ಸಾರಾಂಶ
ದೇಶದಲ್ಲಿ ಫಲವತ್ತತೆ ಅಥವಾ ಪ್ರಜನನ ಪ್ರಮಾಣ ಮಾತ್ರ ತೀವ್ರ ಇಳಿಮುಖವಾಗಿದೆ ಎಂದು ವಿಶ್ವಸಂಸ್ಥೆಯ ಹೊಸ ಜನಸಂಖ್ಯಾ ವರದಿ ಹೇಳಿದೆ.
ನವದೆಹಲಿ: ಭಾರತದ ಜನಸಂಖ್ಯೆ ಈ ವರ್ಷ 146 ಕೋಟಿಯಷ್ಟಾಗಲಿದೆ. ಈ ಮೂಲಕ ವಿಶ್ವದಲ್ಲೇ ಅತಿ ಹೆಚ್ಚುಜನಸಂಖ್ಯೆ ಹೊಂದಿರುವ ರಾಷ್ಟ್ರಗಳ ಪಟ್ಟಿಯಲ್ಲಿ ಭಾರತ ಮೊದಲ ಸ್ಥಾನದಲ್ಲಿ ಮುಂದುವರಿಯಲಿದೆ. ಆದರೆ, ದೇಶದಲ್ಲಿ ಫಲವತ್ತತೆ ಅಥವಾ ಪ್ರಜನನ ಪ್ರಮಾಣ ಮಾತ್ರ ತೀವ್ರ ಇಳಿಮುಖವಾಗಿದೆ ಎಂದು ವಿಶ್ವಸಂಸ್ಥೆಯ ಹೊಸ ಜನಸಂಖ್ಯಾ ವರದಿ ಹೇಳಿದೆ.
ವಿಶ್ವಸಂಸ್ಥೆಯ ಜನಸಂಖ್ಯಾ ನಿಧಿ, ವಿಶ್ವ ಜನಸಂಖ್ಯೆಯ ಸ್ಥಿತಿಗತಿ, ನೈಜ ಪ್ರಜನನ ಬಿಕ್ಕಟ್ಟು ವರದಿ ಪ್ರಕಾರ, ಫಲವತ್ತತೆ ಪ್ರಮಾಣ ಇಳಿಮುಖ ಕುರಿತು ಆತಂಕದ ಬದಲು ಲಕ್ಷಾಂತರ ಮಂದಿ ಮಕ್ಕಳನ್ನು ಹೊಂದುವ ಇಚ್ಛೆ ಪೂರೈಸಿಕೊಳ್ಳಲಾಗದಿರುವ ಬಗ್ಗೆ ಗಮನಹರಿಸುವ ಅಗತ್ಯವಿದೆ. ಅದೇ ರೀತಿ ಜನಸಂಖ್ಯೆ ಹೆಚ್ಚು ಅಥವಾ ಕಡಿಮೆ ಎಂಬುದು ನೈಜ ಬಿಕ್ಕಟ್ಟು ಅಲ್ಲ, ಬದಲಾಗಿ ಗರ್ಭನಿರೋಧಕ ಮತ್ತು ಕುಟುಂಬ ಆರಂಭಿಸಲು ಜನರಿಗೆ ಅಧಿಕಾರ ಇಲ್ಲದಿರುವುದೇ ನೈಜ ಸಮಸ್ಯೆ ಆಗಿದೆ.
ಭಾರತದ ಒಟ್ಟಾರೆ ಸಂತಾನೋತ್ಪತ್ತಿ ದರ 1.9ರಷ್ಟಿದೆ. ಅಂದರೆ ಪ್ರತಿ ಮಹಿಳೆಯರು 1.9 ಮಕ್ಕಳನ್ನು ಹೆರುತ್ತಾರೆ. ಇದು ಪರ್‍ಯಾಯ ಹಂತ ಅಥವಾ ರಿಪ್ಲೇಸ್‌ಮೆಂಟ್ ರೇಟ್ (2.1)ಗಿಂತ ಕಡಿಮೆ. ಇದರರ್ಥ ಭಾರತೀಯ ಮಹಿಳೆಯರು ಈಗ ಹೆಚ್ಚಿನ ಮಕ್ಕಳನ್ನು ಹೆರುತ್ತಿಲ್ಲ. ಹೀಗಾಗಿ ಮುಂದಿನ ತಲೆಮಾರಲ್ಲಿ ಜನಸಂಖ್ಯೆ ಸ್ಥಿರವಾಗುವ ಸಾಧ್ಯತೆ ಇದೆ ಎಂದು ವರದಿ ತಿಳಿಸಿದೆ.
ದೇಶದಲ್ಲಿ ಜನನ ಪ್ರಮಾಣ ಇಳಿಕೆಯಾದರೂ ಯುವಜನರ ಸಂಖ್ಯೆ ಈಗಲೂ ದೊಡ್ಡ ಪ್ರಮಾಣದಲ್ಲಿದೆ. ದೇಶದಲ್ಲಿ 0-14 ವಯಸ್ಸಿನ ಮಕ್ಕಳ ಸಂಖ್ಯೆ ಶೇ.24ರಷ್ಟಿದ್ದರೆ, 10-19ರ ನಡುವಿನ ಯುವಜನರ ಸಂಖ್ಯೆ ಶೇ.17, 10-24ರ ನಡುವಿನ ಯುವಕರ ಪ್ರಮಾಣ ಶೇ.26ರಷ್ಟಿದೆ. ಇನ್ನು ದೇಶವು ಶೇ.68ರಷ್ಟು ದುಡಿಯುವ ವಯಸ್ಸಿನವರನ್ನು (15ರಿಂದ 64 ವಯಸ್ಸಿನವರು) ಹೊಂದಿದೆ. ಇನ್ನು 65 ವರ್ಷ ಮೇಲ್ಪಟ್ಟವರು ಕೇವಲ ಶೇ.6ರಷ್ಟಿದ್ದಾರೆ. ಮುಂದಿನ ದಶಕಗಳಲ್ಲಿ ಈ ಪ್ರಮಾಣ ಹೆಚ್ಚಾಗಲಿದೆ. 2025ರಲ್ಲಿ ಅಂದರೆ ಸದ್ಯ ದೇಶದ ಜನರ ಸರಾಸರಿ ಜೀವಿತಾವಧಿ ಗಂಡರು 71 ವರ್ಷ ಮತ್ತು ಮಹಿಳೆಯರಿಗೆ 74 ವರ್ಷ ಆಗಿರಲಿದೆ.
ಏರಿಕೆಯಾಗಿ ಇಳಿಕೆ: ಭಾರತದ ಜನಸಂಖ್ಯೆ ಸದ್ಯ ಏರುಗತಿಯಲ್ಲಿದ್ದು, ಅದು 1.7ಶತಕೋಟಿಗೆ ತಲುಪಿದ ಬಳಿಕ ಇಳಿಮುಖವಾಗಲು ಆರಂಭಿಸುತ್ತದೆ. ಸುಮಾರು 40 ವರ್ಷ ಬಳಿಕ ಜನಸಂಖ್ಯೆ ಇಳಿಕೆ ಶುರುವಾಗಲಿದೆ ಎಂದು ವರದಿ ಅಂದಾಜಿಸಿದೆ.
ಮಹಿಳೆಯರಿಗೆ ಗರ್ಭಧಾರಣೆ ಆಯ್ಕೆ ಕಡಿಮೆ
ಭಾರತದಲ್ಲಿ ಮಹಿಳೆಯರಿಗೆ ತಾವು ಯಾವಾಗ ತಾಯಿಯಾಗಬೇಕೆಂಬ ಆಯ್ಕೆ ಕಡಿಮೆ ಇದೆ. 1960ರಲ್ಲಿ ದೇಶದ ಜನಸಂಖ್ಯೆ 43.6 ಕೋಟಿ ಆಗಿತ್ತು. ಆಗ ಸರಾಸರಿ ಮಹಿಳೆಯರು 6 ಮಕ್ಕಳನ್ನು ಹೊಂದುತ್ತಿದ್ದರು. ಆಗ ದೇಹದ ಮೇಲೆ ಅವರಿಗೆ ಹೆಚ್ಚಿನ ಅಧಿಕಾರ ಇರುತ್ತಿರಲಿಲ್ಲ. ನಾಲ್ಕರಲ್ಲಿ ಸರಾಸರಿ ಒಬ್ಬರಿಗಿಂತಲೂ ಕಡಿಮೆ ಮಂದಿ ಮಾತ್ರ ಗರ್ಭನಿರೋಧಕ ಬಳಸುತ್ತಿದ್ದರು.
ಇಬ್ಬರಲ್ಲಿ ಸರಾಸರಿ ಒಬ್ಬರಿಗಿಂತ ಕಡಿಮೆ ಮಹಿಳೆಯರು ಶಾಲೆಗೆ ಹೋಗುತ್ತಿದ್ದರು. ಆದರೆ, ಈಗ ಶಿಕ್ಷಣಕ್ಕೆ ಹೆಚ್ಚಿನ ಆದ್ಯತೆ ಸಿಕ್ಕಿದೆ. ಹೆಚ್ಚಿನ ಮಹಿಳೆಯರು ತಮ್ಮ ಜೀವನದ ಕುರಿತು ನಿರ್ಧರಿಸುವ ಅಧಿಕಾರ ಪಡೆದಿದ್ದಾರೆ. ಸದ್ಯ ಭಾರತದಲ್ಲಿ ಪ್ರತಿ ಮಹಿಳೆಯರು ಸರಾಸರಿ ಇಬ್ಬರು ಮಕ್ಕಳನ್ನು ಹೊಂದಿದ್ದಾರೆ. 1970ರಲ್ಲಿ ಪ್ರತಿ ಮಹಿಳೆಗೆ ತಲಾ ಐದು ಮಕ್ಕಳಷ್ಟಿದ್ದ ಫಲವತ್ತತೆ ದರ ಇದೀಗ ಎರಡಕ್ಕಿಳಿದಿದೆ. ಜನಸಂಖ್ಯೆ ದ್ವಿಗುಣಗೊಳ್ಳುವ ಸಮಯ 79 ವರ್ಷಕ್ಕೆ ಏರಿದೆ. ಈ ಮೂಲಕ ಜನಸಂಖ್ಯೆ ನಿಯಂತ್ರಿಸುವಲ್ಲಿ ಭಾರತವು ಮಹತ್ವದ ಯಶಸ್ಸು ಸಾಧಿಸಿದೆ ಎಂದು ವರದಿ ಹೇಳಿದೆ.