ರೇವಂತ್‌ ರೆಡ್ಡಿ ಮೇಲೆ 25 ಪೊಲೀಸರಿಂದ ದಿನವಿಡೀ ನಿಗಾ

| Published : Apr 13 2024, 01:02 AM IST / Updated: Apr 13 2024, 05:39 AM IST

revanth reddy.j
ರೇವಂತ್‌ ರೆಡ್ಡಿ ಮೇಲೆ 25 ಪೊಲೀಸರಿಂದ ದಿನವಿಡೀ ನಿಗಾ
Share this Article
  • FB
  • TW
  • Linkdin
  • Email

ಸಾರಾಂಶ

ತೆಲಂಗಾಣದಲ್ಲಿನ ಹಿಂದಿನ ಮುಖ್ಯಮಂತ್ರಿ ಚಂದ್ರಶೇಖರ್‌ ರಾವ್‌ ಆಡಳಿತದ ಅವಧಿಯಲ್ಲಿ ವಿಪಕ್ಷ ನಾಯಕರ ಫೋನ್‌ ಕದ್ದಾಲಿಕೆ ಮತ್ತು ಅವರ ಮೇಲಿನ ಗೂಢಚರ್ಯೆ ಪ್ರಕರಣ ಬಗೆದಷ್ಟೂ ಹೊಸ ಹೊಸ ಸಂಗತಿಗಳನ್ನು ಹೊರಚೆಲ್ಲುತ್ತಿದೆ.

ಹೈದರಾಬಾದ್‌: ತೆಲಂಗಾಣದಲ್ಲಿನ ಹಿಂದಿನ ಮುಖ್ಯಮಂತ್ರಿ ಚಂದ್ರಶೇಖರ್‌ ರಾವ್‌ ಆಡಳಿತದ ಅವಧಿಯಲ್ಲಿ ವಿಪಕ್ಷ ನಾಯಕರ ಫೋನ್‌ ಕದ್ದಾಲಿಕೆ ಮತ್ತು ಅವರ ಮೇಲಿನ ಗೂಢಚರ್ಯೆ ಪ್ರಕರಣ ಬಗೆದಷ್ಟೂ ಹೊಸ ಹೊಸ ಸಂಗತಿಗಳನ್ನು ಹೊರಚೆಲ್ಲುತ್ತಿದೆ. 

ಹಾಲಿ ಸಿಎಂ ಮತ್ತು ಹಿಂದಿನ ವಿಪಕ್ಷ ನಾಯಕ ರೇವಂತ್‌ ರೆಡ್ಡಿ ಅವರ ಮೇಲೆ ನಿಗಾ ಇಡಲು ಬಿಆರ್‌ಎಸ್‌ ಸರ್ಕಾರ 25 ಪೊಲೀಸರ ತಂಡ ನಿಯೋಜಿಸಿತ್ತು. ಅವರು ದಿನದ 24 ಗಂಟೆಯೂ ರೇವಂತ್‌ ಮೇಲೆ ಗೂಢಚರ್ಯೆ ಮಾಡುತ್ತಿದ್ದರು ಎಂಬ ವಿಷಯ ಇದೀಗ ತನಿಖೆಯಿಂದ ಬೆಳಕಿಗೆ ಬಂದಿದೆ.ತೆಲಂಗಾಣ ಸರ್ಕಾರದ ಗುಪ್ತಚರ ಇಲಾಖೆ ಮುಖ್ಯಸ್ಥರು ತಮ್ಮ ಅತ್ಯಂತ ಆಪ್ತ 25 ಪೊಲಿಸರ ತಂಡ ರಚಿಸಿ ಅವರನ್ನು ರೇವಂತ್‌ ಮೇಲೆ ನಿಗಾ ಇಡಲು ಬಿಟ್ಟಿದ್ದರು. 

ಇದರಲ್ಲಿ ಫೋನ್‌ ಕದ್ದಾಲಿಕೆ, ರೇವಂತ್‌ ಮನೆ ಬಳಿ ಕಣ್ಗಾವಲು, ರೇವಂತ್‌ಗೆ ಹಣಕಾಸು ನೆರವು ನೀಡುತ್ತಿರುವವರು ಯಾರು? ಚುನಾವಣೆ ವೇಳೆ ರೇವಂತ್‌ ಯಾರ್‍ಯಾರನ್ನು ಭೇಟಿ ಮಾಡುತ್ತಿದ್ದರು, ರೇವಂತ್‌ ಎಲ್ಲೆಲ್ಲಿಗೆ ಭೇಟಿ ನೀಡಿದ್ದರು ಮತ್ತು ಅವರ ರಾಜಕೀಯ ಹೆಜ್ಜೆಗಳು ಏನು ಎಂಬುದನ್ನು ಪತ್ತೆ ಮಾಡುವ ಕೆಲಸವನ್ನು ವಹಿಸಲಾಗಿತ್ತು ಎಂದು ಮೂಲಗಳು ತಿಳಿಸಿವೆ.ಬಿಆರ್‌ಎಸ್‌ ಸರ್ಕಾರದ ಅವಧಿಯಲ್ಲಿ ಹಲವು ವಿಪಕ್ಷ ನಾಯಕರ ಮೇಲೆ ಗೂಢಚರ್ಯೆ ನಡೆಸಲಾಗಿತ್ತಾದರೂ, ಅದರಲ್ಲಿ ರೇವಂತ್‌ ನಂ.1 ಸ್ಥಾನದಲ್ಲಿದ್ದರು. 

ಅವರ ನಂತರದಲ್ಲಿ ಬಿಆರ್‌ಎಸ್‌ ತೊರೆದು ಬಿಜೆಪಿ ಸೇರಿದ ರಾಜೇಂದರ್‌ ಇದ್ದರು ಎಂದು ಮೂಲಗಳು ತಿಳಿಸಿವೆ.ಇಂಥ ಗುಪ್ತಚರ ವರದಿ ಆಧರಿಸಿಯೇ 2015ರಲ್ಲಿ ರೇವಂತ್‌ ವಿರುದ್ಧ ಮತಕ್ಕಾಗಿ ಹಣ ಪ್ರಕರಣದಲ್ಲಿ ಪ್ರಕರಣ ದಾಖಲಿಸಲಾಗಿತ್ತು. ಆದರೆ 2018ರ ಬಳಿಕ ರೇವಂತ್‌ ಮೇಲಿನ ನಿಗಾ ಇನ್ನಷ್ಟು ತೀವ್ರಗೊಂಡಿತು. ಈ ನಿಗಾ 2023ರ ಡಿಸೆಂಬರ್‌ನಲ್ಲಿ ರಾಜ್ಯ ವಿಧಾನಸಭೆಗೆ ಚುನಾವಣೆ ಘೋಷಣೆ ಆಗುವವರೆಗೂ ಮುಂದುವರೆದಿತ್ತು ಎಂದು ಮೂಲಗಳು ತಿಳಿಸಿವೆ.ಈ ಪ್ರಕರಣದಲ್ಲಿ ಹಾಲಿ ಕಾಂಗ್ರೆಸ್‌ ಸರ್ಕಾರ ಈಗಾಗಲೇ ತನಿಖೆ ಆರಂಭಿಸಿದ್ದು, ಹಲವು ಹಿರಿಯ ಪೊಲೀಸ್‌ ಅಧಿಕಾರಿಗಳನ್ನು ಬಂಧಿಸಿದೆ.