ಭಾರೀ ಮಳೆಗೆ ಈಶಾನ್ಯದಲ್ಲಿ 31 ಬಲಿ

| Published : May 29 2024, 12:49 AM IST

ಸಾರಾಂಶ

ರೆಮಲ್‌ ಚಂಡಮಾರುತ ಬಾಂಗ್ಲಾದೇಶ ಮತ್ತು ಪಶ್ಚಿಮ ಬಂಗಾಳದಲ್ಲಿ ಭಾರೀ ಅನಾಹುತ ಸೃಷ್ಟಿಸಿದ ಮಾದರಿಯಲ್ಲೇ ದೇಶದ ಈಶಾನ್ಯ ರಾಜ್ಯಗಳಾದ ಮಿಜೋರಂ, ನಾಗಾಲ್ಯಾಂಡ್‌, ಅಸ್ಸಾಂ, ಮೇಘಾಲಯದಲ್ಲೂ ಭಾರೀ ಸಾವು ನೋವಿಗೆ ಕಾರಣವಾಗಿದೆ.

ರೆಮಲ್‌ ಚಂಡಮಾರುತದಿಂದ ಹಲವು ರಾಜ್ಯಗಳಲ್ಲಿ ಭಾರೀ ಮಳೆಐಜ್ವಾಲ್‌, ಗುವಾಹಟಿ: ರೆಮಲ್‌ ಚಂಡಮಾರುತ ಬಾಂಗ್ಲಾದೇಶ ಮತ್ತು ಪಶ್ಚಿಮ ಬಂಗಾಳದಲ್ಲಿ ಭಾರೀ ಅನಾಹುತ ಸೃಷ್ಟಿಸಿದ ಮಾದರಿಯಲ್ಲೇ ದೇಶದ ಈಶಾನ್ಯ ರಾಜ್ಯಗಳಾದ ಮಿಜೋರಂ, ನಾಗಾಲ್ಯಾಂಡ್‌, ಅಸ್ಸಾಂ, ಮೇಘಾಲಯದಲ್ಲೂ ಭಾರೀ ಸಾವು ನೋವಿಗೆ ಕಾರಣವಾಗಿದೆ. ಮಳೆ ಸಂಬಂಧಿ ಘಟನೆಗಳಿಗೆ 4 ರಾಜ್ಯದಲ್ಲಿ ಒಂದೇ ದಿನ 31 ಜನ ಸಾವನ್ನಪ್ಪಿದ್ದು, ನೂರಾರು ಜನರು ಗಾಯಗೊಂಡಿದ್ದಾರೆ. ಜೊತೆಗೆ ಭಾರೀ ಪ್ರಮಾಣದಲ್ಲಿ ಅಸ್ತಿಪಾಸ್ತಿಗೂ ಹಾನಿಯಾಗಿದೆ.ಮಿಜೋರಂ ರಾಜಧಾನಿ ಐಜ್ವಾಲ್‌ನ ಹೊರವಲಯವಾದ ಮೆಲ್ತುಮ್‌ ಮತ್ತು ಹ್ಲಿಮೆನ್‌ ಪ್ರದೇಶದ ನಡುವಿನ ಕಲ್ಲು ಕ್ವಾರಿಯಲ್ಲಿ ಮಂಗಳವಾರ ಬೆಳಗ್ಗೆ 6 ಗಂಟೆ ವೇಳೆಗೆ ಕುಸಿತ ಸಂಭವಿಸಿದೆ. ಈ ವೇಳೆ 4 ವರ್ಷದ ಬಾಲಕ, 6 ವರ್ಷದ ಬಾಲಕಿ ಸೇರಿ 13 ಜನರು ಸಾವನ್ನಪ್ಪಿದ್ದಾರೆ. ಇಬ್ಬರನ್ನು ಘಟನಾ ಸ್ಥಳದಿಂದ ರಕ್ಷಿಸಲಾಗಿದ್ದು, ಇನ್ನೂ ಹಲವರು ನಾಪತ್ತೆಯಾಗಿದ್ದಾರೆ.ಇದಲ್ಲದೆ ರಾಜ್ಯದ ಇತರೆ ಹಲವು ಭಾಗಗಳಲ್ಲಿ ಭೂಕುಸಿತ, ರಸ್ತೆ ಕುಸಿತ, ಕಟ್ಟಡ ಕುಸಿತದ ಘಟನೆಗಳಿಗೆ 9 ಜನರು ಬಲಿಯಾಗಿದ್ದಾರೆ.ಇನ್ನೊಂದೆಡೆ ನಾಗಾಲ್ಯಾಂಡ್‌ನಲ್ಲಿ ಮಳೆ ಸಂಬಂಧಿ ಘಟನೆಗಳಿಗೆ 4 ಮಂದಿ ಸಾವನ್ನಪ್ಪಿದ್ದು, 40ಕ್ಕೂ ಹೆಚ್ಚು ಮನೆಗಳಿಗೆ ಹಾನಿ ಉಂಟಾಗಿದೆ. ಅದೇ ರೀತಿ ಅಸ್ಸಾಂನಲ್ಲಿ 3 ಮಂದಿ ಮೃತಪಟ್ಟಿದ್ದು, 17 ಮಂದಿ ಗಾಯಗೊಂಡಿದ್ದಾರೆ. ಮೇಘಾಲಯಲ್ಲಿ ಮಳೆ ಸಂಬಂಧಿ ಅನಾಹುತಕ್ಕೆ ಇಬ್ಬರು ಸಾವನ್ನಪ್ಪಿದ್ದಾರೆ.

ಕೇರಳದಲ್ಲ ಮುಂಗಾರು ಪೂರ್ವ ಮಳೆ ಆರ್ಭಟಕೊಚ್ಚಿ/ತಿರುವನಂತಪುರ: ಕೇರಳದಲ್ಲಿ ಮಂಗಳವಾರವೂ ಮುಂಗಾರು ಪೂರ್ವ ಮಳೆ ತನ್ನ ಆರ್ಭಟ ಮುಂದುವರೆಸಿದೆ. ಮಳೆ ಸಂಬಂಧಿ ಅನಾಹುತಕ್ಕೆ ಓರ್ವ ಮೀನುಗಾರ ಮೃತಪಟ್ಟಿದ್ದಾನೆ. ಜೊತೆಗೆ ಮಧ್ಯ ಕೇರಳದ ಹಲವು ಜಿಲ್ಲೆಗಳಲ್ಲಿ ಪ್ರವಾಹ ಪರಿಸ್ಥಿತಿ ಉಂಟಾಗಿ ಜನಜೀವನ ಅಸ್ತವ್ಯಸ್ಥಗೊಂಡಿದೆ. ತಗ್ಗು ಪ್ರದೇಶದಲ್ಲಿ ನೀರು ನುಗ್ಗಿ, ಎತ್ತರದ ಪ್ರದೇಶಗಳಲ್ಲಿ ಗುಡ್ಡ ಕುಸಿತದಂತಹ ಘಟನೆಗಳು ನಡೆದವು. ಮಳೆಯಿಂದಾಗಿ ಕೇರಳದಾದ್ಯಂತ ಪ್ರವಾಸಿಗರಿಗೆ ನಿಷೇಧ ಹೇರಲಾಗಿತ್ತು. ಭಾರಿ ಮಳೆಯಿಂದಾಗಿ ನದಿಗಳಲ್ಲಿ ನೀರಿನ ಮಟ್ಟ ಹೆಚ್ಚಾದ ಪರಿಣಾಮ ನದಿಯ ಆಸುಪಾಸಿನಲ್ಲಿರುವವರನ್ನು ಸ್ಥಳಾಂತರ ಮಾಡುವಂತೆ ಸರ್ಕಾರ ಕ್ರಮ ವಹಿಸಿತು. ಜೊತೆಗೆ ಜಲಾಶಯಗಳ ಸುತ್ತ ಇರುವ ಜನವಸತಿಯನ್ನು ಸ್ಥಳಾಂತರಗೊಳಿಸಲಾಯಿತು.