೆ ಕೊಲೆ ಆರೋಪವಿದ್ದರೆ, 24 ಮಂದಿಯ ಮೇಲೆ ಕೊಲೆ ಯತ್ನದ ಪ್ರಕರಣ ಬಾಕಿಯಿದೆ. ಜೊತೆಗೆ 38 ಮಂದಿಯ ಮೇಲೆ ಮಹಿಳಾ ದೌರ್ಜನ್ಯ ಸಂಬಂಧಿ ಪ್ರಕರಣಗಳಿದ್ದರೆ, 17 ಮಂದಿಯ ಮೇಲೆ ದ್ವೇಷಭಾಷಣ ಮಾಡಿದ ಕುರಿತು ಪ್ರಕರಣ ದಾಖಲಾಗಿದೆ. 

ಹಾಗೆಯೇ ಉಮೇದುವಾರಿಕೆ ಸಲ್ಲಿಸಿದವರಲ್ಲಿ ಶೇ.47 (639) ಮಂದಿ 5-12ನೇ ತರಗತಿ ವರೆಗೂ ವ್ಯಾಸಂಗ ಮಾಡಿದ್ದರೆ, ಶೇ.44 (591) ಮಂದಿ ಪದವೀಧರರಾಗಿದ್ದಾರೆ. 

ಜೊತೆಗೆ ವಯೋಮಾನವನ್ನು ಪರಿಗಣಿಸಿದಾಗ ಶೇ.53 (712) ಮಂದಿ 41 ರಿಂದ 60 ವಯೋಮಾನದವರಾಗಿದ್ದು, ಶೇ.30(411) ಮಂದಿ 25-40ರ ವಯೋಮಾನಕ್ಕೆ ಸೇರಿದ ಅಭ್ಯರ್ಥಿಗಳಾಗಿದ್ದಾರೆ. ಜೊತೆಗೆ ಈ ಬಾರಿಯೂ ಮಹಿಳಾ ಅಭ್ಯರ್ಥಿಗಳ ಸಂಖ್ಯೆ ಭಾರೀ ಕಡಿಮೆ ಪ್ರಮಾಣದಲ್ಲಿದ್ದು, ಕೇವಲ ಶೇ.9ರಷ್ಟು (123) ಮಹಿಳೆಯರು ಚುನಾವಣೆಗೆ ಸ್ಪರ್ಧಿಸಿದ್ದಾರೆ. ಮೊದಲ ಎರಡು ಹಂತದಲ್ಲೂ ಮಹಿಳಾ ಮೀಸಲು ಪ್ರಮಾಣ ಶೇ.8ರಷ್ಟಿತ್ತು.

ಶ್ರೀಮಂತ ಅಭ್ಯರ್ಥಿಗಳು

ಪಲ್ಲವಿ ಶ್ರೀನಿವಾಸ್‌ ಡೆಂಪೋ - ₹1,361 ಕೋಟಿ

ಜ್ಯೋತಿರಾದಿತ್ಯ ಸಿಂಧಿಯಾ - ₹424 ಕೋಟಿ

ಛತ್ರಪತಿ ಶಾಹು ಶಹಜಿ - ₹342 ಕೋಟಿ

ಪ್ರಭಾ ಮಲ್ಲಿಕಾರ್ಜುನ್‌ - ₹241 ಕೋಟಿ

ಉದಯನ್‌ರಾಜೆ ಭೋಸ್ಲೆ - ₹223 ಕೋಟಿ