ಸಾರಾಂಶ
1984ರಲ್ಲಿ ದೆಹಲಿಯಲ್ಲಿ ನಡೆದ ಸಿಖ್ ವಿರೋಧಿ ಹಿಂಸಾಚಾರದಲ್ಲಿ ಮೂವರ ಹತ್ಯೆಗೆ ಸಂಬಂಧಿಸಿದಂತೆ ಕಾಂಗ್ರೆಸ್ ನಾಯಕ ಜಗದೀಶ್ ಟೈಟ್ಲರ್ ವಿರುದ್ಧ ಆರೋಪಪಟ್ಟಿ ದಾಖಲಿಸಲು ಸಿಬಿಐ ವಿಶೇಷ ಕೋರ್ಟ್ ಆದೇಶ ನೀಡಿದೆ.
ನವದೆಹಲಿ : ಮಾಜಿ ಪ್ರಧಾನಿ ಇಂದಿರಾ ಗಾಂಧಿ ಹತ್ಯೆಯ ಬಳಿಕ 1984ರಲ್ಲಿ ದೆಹಲಿಯಲ್ಲಿ ನಡೆದ ಸಿಖ್ ವಿರೋಧಿ ಹಿಂಸಾಚಾರದಲ್ಲಿ ಮೂವರ ಹತ್ಯೆಗೆ ಸಂಬಂಧಿಸಿದಂತೆ ಕಾಂಗ್ರೆಸ್ ನಾಯಕ ಜಗದೀಶ್ ಟೈಟ್ಲರ್ ವಿರುದ್ಧ ಆರೋಪಪಟ್ಟಿ ದಾಖಲಿಸಲು ಸಿಬಿಐ ವಿಶೇಷ ಕೋರ್ಟ್ ಆದೇಶ ನೀಡಿದೆ.
ಪುಲ್ ಬಂಗಶ್ ಪ್ರದೇಶದಲ್ಲಿ ನಡೆದ ಸಿಖ್ಖರ ಹತ್ಯೆ ಪ್ರಕರಣದಲ್ಲಿ ಕೋರ್ಟ್ ಈ ಆದೇಶ ನೀಡಿದ್ದು, ‘ಟೈಟ್ಲರ್ ವಿರುದ್ಧ ವಿಚಾರಣೆ ನಡೆಸಲು ಸಾಕಷ್ಟು ಆಧಾರಗಳಿವೆ’ ಎಂದು ಹೇಳಿದೆ.
ಇದಕ್ಕೂ ಮೊದಲು ಸಿಬಿಐ ಪೊಲೀಸರು ಸಲ್ಲಿಸಿದ ಪ್ರಾಥಮಿಕ ಆರೋಪಪಟ್ಟಿಯಲ್ಲಿ ‘1984ರ ನ.1ರಂದು ಪುಲ್ ಬಂಗಶ್ ಪ್ರದೇಶದಲ್ಲಿ ಬಿಳಿ ಅಂಬಾಸಿಡರ್ ಕಾರಿನಲ್ಲಿ ಬಂದಿಳಿದ ಟೈಟ್ಲರ್, ‘ಸಿಖ್ಖರನ್ನು ಕೊಲ್ಲಿ. ಅವರು ನಮ್ಮ ತಾಯಿಯನ್ನು ಕೊಂದಿದ್ದಾರೆ’ ಎಂದು ಕರೆ ನೀಡಿ ಪ್ರಚೋದಿಸಿದ್ದರು. ಬಳಿಕ ಅಲ್ಲಿ ಮೂವರು ಸಿಖ್ಖರ ಹತ್ಯೆಯಾಗಿತ್ತು’ ಎಂದು ಸಾಕ್ಷಿಯೊಬ್ಬರ ಹೇಳಿಕೆಯನ್ನು ದಾಖಲಿಸಲಾಗಿತ್ತು. ಅದನ್ನು ಆಧರಿಸಿ ಆರೋಪಪಟ್ಟಿ ದಾಖಲಿಸಲು ಕೋರ್ಟ್ ಅನುಮತಿ ನೀಡಿದ್ದು, ಸೆ.13ಕ್ಕೆ ವಿಚಾರಣೆಯನ್ನು ಮುಂದೂಡಿದೆ.