ಛತ್ತೀಸ್‌ಗಢದಲ್ಲಿ 29 ನಕ್ಸಲರ ಸಂಹಾರ

| Published : Apr 17 2024, 01:20 AM IST / Updated: Apr 17 2024, 01:21 AM IST

ಸಾರಾಂಶ

ಇದೇ ಏ.19 ಹಾಗೂ ಏ.26ರಂದು ಲೋಕಸಭೆ ಚುನಾವಣೆ ಎದುರಿಸಲು ಸಿದ್ಧವಾಗಿರುವ ಛತ್ತೀಸ್‌ಗಢದ ಬಸ್ತರ್‌ ವಲಯದ ಕಾಂಕೇರ್‌ ಜಿಲ್ಲೆಯಲ್ಲಿ ಮಂಗಳವಾರ ಭದ್ರತಾ ಸಿಬ್ಬಂದಿ ನಡೆಸಿದ ಎನ್‌ಕೌಂಟರ್‌ನಲ್ಲಿ 29 ನಕ್ಸಲೀಯರು ಹತರಾಗಿದ್ದಾರೆ.

ಪಿಟಿಐ ಕಾಂಕೇರ್‌ (ಛತ್ತೀಸ್‌ಗಢ)ಇದೇ ಏ.19 ಹಾಗೂ ಏ.26ರಂದು ಲೋಕಸಭೆ ಚುನಾವಣೆ ಎದುರಿಸಲು ಸಿದ್ಧವಾಗಿರುವ ಛತ್ತೀಸ್‌ಗಢದ ಬಸ್ತರ್‌ ವಲಯದ ಕಾಂಕೇರ್‌ ಜಿಲ್ಲೆಯಲ್ಲಿ ಮಂಗಳವಾರ ಭದ್ರತಾ ಸಿಬ್ಬಂದಿ ನಡೆಸಿದ ಎನ್‌ಕೌಂಟರ್‌ನಲ್ಲಿ 29 ನಕ್ಸಲೀಯರು ಹತರಾಗಿದ್ದಾರೆ. ಮೃತರಲ್ಲಿ ಮೋಸ್ಟ್‌ ವಾಂಟೆಡ್‌ ನಕ್ಸಲ್‌ ನಾಯಕ ಶಂಕರರಾವ್‌ ಕೂಡ ಸೇರಿದ್ದಾನೆ. ಇದು ಬಸ್ತರ್‌ನಲ್ಲಿನ ಇತ್ತೀಚಿನ ದಿನಗಳ ದೊಡ್ಡ ನಕ್ಸಲ್‌ ಸಂಹಾರವಾಗಿದೆ. ಜೊತೆಗೆ ಮಂಗಳವಾರದ ಘಟನೆಯೊಂದಿಗೆ ರಾಜ್ಯದಲ್ಲಿ ಈ ವರ್ಷ ಭದ್ರತಾ ಪಡೆಗಳ ಗುಂಡಿಗೆ ಬಲಿಯಾದ ನಕ್ಸಲರ ಸಂಖ್ಯೆ 79ಕ್ಕೆ ತಲುಪಿದೆ.ಭೀಕರ ಗುಂಡಿನ ಕಾಳಗದಲ್ಲಿ ಮೂವರು ಭದ್ರತಾ ಸಿಬ್ಬಂದಿಗೆ ಗಾಯಗಳಾಗಿದ್ದು, ಸ್ಥಳದಿಂದ ಎಕೆ47, ಇನ್ಸಾಸ್‌ ರೈಫಲ್‌ಗಳು ಸೇರಿ ಅಪಾರ ಪ್ರಮಾಣದ ಶಸ್ತ್ರಾಸ್ತ್ರಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ನಕ್ಸಲ್‌ ನಾಯಕ ಶಂಕರರಾವ್‌ ಬಗ್ಗೆ ಸುಳಿವು ನೀಡಿದವರಿಗೆ 25 ಲಕ್ಷ ರು. ಬಹುಮಾನವನ್ನು ಸರ್ಕಾರ ಈ ಹಿಂದೆ ಪ್ರಕಟಿಸಿತ್ತು.ಭಾರೀ ಕಾರ್ಯಾಚರಣೆ:

ಕುಖ್ಯಾತ ನಕ್ಸಲರಾದ ಶಂಕರರಾವ್‌, ಲಲಿತಾ ಹಾಗೂ ರಾಜು ಸಂಚರಿಸುತ್ತಿದ್ದಾರೆ ಎಂಬ ಸುಳಿವಿನ ಮೇರೆಗೆ ಗಡಿ ಭದ್ರತಾ ಪಡೆ (ಬಿಎಸ್‌ಎಫ್) ಮತ್ತು ರಾಜ್ಯದ ಜಿಲ್ಲಾ ಮೀಸಲು ಪಡೆ (ಡಿಆರ್‌ಜಿ) ಜಂಟಿ ತಂಡವು ನಕ್ಸಲ್ ನಿಗ್ರಹ ಕಾರ್ಯಾಚರಣೆಯಲ್ಲಿ ತೊಡಗಿತ್ತು. ಆಗ ಛೋಟೆಬೆಥಿಯಾ ಪೊಲೀಸ್ ಠಾಣಾ ವ್ಯಾಪ್ತಿಯ ಬಿನಗುಂದ ಮತ್ತು ಕೊರೊನಾರ್ ಗ್ರಾಮಗಳ ನಡುವಿನ ಹಪಟೋಲಾ ಅರಣ್ಯದಲ್ಲಿ ಮಧ್ಯಾಹ್ನ 2 ಗಂಟೆ ಸುಮಾರಿಗೆ ನಕ್ಸಲರು ಎದುರಾಗಿದ್ದು, ಗುಂಡಿನ ಚಕಮಕಿ ನಡೆದಿದೆ.ಈ ಬಗ್ಗೆ ಮಾತನಾಡಿದ ಬಸ್ತರ್‌ ವಲಯ ಐಜಿ ಪಿ. ಸುಂದರರಾಜ್, ‘ಎನ್‌ಕೌಂಟರ್ ಸ್ಥಳದಲ್ಲಿ ಹಲವಾರು ನಕ್ಸಲರ ಮೃತದೇಹಗಳು ಪತ್ತೆಯಾಗಿವೆ. ಕಾರ್ಯಾಚರಣೆಯಲ್ಲಿ 3 ಯೋಧರು ಗಾಯಗೊಂಡಿದ್ದಾರೆ. ಇನ್ನೂ ಶೋಧ ಕಾರ್ಯಾಚರಣೆ ನಡೆಯುತ್ತಿದೆ. ಇದು ಈ ಪ್ರದೇಶದಲ್ಲಿನ ಅತಿದೊಡ್ಡ ನಕ್ಸಲ್ ನಿಗ್ರಹ ಕಾರ್ಯಾಚರಣೆಗಳಲ್ಲಿ ಒಂದಾಗಿದೆ. 3 ನಕ್ಸಲ್‌ ನಾಯಕರು ಇದ್ದಾರೆ ಎಂಬ ಪಕ್ಕಾ ಸುಳಿವಿನ ಮೇರೆಗೆ ಕಾರ್ಯಾಚರಣೆ ಆರಂಭಿಸಲಾಗಿತ್ತು’ ಎಂದು ತಿಳಿಸಿದ್ದಾರೆ.

ಯಾರು ಈ ಶಂಕರ್‌ರಾವ್‌:

ಶಂಕರ್‌ರಾವ್‌ ಕುಖ್ಯಾತ ನಕ್ಸಲ್‌ ಕಮಾಂಡರ್‌. ಛತ್ತೀಸ್‌ಗಢದಲ್ಲಿ ಇತ್ತೀಚಿನ ವರ್ಷಗಳಲ್ಲಿ ಭದ್ರತಾ ಪಡೆಗಳ ಮೇಲೆ ನಡೆದ ಹಲವು ಗುಂಡಿನ ದಾಳಿ, ವಾಹನಗಳಿಗೆ ಬೆಂಕಿ ಹಚ್ಚಿದ ಪ್ರಕರಣದ ಪ್ರಮುಖ ಆರೋಪಿ ಈತ.