ಮೋದಿ 3.0 ಪ್ರಮಾಣ ವಚನಕ್ಕೆ 3 ಸ್ತರದ ಭದ್ರತೆ

| Published : Jun 09 2024, 01:34 AM IST / Updated: Jun 09 2024, 04:17 AM IST

ಸಾರಾಂಶ

ಮೋದಿ 3.0 ಪ್ರಮಾಣ ವಚನಕ್ಕೆ 3 ಸ್ತರದ ಭದ್ರತೆ ಒದಗಿಸಲಾಗಿದ್ದು, 2500 ಸಿಬ್ಬಂದಿಗಳು ಭದ್ರತೆಗೆ ನಿಯೋಜನೆಗೊಂಡಿದ್ದಾರೆ. ಈ ಹಿನ್ನೆಲೆಯಲ್ಲಿ ಭಾನುವಾರ ದಿಲ್ಲಿಯನ್ನು ‘ಹಾರಾಟ ನಿಷೇಧಿತ ವಲಯ’ ಎಂದು ಘೋಷಣೆ ಮಾಡಲಾಗಿದೆ.

ನವದೆಹಲಿ: ಭಾನುವಾರ ಸಂಜೆ ಪ್ರಧಾನಿ ನರೇಂದ್ರ ಮೋದಿ ಮೂರನೇ ಬಾರಿಗೆ ಪ್ರಧಾನಿಯಾಗಿ ಪ್ರಮಾಣ ವಚನ ಸ್ವೀಕರಿಸಲಿದ್ದಾರೆ ಹಾಗೂ ವಿದೇಶಿ ಗಣ್ಯರು ಹೆಚ್ಚಿನ ಸಂಖ್ಯೆಯಲ್ಲಿ ದೌಡಾಯಿಸಲಿದ್ದಾರೆ. ಆದ್ದರಿಂದ ಪ್ರಮಾಣವಚನ ನಡೆಯುವ ರಾಷ್ಟ್ರಪತಿ ಭವನ ಹಾಗೂ ಗಣ್ಯರು ಇರುವ ರೈಸೀನಾ ಹಿಲ್ಸ್‌ ಸುತ್ತಮುತ್ತ 3 ಸ್ತರದ ಭದ್ರತೆ ವ್ಯವಸ್ಥೆಯನ್ನು ಮಾಡಿಕೊಳ್ಳಲಾಗಿದೆ.

ಸಾರ್ಕ್ ಸದಸ್ಯ ರಾಷ್ಟ್ರಗಳ ಗಣ್ಯರು ಪ್ರಧಾನಿ ಪ್ರಮಾಣ ವಚನ ಕಾರ್ಯಕ್ರಮಕ್ಕೆ ಆಗಮಿಸುವುದರಿಂದ ಬಿಗಿ ಬಂದೋಬಸ್ತ್‌ ವ್ಯವಸ್ಥೆ ಮಾಡಿಕೊಳ್ಳಲಾಗಿದೆ. ಬಾಂಗ್ಲಾದೇಶ, ಶ್ರೀಲಂಕಾ, ಮಾಲ್ಡೀವ್ಸ್‌, ಭೂತಾನ್‌, ನೇಪಾಳ, ಮಾರಿಷಸ್‌ ಮತ್ತು ಸೀಶೆಲ್ಸ್‌ನ ಗಣ್ಯರು ಭಾಗಿಯಾಗಲಿದ್ದಾರೆ. ಗಣ್ಯರು ತಂಗಲಿರುವ ಲೀಲಾ, ತಾಜ್‌, ಐಟಿಸಿ ಮೌರ್ಯ, ಕ್ಲಾರಿಡ್ಜಸ್ ಮತ್ತು ಒಬೆರಾಯ್ ಹೋಟೆಲ್‌ಗಳಲ್ಲಿ ಪೊಲೀಸರು ತಮ್ಮ ಭದ್ರತೆಯನ್ನು ಹೆಚ್ಚಿಸಿದ್ದಾರೆ.

ಹೇಗಿರಲಿದೆ ಭದ್ರತೆ?:

ರಾಷ್ಟ್ರಪತಿ ಭವನದಲ್ಲಿ ನಡೆಯಲಿರುವ ಈ ಕಾರ್ಯಕ್ರಮಕ್ಕೆ 5 ಕಂಪೆನಿಗಳ ಅರೆಸೇನಾ ಪಡೆ, ಎನ್‌ಎಸ್‌ಜಿ ಕಮಾಂಡೋಸ್‌, ಡ್ರೋನ್‌ , ಸ್ನೈಪರ್ಸ್ ಸೇರಿದಂತೆ ಬಹು ಹಂತದ ಭದ್ರತೆ ಇರಲಿದೆ. ಪ್ರಮಾಣ ವಚನ ನಡೆಯಲಿರುವ ಸ್ಥಳದ ಒಳಗಡೆ ಮತ್ತು ಹೊರಗಡೆ ಒಟ್ಟು 3 ಹಂತದಲ್ಲಿ ಸಿಬ್ಬಂದಿಗಳ ಕಣ್ಗಾವಲಿರಲಿದೆ.ಪೊಲೀಸ್ ಮೂಲಗಳ ಪ್ರಕಾರ ಪ್ರಮಾಣ ವಚನಕ್ಕೆ ಆಗಮಿಸಲಿರುವ ಗಣ್ಯರಿಗೆ ಅವರು ತಂಗಿರುವ ಹೋಟೆಲ್‌ನಿಂದ ರಾಷ್ಟ್ರಪತಿ ಭವನಕ್ಕೆ ಹೋಗಲು ಮತ್ತು ಮರಳಲು ಮಾರ್ಗಗಳನ್ನು ಗೊತ್ತು ಪಡಿಸಲಾಗಿದೆ. 

ದೆಹಲಿ ಪೊಲೀಸರು ರಾಷ್ಟ್ರಪತಿ ಭವನದ ಹೊರಗಡೆ ಭದ್ರತೆಯಲ್ಲಿ ಭಾಗಿಯಾಗಲಿದ್ದಾರೆ. ಅರೆಸೇನಾ ಪಡೆಯ ಸಿಬ್ಬಂದಿಗಳು ಪ್ರಮಾಣ ವಚನ ಕಾರ್ಯಕ್ರಮ ನಡೆಯುವ ಜಾಗದಲ್ಲಿ ಭದ್ರತೆಯನ್ನು ನೋಡಿಕೊಳ್ಳಲಿದ್ದಾರೆ.ಅರೆಸೇನಾ ಪಡೆ, ದೆಹಲಿ ಸಶಸ್ತ್ರ ಪೊಲೀಸ್ ಪಡೆ ಸೇರಿದಂತೆ ಒಟ್ಟು 2,500 ಸಿಬ್ಬಂದಿಗಳನ್ನು ಭದ್ರತೆಗೆ ನಿಯೋಜಿಸಲಾಗಿದೆ. 

ಸ್ನೈಪರ್ಸ್‌ ಮತ್ತು ಅರೆಸೇನಾ ಪಡೆಗಳು ಗಣ್ಯರು ಸಂಚರಿಸುವ ಮಾರ್ಗದಲ್ಲಿ ಭದ್ರತೆಯನ್ನು ಒದಗಿಸಲಿದ್ದಾರೆ. ಆಯಕಟ್ಟಿನ ಸ್ಥಳಗಳಲ್ಲಿ ಡ್ರೋನ್ ಕಣ್ಗಾವಲು ಇರಲಿದೆ. ಪ್ರಮಾಣ ವಚನದ ಭದ್ರತೆ ಜಿ.20 ಶೃಂಗ ಸಭೆಯ ಭದ್ರತೆ ರೀತಿ ಇರಲಿದೆ. ಭದ್ರತಾ ದೃಷ್ಟಿಯಿಂದ ಹಾಗೂ ಸಂಚಾರ ದಟ್ಟಣೆ ಉಂಟಾಗಬಹುದು ಎನ್ನುವ ಕಾರಣಕ್ಕೆ ದೆಹಲಿಯ ಮಧ್ಯ ಭಾಗಕ್ಕೆ ಹೋಗುವ ರಸ್ತೆಗಳು ಭಾನುವಾರ ಬಂದ್ ಆಗಲಿವೆ. ಶನಿವಾರದಿಂದಲೇ ದೆಹಲಿಯ ಗಡಿ ಪ್ರದೇಶಗಳಲ್ಲಿ ಪೊಲೀಸರು ಭದ್ರತೆಯನ್ನು ಹೆಚ್ಚಿಸಿದ್ದಾರೆ.

ಹಾರಾಟ ನಿಷೇಧಿತ ವಲಯ:ಮುಂಜಾಗ್ರತಾ ಕ್ರಮವಾಗಿ ರಾಷ್ಟ್ರ ರಾಜಧಾನಿಯನ್ನು ಹಾರಾಟ ನಿಷೇಧಿತ ವಲಯವೆಂದು ಘೋಷಿಸಲಾಗಿದೆ. ಅದರ ಪ್ರಕಾರ ಡ್ರೋನ್ , ಪಾರಾ ಗ್ಲೈಡರ್ಸ್‌ ,ರಿಮೋಟ್‌ ಪೈಲೆಟ್‌ ಏರ್‌ಕ್ರಾಫ್ಟ್‌, ಮತ್ತು ಹಾಟ್‌ ಏರ್‌ ಬಲೂನ್‌ಗಳ ಹಾರಾಟವನ್ನು ಮುಂದಿನ 2 ದಿನಗಳ ಕಾಲ ನಿರ್ಬಂಧಿಸಲಾಗಿದೆ.