ತಾಯಂದಿರ ಮರಣ ಇಳಿಕೆಗಾಗಿ 24 ಗಂಟೆ ತಜ್ಞರ ಸೇವೆ : ದಿನೇಶ್‌

| N/A | Published : Sep 27 2025, 11:29 AM IST

infant child
ತಾಯಂದಿರ ಮರಣ ಇಳಿಕೆಗಾಗಿ 24 ಗಂಟೆ ತಜ್ಞರ ಸೇವೆ : ದಿನೇಶ್‌
Share this Article
  • FB
  • TW
  • Linkdin
  • Email

ಸಾರಾಂಶ

  ತಾಯಂದಿರ ಮರಣ ಪ್ರಮಾಣ ಕಡಿಮೆ ಮಾಡುವ ಉದ್ದೇಶದಿಂದ ರಾಜ್ಯದ ಎಲ್ಲ ತಾಲೂಕು ಆಸ್ಪತ್ರೆ ಮತ್ತು ಹೆಚ್ಚು ಹೆರಿಗೆಯಾಗುವ ಸಮುದಾಯ ಆರೋಗ್ಯ ಕೇಂದ್ರಗಳಲ್ಲಿ ದಿನದ 24 ಗಂಟೆಯೂ ತಜ್ಞ ವೈದ್ಯರು ಮತ್ತು ಇತರ ಸಿಬ್ಬಂದಿ ಲಭ್ಯ ಇರುವಂತೆ ಮಾಡಲು ಸರ್ಕಾರ ಕ್ರಮ ಕೈಗೊಳ್ಳುತ್ತಿದೆ - ದಿನೇಶ್‌ ಗುಂಡೂರಾವ್‌ ತಿಳಿಸಿದರು.

 ಬೆಂಗಳೂರು :  ರಾಜ್ಯದ ಆಸ್ಪತ್ರೆಗಳಲ್ಲಿ ತಾಯಂದಿರ ಮರಣ ಪ್ರಮಾಣ ಕಡಿಮೆ ಮಾಡುವ ಉದ್ದೇಶದಿಂದ ರಾಜ್ಯದ ಎಲ್ಲ ತಾಲೂಕು ಆಸ್ಪತ್ರೆ ಮತ್ತು ಹೆಚ್ಚು ಹೆರಿಗೆಯಾಗುವ ಸಮುದಾಯ ಆರೋಗ್ಯ ಕೇಂದ್ರಗಳಲ್ಲಿ ದಿನದ 24 ಗಂಟೆಯೂ ತಜ್ಞ ವೈದ್ಯರು ಮತ್ತು ಇತರ ಸಿಬ್ಬಂದಿ ಲಭ್ಯ ಇರುವಂತೆ ಮಾಡಲು ಸರ್ಕಾರ ಕ್ರಮ ಕೈಗೊಳ್ಳುತ್ತಿದೆ ಎಂದು ಆರೋಗ್ಯ ಸಚಿವ ದಿನೇಶ್‌ ಗುಂಡೂರಾವ್‌ ತಿಳಿಸಿದರು.

ವಿಕಾಸಸೌಧದಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಸದ್ಯ ತಾಲೂಕು ಆಸ್ಪತ್ರೆಗಳಲ್ಲಿ ತಲಾ ಒಬ್ಬರು ಸ್ತ್ರೀರೋಗ ತಜ್ಞರು, ಅರವಳಿಕೆ ತಜ್ಞರು ಮತ್ತು ಮಕ್ಕಳ ತಜ್ಞರು ಕಾರ್ಯನಿರ್ವಹಿಸುತ್ತಿದ್ದಾರೆ. ಅದರಲ್ಲಿ ಒಬ್ಬರು ಅಲಭ್ಯರಾದರೂ ಹೆರಿಗೆ ಸೇರಿ ಮತ್ತಿತರ ಸೇವೆಯಲ್ಲಿ ವ್ಯತ್ಯಯವಾಗುತ್ತದೆ. ಅದನ್ನು ತಪ್ಪಿಸಲು ಇನ್ನು ಮುಂದೆ ತಾಲೂಕು ಆಸ್ಪತ್ರೆ ಮತ್ತು ಹೆಚ್ಚು ಹೆರಿಗೆಯಾಗುವ ಸಮಯದಾಯ ಆರೋಗ್ಯ ಕೇಂದ್ರಗಳಲ್ಲಿ ಪ್ರತಿ ಪಾಳಿಯಲ್ಲಿ ತಲಾ ಇಬ್ಬರು ಸ್ತ್ರೀರೋಗ ತಜ್ಞರು, ಅರವಳಿಕೆ ತಜ್ಞರು ಮತ್ತು ಮಕ್ಕಳ ತಜ್ಞರು ಕಾರ್ಯನಿರ್ವಹಿಸುವಂತೆ ಮಾಡಲಾಗುತ್ತಿದೆ ಎಂದರು.

ತಾಲೂಕು ಆಸ್ಪತ್ರೆಗಳು ಕ್ಲಿಷ್ಟಕರವಾದ ಹೆರಿಗೆ ಮತ್ತು ಸಿಸೇರಿಯನ್‌ ಶಸ್ತ್ರಚಿಕಿತ್ಸೆ ನಡೆಸುವ ಆಸ್ಪತ್ರೆಗಳಾಗಿ (ಸಿಇಎಂಒಎನ್‌ಸಿ) ಕಾರ್ಯನಿರ್ವಹಿಸಲಿವೆ. ಜತೆಗೆ ಹೆಚ್ಚಿನ ಹೆರಿಗೆಯಾಗುವ 41 ಸಮುದಾಯ ಆರೋಗ್ಯ ಕೇಂದ್ರಗಳಲ್ಲಿ ತಲಾ ಇಬ್ಬರಂತೆ ತ್ರಿವಳಿ ತಜ್ಞರು ಕಾರ್ಯನಿರ್ವಹಿಸುವಂತೆ ಮಾಡಲಾಗುತ್ತಿದೆ. ಇನ್ನು, ಕಡಿಮೆ ಹೆರಿಗೆ ಆಗುತ್ತಿರುವ 230ಕ್ಕೂ ಹೆಚ್ಚಿನ ಸಮುದಾಯ ಆರೋಗ್ಯ ಕೇಂದ್ರಗಳಲ್ಲಿನ ತಜ್ಞರನ್ನು ತಾಲೂಕು ಆಸ್ಪತ್ರೆಗಳಿಗೆ ಮರು ನಿಯೋಜಿಸಲಾಗುತ್ತದೆ. ಆದರೆ, ತಾಲೂಕು ಆಸ್ಪತ್ರೆಗಳಿಂದ ದೂರ ಇರುವ ಸಮುದಾಯ ಆರೋಗ್ಯ ಕೇಂದ್ರಗಳಲ್ಲಿ ತಜ್ಞರನ್ನು ಹಾಗೆಯೇ ಮುಂದುವರಿಸಲಾಗುವುದು ಎಂದು ವಿವರಿಸಿದರು.60 ತಾಯಂದಿರ ಮರಣ:

ರಾಜ್ಯದಲ್ಲಿ ಸರಾಸರಿ 1 ಲಕ್ಷಕ್ಕೆ 60 ಮಂದಿ ತಾಯಂದಿರುವ ಮರಣ ಹೊಂದುತ್ತಿದ್ದಾರೆ. ದಕ್ಷಿಣ ಭಾರತದ ಇತರ ರಾಜ್ಯಗಳಿಗೆ ಹೋಲಿಸಿದರೆ ಕರ್ನಾಟಕದಲ್ಲಿ ತಾಯಂದಿರ ಮರಣ ಸಂಖ್ಯೆ ಹೆಚ್ಚಿದೆ. ಅದನ್ನು ನಿಯಂತ್ರಿಸಲು ಎಲ್ಲ ಕ್ರಮ ಕೈಗೊಳ್ಳಲಾಗುತ್ತಿದೆ. ಹೆರಿಗೆಗೆ ಬಂದಾಗ ಸಕಾಲಕ್ಕೆ ತಜ್ಞರು ದೊರೆಯುವಂತೆ ಮಾಡುವ ಅಗತ್ಯವಿದ್ದು, ಅದಕ್ಕಾಗಿ ಹೊಸ ಬದಲಾವಣೆ ಮಾಡಲಾಗುತ್ತಿದೆ ಎಂದು ದಿನೇಶ್‌ ಗುಂಡೂರಾವ್‌ ತಿಳಿಸಿದರು.

ಆಸ್ಪತ್ರೆಗಳಲ್ಲಿ ರೇಡಿಯಾಲಜಿಸ್ಟ್‌ ಹುದ್ದೆಗಳ ಕೊರತೆಯಿದೆ. 189 ಆಸ್ಪತ್ರೆಗಳಿಗೆ 75 ಮಂದಿ ಮಾತ್ರ ರೇಡಿಯಾಲಜಿಸ್ಟ್‌ಗಳಿದ್ದಾರೆ. ಅದಕ್ಕಾಗಿ 114 ಹೊಸ ರೇಡಿಯಾಲಿಜಿಸ್ಟ್‌ಗಳ ನೇಮಕಕ್ಕೆ ಕ್ರಮ ಕೈಗೊಳ್ಳಲಾಗುವುದು. ಅದರೊಂದಿಗೆ ಕಡಿಮೆ ಒತ್ತಡವಿರುವ ಪ್ರಾಥಮಿಕ ಆರೋಗ್ಯ ಕೇಂದ್ರಗಳಿಂದ ಶುಶ್ರೂಷಕಾಧಿಕಾರಿಗಳನ್ನು ಸಿಇಎಂಒಎನ್‌ಸಿಗಳಿಗೆ ಮರು ನಿಯೋಜಿಸಲಾಗುವುದು. 15 ದಿನಗಳಲ್ಲಿ ನೇರ ನೇಮಕಾತಿಯ ಮೂಲಕ 220 ತಜ್ಞ ವೈದ್ಯರನ್ನು ನೇಮಿಸಲಾಗುವುದು ಎಂದು ಹೇಳಿದರು.

ತಜ್ಞರು ತಾಲೂಕು ಆಸ್ಪತ್ರೆಗಳ ಸಂಖ್ಯೆ ಖಾಲಿ ಇರುವ ಹುದ್ದೆಗಳು ಸಮುದಾಯ ಆರೋಗ್ಯ ಕೇಂದ್ರಗಳ ಸಂಖ್ಯೆ ಖಾಲಿ ಇರುವ ಹುದ್ದೆಗಳು

ಸ್ತ್ರಿರೋಗ ತಜ್ಞರು 148 11 274 140

ಅರವಳಿಕೆ ತಜ್ಞರು 148 21 274 188

ಮಕ್ಕಳ ತಜ್ಞರು 148 19 274 155

Read more Articles on