ಸಾರಾಂಶ
ನವದೆಹಲಿ: ಮಲಯಾಳಂ ಚಿತ್ರೋದ್ಯಮದಲ್ಲಿ ನಡೆದ ಲೈಂಗಿಕ ದೌರ್ಜನ್ಯ ಪ್ರಕರಣಗಳ ಬಗ್ಗೆ ಮೌನ ಮುರಿಯುವವರ ಸಂಖ್ಯೆ ದಿನೇ ದಿನೇ ಹೆಚ್ಚಾಗುತ್ತಿದ್ದು ಇದುವರೆಗೂ 17 ದೂರು ದಾಖಲಾಗಿದೆ.
ಇಂಥ ಪ್ರಕರಣಗಳ ತನಿಖೆಗೆಂದು ಕೇರಳ ಸರ್ಕಾರ ರಚಿಸಿರುವ ವಿಶೇಷ ತನಿಖಾ ತಂಡಕ್ಕೆ ಹಲವು ನಟಿಯರು ಆನ್‌ಲೈನ್ ಮೂಲಕವೇ ದೂರು ದಾಖಲು ಆರಂಭಿಸಿದ್ದಾರೆ. ಈ ಸಾಲಿಗೆ ನಟಿ ಸೋನಿಯಾ ಮಲ್ಹಾರ್ ಕೂಡಾ ಇದೀಗ ಸೇರಿದ್ದಾರೆ. 2013ರಲ್ಲಿ ನಟನೊಬ್ಬ ತಮಗೆ ಕಿರುಕುಳ ನೀಡಿದ ಬಗ್ಗೆ ಅವರು ದೂರು ನೀಡಿದ್ದಾರೆ.
ಈ ನಡುವೆ ಹಾಲಿ ಸಿಪಿಎಂ ಶಾಸಕ, ನಟ ಮುಕೇಶ್, ಜಯಸೂರ್ಯ, ಮಣಿಯನ್‌ಪಿಳ್ಳ ರಾಜು ಮತ್ತು ಇಡವೇಲ ಬಾಬು ವಿರುದ್ಧ ಲೈಂಗಿಕ ದೌರ್ಜನ್ಯದ ಆರೋಪ ಹೊರಿಸಿದ್ದ ನಟಿ ಮಿನು ಮುನೀರ್ ತಮಗೆ ಬೆದರಿಕೆ ಕರೆಗಳು ಬರುತ್ತಿರುವುದಾಗಿ ಹೇಳಿದ್ದಾರೆ.
ಇದಕ್ಕೆ ಸಂಬಂಧಿಸಿದಂತೆ ಸಾಮಾಜಿಕ ಜಾಲತಾಣಗಳಲ್ಲಿ ಬಂದ ಬೆದರಿಕೆಗಳ ಸ್ಕ್ರೀನ್ ಶಾಟ್ ಹಂಚಿಕೊಂಡಿದ್ದಾರೆ.
ನಟ ಸಿದ್ದಿಕಿ ವಿರುದ್ಧ ಅತ್ಯಾಚಾರ ಕೇಸು ದಾಖಲು
ತಿರುವನಂತಪುರ: ಮಲಯಾಳಂ ನಟ ಸಿದ್ದಿಕಿ ತಮ್ಮ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದಾಗಿ ನಟಿಯೊಬ್ಬರು ಆರೋಪಿಸಿದ ಬೆನ್ನಲ್ಲೇ ಸಿದ್ಧಿಕಿ ವಿರುದ್ಧ ಅತ್ಯಾಚಾರದ ಪ್ರಕರಣ ದಾಖಲಿಸಲಾಗಿದೆ. 2016ರಲ್ಲಿ ನಗರದ ಹೋಟೆಲ್ ಒಂದರಲ್ಲಿ ಸಿದ್ಧಿಕಿ ಅತ್ಯಾಚಾರ ಎಸಗಿದ್ದಾರೆ ಎಂದು ನಟಿ ಆರೋಪ ಮಾಡಿದ್ದರು. ಈ ಹಿನ್ನೆಲೆಯಲ್ಲಿ ಅವರ ವಿರುದ್ಧ ಐಪಿಸಿ ಸೆಕ್ಷನ್ 378 (ಅತ್ಯಾಚಾರ) ಮತ್ತು 506 (ಬೆದರಿಕೆ) ಅಡಿಯಲ್ಲಿ ಮ್ಯೂಸಿಯಂ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿಕೊಂಡಿರುವುದಾಗಿ ಪೊಲೀಸರು ಮಾಹಿತಿ ನೀಡಿದ್ದಾರೆ.