ಸಾರಾಂಶ
ಡಾರ್ಜೀಲಿಂಗ್ (ಪಶ್ಚಿಮ ಬಂಗಾಳ) : ಪಶ್ಚಿಮ ಬಂಗಾಳದ ಡಾರ್ಜೀಲಿಂಗ್ ಬೆಟ್ಟಗಳಲ್ಲಿ ಭಾನುವಾರ ಸುರಿದ ಧಾರಾಕಾರ ಮಳೆಯಿಂದಾಗಿ ಹಲವೆಡೆ ಭೂಕುಸಿತ ಸಂಭವಿಸಿದ್ದು, ಪ್ರವಾಹ ಪರಿಸ್ಥಿತಿ ನಿರ್ಮಾಣವಾಗಿದೆ. ಮಳೆ ಅವಾಂತರದಿಂದಾಗಿ ಮಕ್ಕಳು ಸೇರಿದಂತೆ ಕನಿಷ್ಠ 20 ಮಂದಿ ಸಾವನ್ನಪ್ಪಿದ್ದು, ಅನೇಕರು ಗಾಯಗೊಂಡ ದಾರುಣ ಘಟನೆ ನಡೆದಿದೆ.
ಕೇವಲ 12 ಗಂಟೆ ಅವಧಿಯಲ್ಲಿ 300 ಮಿ.ಮೀ.ಗೂ ಅಧಿಕ ಮಳೆಯಾಗಿದೆ. ಸರ್ಸಾಲಿ, ಜಸ್ಬಿರ್ಗಾಂ, ಮಿರಿಕ್ ಬಸ್ತಿ, ಧಾರ್ ಗಾವ್ (ಮೆಚಿ) ಮತ್ತು ಮಿರಿಕ್ ಸರೋವರ ಪ್ರದೇಶ ಸೇರಿದಂತೆ ಹಲವು ಸ್ಥಳಗಳಲ್ಲಿ ಸಾವುನೋವು ವರದಿಯಾಗಿದೆ. ಮಿರಿಕ್ ಮತ್ತು ಸುಖಿಯಾ ಪೋಖರಿ ಮೊದಲಾದೆಡೆ ಭೂಕುಸಿತವುಂಟಾಗಿದೆ. ಬಂಗಾಳ-ಸಿಕ್ಕಿಂ, ಡಾರ್ಜೀಲಿಂಗ್-ಸಿಲಿಗುರಿ ಸೇರಿದಂತೆ ಪ್ರಮುಖ ಮಾರ್ಗಗಳಲ್ಲಿ ಭೂಕುಸಿತ ಸಂಭವಿಸಿದ್ದು, ರಸ್ತೆ ತಡೆಗೆ ಕಾರಣವಾಗಿದೆ. ಮಳೆ ಭೀಕರತೆಗೆ ಹಲವಾರು ಮನೆಗಳು ಕೊಚ್ಚಿಹೋಗಿದ್ದು, ದೂರದ ಹಳ್ಳಿಗಳ ಸಂಪರ್ಕ ಕಡಿತಗೊಂಡಿದೆ.
ರಕ್ಷಣಾ ಕಾರ್ಯ, ಮುನ್ನೆಚ್ಚರಿಕೆ: ಪೊಲೀಸರು, ವಿಪತ್ತು ನಿರ್ವಹಣಾ ತಂಡ ಮತ್ತು ಸ್ಥಳೀಯ ಆಡಳಿತ ಸಂತ್ರಸ್ತರ ರಕ್ಷಣಾ ಕಾರ್ಯದಲ್ಲಿ ನಿರತವಾಗಿವೆ. ರಾಷ್ಟ್ರೀಯ ವಿಪತ್ತು ಸ್ಪಂದನಾ ಪಡೆಯು (ಎನ್‌ಡಿಆರ್‌ಎಫ್) ಅತ್ಯಂತ ಹಾನಿಗೊಳಗಾದ ಪ್ರದೇಶಗಳಲ್ಲಿ ಒಂದಾದ ಮಿರಿಕ್ ಸರೋವರ ಪ್ರದೇಶದಲ್ಲಿ ರಕ್ಷಣಾ ಕಾರ್ಯದಲ್ಲಿ ತೊಡಗಿದೆ. ನಾಗರಕಟಾದ ಧಾರ್ ಗಾಂವ್‌ನಲ್ಲಿ ಭೂಕುಸಿತದಿಂದಾಗಿ ನೆಲಸಮವಾದ ಮನೆಗಳ ಅವಶೇಷಗಳಡಿಯಿಂದ ಕನಿಷ್ಠ 40 ಜನರನ್ನು ರಕ್ಷಿಸಲಾಗಿದೆ.
ಅಹಿತಕರ ಘಟನೆಗಳನ್ನು ತಡೆಗಟ್ಟುವ ಸಲುವಾಗಿ, ಗೂರ್ಖಾಲ್ಯಾಂಡ್ ಪ್ರಾದೇಶಿಕ ಆಡಳಿತವು ಡಾರ್ಜೀಲಿಂಗ್‌ನ ಟೈಗರ್ ಹಿಲ್ ಮತ್ತು ರಾಕ್ ಗಾರ್ಡನ್ ಸೇರಿದಂತೆ ಪ್ರವಾಸಿ ತಾಣಗಳನ್ನು ಮುಚ್ಚಲು ನಿರ್ಧರಿಸಿದೆ. ರೈಲು ಸೇವೆಗಳನ್ನು ಸಹ ಸ್ಥಗಿತಗೊಳಿಸಲಾಗಿದೆ. ಸೋಮವಾರದವರೆಗೂ ಅತಿ ಹೆಚ್ಚು ಮಳೆಯಾಗುವ ಸಾಧ್ಯತೆ ಇದೆ ಎಂದು ಭಾರತೀಯ ಹವಾಮಾನ ಇಲಾಖೆ (ಐಎಂಡಿ) ರೆಡ್ ಅಲರ್ಟ್ ಘೋಷಿಸಿದೆ. ಸ್ಥಳೀಯರು ಮತ್ತು ಪ್ರವಾಸಿಗರಿಗಾಗಿ 9147889078 ಸಹಾಯವಾಣಿ ಆರಂಭಿಸಲಾಗಿದೆ.
ಇಂದು ಸಿಎಂ ಮಮತಾ ಭೇಟಿ: ಪರಿಸ್ಥಿತಿಯನ್ನು ಅವಲೋಕಿಸಲು ಪ್ರವಾಹಪೀಡಿತ ಪ್ರದೇಶಗಳಿಗೆ ಸೋಮವಾರ ಭೇಟಿ ನೀಡುವುದಾಗಿ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ತಿಳಿಸಿದ್ದಾರೆ. ಪ್ರಸ್ತುತ ರಾಜ್ಯ ಸಚಿವಾಲಯದ ನಿಯಂತ್ರಣ ಕೊಠಡಿಯಿಂದ ಬೆಳವಣಿಗೆಗಳನ್ನು ಮೇಲ್ವಿಚಾರಣೆ ಮಾಡುತ್ತಿದ್ದಾರೆ. ಅಪಾರ ಹಾನಿ, ಸಾವುನೋವಿನ ಕುರಿತು ವಿಷಾದ ವ್ಯಕ್ತಪಡಿಸಿರುವ ಅವರು ಮೃತರ ಕುಟುಂಬಗಳಿಗೆ ಪರಿಹಾರಧನ ಘೋಷಿಸಿದ್ದಾರೆ.
ಪ್ರಧಾನಿ ಮೋದಿ ಸಂತಾಪ:ಮಳೆ ಮತ್ತು ಭೂಕುಸಿತದಿಂದ ಮೃತಪಟ್ಟವರಿಗೆ ಪ್ರಧಾನಿ ನರೇಂದ್ರ ಮೋದಿ ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ. ‘ಜೀವಹಾನಿಯಿಂದ ತೀವ್ರ ನೋವುಂಟಾಗಿದೆ. ತಮ್ಮ ಪ್ರೀತಿಪಾತ್ರರನ್ನು ಕಳೆದುಕೊಂಡವರಿಗೆ ಸಂತಾಪ ಸೂಚಿಸುತ್ತೇನೆ. ಗಾಯಾಳುಗಳು ಬೇಗ ಚೇತರಿಸಿಕೊಳ್ಳಲಿ. ಪರಿಸ್ಥಿತಿಯನ್ನು ಸೂಕ್ಷ್ಮವಾಗಿ ಗಮನಿಸಲಾಗುತ್ತಿದೆ. ಸಂತ್ರಸ್ತರಿಗೆ ಸಾಧ್ಯವಿರುವ ಎಲ್ಲ ಸಹಾಯವನ್ನು ನೀಡಲು ನಮ್ಮ ಸರ್ಕಾರ ಬದ್ಧವಾಗಿದೆ’ ಎಂದು ಎಕ್ಸ್‌ನಲ್ಲಿ ತಿಳಿಸಿದ್ದಾರೆ.
ನೇಪಾಳದಲ್ಲಿ ಭೀಕರ ಪ್ರವಾಹ, ಭೂಕುಸಿತ: 51 ಸಾವು
ಕಾಠ್ಮಂಡು : ನೇಪಾಳದಲ್ಲಿ ಕಳೆದೆರಡು ದಿನಗಳಿಂದ ಧಾರಾಕಾರವಾಗಿ ಸುರಿಯುತ್ತಿರುವ ಮಳೆಯಿಂದಾಗಿ ಹಲವೆಡೆ ಭೀಕರ ಪ್ರವಾಹ ಮತ್ತು ಭೂಕುಸಿತ ಸಂಭವಿಸಿದೆ. ಈ ವೇಳೆ ಕನಿಷ್ಠ 51 ಮಂದಿ ಸಾವನ್ನಪ್ಪಿದ್ದು, 5 ಮಂದಿ ನಾಪತ್ತೆಯಾಗಿದ್ದಾರೆ.ಶನಿವಾರ ರಾತ್ರಿ ಸುರಿದ ಭಾರೀ ಮಳೆಗೆ ಭೂಕುಸಿತವುಂಟಾಗಿ ಕೋಶಿ ಪ್ರಾಂತ್ಯದ ಇಲಾಮ್ ಜಿಲ್ಲೆಯ ವಿವಿಧ ಸ್ಥಳಗಳಲ್ಲಿ 37 ಜನರು ಸಾವನ್ನಪ್ಪಿದ್ದಾರೆ. ಭಾನುವಾರ ಬೆಳಿಗ್ಗೆ ರೌತಹತ್ ಜಿಲ್ಲೆಯಲ್ಲಿ ಸಿಡಿಲು ಬಡಿದು ಮೂವರು ಮರಣಿಸಿದ್ದಾರೆ. ಮಳೆ ಅವಾಂತರದಿಂದ ಕನಿಷ್ಠ 10 ಮಂದಿ ಗಾಯಗೊಂಡಿದ್ದಾರೆ. ರಸುವಾ ಜಿಲ್ಲೆಯಲ್ಲಿ ಪ್ರವಾಹಕ್ಕೆ ಸಿಲುಕಿ ನಾಲ್ವರು ನಾಪತ್ತೆಯಾಗಿದ್ದಾರೆ. ಪಂಚತಾರ್ ಜಿಲ್ಲೆಯಲ್ಲಿ ಭೂಕುಸಿತದಲ್ಲಿ ವ್ಯಕ್ತಿಯೊಬ್ಬ ಸಮಾಧಿಯಾಗಿದ್ದಾರೆ ಎಂದು ರಾಷ್ಟ್ರೀಯ ವಿಪತ್ತು ಅಪಾಯ ಕಡಿತ ಮತ್ತು ನಿರ್ವಹಣಾ ಪ್ರಾಧಿಕಾರ (ಎನ್‌ಡಿಆರ್‌ಆರ್‌ಎಂಎ) ತಿಳಿಸಿದೆ.
ರಕ್ಷಣಾ ಕಾರ್ಯ:
ನೇಪಾಳ ಸೇನೆ, ಪೊಲೀಸರು ಮತ್ತು ಸಶಸ್ತ್ರ ಪೊಲೀಸ್ ಪಡೆಗಳು ರಕ್ಷಣಾ ಕಾರ್ಯಾಚರಣೆಯಲ್ಲಿ ಭಾಗಿಯಾಗಿವೆ.
ಭದ್ರತಾ ಸಿಬ್ಬಂದಿ ಇಲಾಮ್ ಜಿಲ್ಲೆಯಿಂದ ಗರ್ಭಿಣಿ ಸೇರಿದಂತೆ ನಾಲ್ವರನ್ನು ಹೆಲಿಕಾಪ್ಟರ್‌ಗಳಲ್ಲಿ ಧರಣ್ ಪುರಸಭೆಯ ಆಸ್ಪತ್ರೆಗೆ ಸಾಗಿಸಿದ್ದಾರೆ. ಬಾಗ್ಮತಿ ಮತ್ತು ರಾಪ್ತಿ ನದಿ ಸುತ್ತಮುತ್ತಲ ಪ್ರದೇಶಗಳಲ್ಲಿ ರೆಡ್ ಅಲರ್ಟ್ ಘೋಷಿಸಲಾಗಿದೆ. ತುರ್ತು ಸಂದರ್ಭದ ಹೊರತಾಗಿ ವಾಹನಗಳಲ್ಲಿ ದೀರ್ಘ ಪ್ರಯಾಣ ಕೈಗೊಳ್ಳದಂತೆ ಅಧಿಕಾರಿಗಳು ಜನರಿಗೆ ಮನವಿ ಮಾಡಿದ್ದಾರೆ.
ವಾಹನ ಓಡಾಟ, ವಿಮಾನಗಳಿಗೆ ನಿರ್ಬಂಧ: ಮುಂದಿನ 3 ದಿನಗಳವರೆಗೆ ಭೂಕುಸಿತದ ಸಾಧ್ಯತೆಯಿರುವ ಕಾರಣ ಕಾಠ್ಮಂಡು ಪ್ರದೇಶದಲ್ಲಿ ವಾಹನಗಳ ಪ್ರವೇಶ ಮತ್ತು ನಿರ್ಗಮನವನ್ನು ನಿರ್ಬಂಧಿಸಲಾಗಿದೆ. ಹವಾಮಾನ ವೈಪರೀತ್ಯದಿಂದಾಗಿ ಕಾಠ್ಮಂಡು, ಭರತಪುರ, ಜನಕಪುರ, ಭದ್ರಾಪುರ, ಪೋಖ್ರಾ ಮತ್ತು ತುಮ್ಲಿಂಗ್‌ತಾರ್‌ಗಳಿಂದ ದೇಶೀಯ ವಿಮಾನಗಳನ್ನು ಮುಂದಿನ ಸೂಚನೆಯವರೆಗೂ ಸ್ಥಗಿತಗೊಳಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಪ್ರಧಾನಿ ಮೋದಿ ನೆರವು ಘೊಷಣೆ:
ನೇಪಾಳದಲ್ಲಿ ಭಾರೀ ಮಳೆಯಿಂದ ಉಂಟಾದ ಜೀವಹಾನಿ ದುಃಖಕರವಾಗಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಭಾನುವಾರ ಹೇಳಿದ್ದಾರೆ. ನೆರೆರಾಷ್ಟ್ರಕ್ಕೆ ಅಗತ್ಯವಿರುವ ಯಾವುದೇ ಸಹಾಯವನ್ನು ಒದಗಿಸಲು ಭಾರತ ಬದ್ಧವಾಗಿದೆ ಎಂದು ತಿಳಿಸಿದ್ದಾರೆ.ಎಕ್ಸ್‌ನಲ್ಲಿ ಪೋಸ್ಟ್ ಮಾಡಿದ ಪ್ರಧಾನಿ, ‘ನೇಪಾಳದಲ್ಲಿ ಭಾರೀ ಮಳೆಯಿಂದ ಉಂಟಾದ ಜೀವಹಾನಿ ಮತ್ತು ನಾಶ ದುಃಖಕರವಾಗಿದೆ. ಈ ಕಷ್ಟದ ಸಮಯದಲ್ಲಿ ನಾವು ನೇಪಾಳದ ಜನರು ಮತ್ತು ಸರ್ಕಾರದ ಜೊತೆ ನಿಲ್ಲುತ್ತೇವೆ. ಸ್ನೇಹಪರ ನೆರೆರಾಷ್ಟ್ರ ಮತ್ತು ಮೊದಲ ಪ್ರತಿಕ್ರಿಯೆ ನೀಡುವ ರಾಷ್ಟ್ರವಾಗಿ, ಅಗತ್ಯವಿರುವ ಯಾವುದೇ ಸಹಾಯವನ್ನು ಒದಗಿಸಲು ಭಾರತ ಬದ್ಧವಾಗಿದೆ’ ಎಂದಿದ್ದಾರೆ.
ಭೂತಾನ್‌ನಲ್ಲೂ ಪ್ರವಾಹ : ಸಂತ್ರಸ್ತರ ರಕ್ಷಿಸಿದ ಭಾರತೀಯ ಸೇನೆ
ನವದೆಹಲಿ : ಡಾರ್ಜೀಲಿಂಗ್ ಹಾಗೂ ನೇಪಾಳದಲ್ಲಿ ಭಾರಿ ಪ್ರವಾಹ ಸಂಭವಿಸಿರುವ ನಡುವೆ ಭೂತಾನ್‌ನಲ್ಲೂ ಪ್ರವಾಹ ಉಂಟಾಗಿದೆ. ಅಮೋಚು ನದಿಯ ಸುತ್ತಮುತ್ತಲ ಪ್ರದೇಶದಲ್ಲಿ ಹಠಾತ್ ಪ್ರವಾಹದಿಂದ ಸಂಭವಿಸಿದೆ.
ಇದರ ಬೆನ್ನಲ್ಲೇ ಭೂತಾನ್‌ನ ರಕ್ಷಣಾ ಸಿಬ್ಬಂದಿ ಜತೆ ಭಾರತೀಯ ಸೇನೆ ಕೂಡ ಕೈಜೋಡಿಸಿದ್ದು, ರಕ್ಷಣಾ ಕಾರ್ಯ ಆರಂಭಿಸಿದೆ. ಪ್ರವಾಹದಿಂದಾಗಿ ಹಲವಾರು ಕುಟುಂಬಗಳು ಮತ್ತು ಕಾರ್ಮಿಕರು ಸಿಲುಕಿದ್ದು, ಹೆಲಿಕಾಪ್ಟರ್ ಮೂಲಕ ಅವರ ರಕ್ಷಣೆಯಲ್ಲಿ ಸೇನೆ ನಿರತವಾಗಿದೆ.ಭೂತಾನ್‌ನ ರಾಷ್ಟ್ರೀಯ ವಿಮಾನಯಾನ ಸಂಸ್ಥೆಯಾದ ಡ್ರುಕೇರ್‌ನ ಹೆಲಿಕಾಪ್ಟರ್, ಪ್ರತಿಕೂಲ ಹವಾಮಾನದಿಂದಾಗಿ ಟೇಕ್ ಆಫ್ ಆಗಲಿಲ್ಲ. ಹೀಗಾಗಿ ಆ ದೇಶವು ಭಾರತದಿಂದ ತುರ್ತು ಸಹಾಯ ಕೋರಿತು. ಇದಕ್ಕೆ ತ್ವರಿತವಾಗಿ ಪ್ರತಿಕ್ರಿಯಿಸಿದ ಭಾರತೀಯ ಸೇನೆ, ಸಿಲುಕಿದ್ದ ಕಾರ್ಮಿಕರನ್ನು ಸುರಕ್ಷಿತವಾಗಿ ಸಾಗಿಸಲು ಮತ್ತು ಅವರಿಗೆ ತಕ್ಷಣದ ವೈದ್ಯಕೀಯ ಆರೈಕೆ ದೊರೆಯುವಂತೆ ನೋಡಿಕೊಳ್ಳಲು 2 ಹೆಲಿಕಾಪ್ಟರ್‌ಗಳನ್ನು ನಿಯೋಜಿಸಿತು ಎಂದು ಮೂಲಗಳು ತಿಳಿಸಿವೆ.
ಇದಕ್ಕಾಗಿ ಭೂತಾನ್ ರಾಜಮನೆತನದ ಸರ್ಕಾರ ಭಾರತಕ್ಕೆ ಕೃತಜ್ಞತೆ ಸಲ್ಲಿಸಿದೆ.