ಸಾರಾಂಶ
ವಾಷಿಂಗ್ಟನ್/ನವದೆಹಲಿ: 26/11 ಮುಂಬೈ ದಾಳಿಯ ಉಗ್ರ ತಾಹಾವುರ್ ರಾಣಾ ಅಮೆರಿಕದಿಂದ ಭಾರತಕ್ಕೆ ಬರುತ್ತಿದ್ದಂತೆ ಆತನ ಕುರಿತ ಕೆಲ ಆಘಾತಕಾರಿ ಮಾಹಿತಿಗಳು ಬಹಿರಂಗವಾಗುತ್ತಿವೆ. ದಾಳಿ ಮಾಡಿದ ಉಗ್ರರಿಗೆ ಪಾಕ್‌ನ ಶೌರ್ಯ ಪ್ರಶಸ್ತಿ ನೀಡಬೇಕು ಎಂದಿದ್ದ ಆತ, ಮುಂಬೈ ದಾಳಿ ಬಳಿಕ ‘ಭಾರತೀಯರಿಗೆ ಶಾಸ್ತಿ ಆಗಿದೆ’ ಎಂದಿದ್ದ ಎಂದು ಅಮೆರಿಕ ಹೇಳಿದೆ.
ರಾಣಾನ ಹಸ್ತಾಂತರ ಕುರಿತ ಅಧಿಕೃತ ಹೇಳಿಕೆಯಲ್ಲಿ, ಸಂಚುಕೋರರಲ್ಲಿ ಒಬ್ಬನಾದ ಡೇವಿಡ್ ಹೆಡ್ಲಿ ಹಾಗೂ ರಾಣಾನ ನಡುವಿನ ದೂರವಾಣಿ ಸಂಭಾಷಣೆಯ ಬಗ್ಗೆ ಅಮೆರಿಕ ಮಾಹಿತಿ ನೀಡಿದೆ.
‘ಮುಂಬೈನ 12 ಕಡೆಗಳಲ್ಲಿ 10 ಎಲ್‌ಇಟಿ ಉಗ್ರರು ನಡೆಸಿದ ದಾಳಿಗೆ 166 ಜನ ಸಾವನ್ನಪ್ಪಿದ ಬೆನ್ನಲ್ಲೇ, ‘ಭಾರತೀಯರಿಗೆ ಹೀಗೇ ಆಗಬೇಕಿತ್ತು. ತಕ್ಕ ಶಾಸ್ತಿ ಆಯಿತು’ ಎಂದು ರಾಣಾ ಹೇಳಿದ್ದ. ಜತೆಗೆ, ‘26/11ರ ಮುಂಬೈ ದಾಳಿಯಲ್ಲಿ ಸಾವನ್ನಪ್ಪಿದ 9 ಲಷ್ಕರ್ ಉಗ್ರರಿಗೆ ಪಾಕಿಸ್ತಾನದ ಅತ್ಯುನ್ನತ ಶೌರ್ಯ ಪ್ರಶಸ್ತಿಯಾದ ‘ನಿಶಾನ್ ಎ ಹೈದರ್’ ಅನ್ನು ನೀಡಬೇಕು’ ಎಂದು ರಾಣಾ, ಹೆಡ್ಲಿಗೆ ಹೇಳಿದ್ದ ಎಂಬ ವಿಷಯ ಅದರಲ್ಲಿದೆ.
ಈ ನಡುವೆ, ಭಾರತವು ನಡೆಸಲಿರುವ ತನಿಖೆಗೆ ಎಲ್ಲ ಸಹಕಾರ ನೀಡುವುದಾಗಿ ಅಮೆರಿಕ ಹೇಳಿದೆ.