ಸಾರಾಂಶ
ಭೋಪಾಲ್: ಭಾರತೀಯರಿಗೆ ಬಾಯಿರುಚಿ ಹೆಚ್ಚು, ಹೌದು. ಆದರೆ ಈ ಮಟ್ಟಿಗೆ! ಮಧ್ಯಪ್ರದೇಶದ ಭದ್ವಾಹಿ ಹಳ್ಳಿಯಲ್ಲಿ ಜಲ ಸಂರಕ್ಷಣೆ ಕುರಿತಾದ ಪಂಚಾಯತ್ ಸಭೆಯೊಂದರಲ್ಲಿ ತರಿಸಲಾದ 12 ಕೆ.ಜಿ. ಒಣಹಣ್ಣು, 9 ಕೆ.ಜಿ. ಹಣ್ಣು, ಮತ್ತು 30 ಕೆ.ಜಿ. ಕುರುಕುಲು ತಿಂಡಿಯಷ್ಟನ್ನೂ ಬರೀ 24 ಜನ ಸೇರಿ ತಿಂದು ತೇಗಿದ ಘಟನೆ ನಡೆದಿದೆ.
ಇದಕ್ಕಾಗಿ 85,000 ರು. ಖರ್ಚಾಗಿದೆ. ಜಿಲ್ಲಾಧಿಕಾರಿ, ಹಿರಿಯ ಅಧಿಕಾರಿಗಳು, ಪಂಚಾಯತ್ ಪ್ರತಿನಿಧಿಗಳು ಮತ್ತು ಕೆಲ ಗ್ರಾಮಸ್ಥರು ಸೇರಿ ಒಟ್ಟು 24 ಜನ ಸಭೆಯಲ್ಲಿ ಹಾಜರಿದ್ದರು. ಈ ವೇಳೆ ತರಿಸಲಾದ ತಿನಿಸುಗಳ ಬಿಲ್ ವೈರಲ್ ಆಗುತ್ತಿದೆ. ಅದರ ಪ್ರಕಾರ, 6 ಕೆಜಿ ಗೋಡಂಬಿ, 3 ಕೆಜಿ ಒಣದ್ರಾಕ್ಷಿ, 3 ಕೆಜಿ ಬಾದಾಮಿ, 9 ಕೆಜಿ ಹಣ್ಣುಗಳು, 5 ಡಜನ್ ಬಾಳೆಹಣ್ಣುಗಳು ಮತ್ತು 30 ಕೆಜಿ ತಿಂಡಿಗಳನ್ನು ಖರೀದಿಸಲಾಗಿತ್ತು.
ಈ ಬಗ್ಗೆ ಮಾತನಾಡಿದ ಶಹದೋಲ್ ಜಿಲ್ಲಾಧಿಕಾರಿ, ‘ನಾನು ಒಣಹಣ್ಣುಗಳನ್ನು ತಿನ್ನುವುದಿಲ್ಲ. ಸಭೆಯಲ್ಲೂ ತಿಂದಿರಲಿಲ್ಲ. ಬಿಲ್ ನೋಡಿ ದಂಗಾಗಿ, ತನಿಖೆಗೆ ಆದೇಶಿಸಿದ್ದೇನೆ. ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು’ ಎಂದಿದ್ದಾರೆ.