ಸಾರಾಂಶ
ಬಿಜಾಪುರ/ನವದೆಹಲಿ: ಛತ್ತೀಸ್‌ಗಢದಲ್ಲಿ ನಕ್ಸಲರ ವಿರುದ್ಧದ ಕಾರ್ಯಾಚರಣೆ ತೀವ್ರಗೊಂಡಿದ್ದು ಗುರುವಾರ ನಡೆದ ಎರಡು ಪ್ರತ್ಯೇಕ ಪ್ರಕರಣಗಳಲ್ಲಿ 30 ನಕ್ಸಲರು ಸಾವನ್ನಪ್ಪಿದ್ದಾರೆ. ಇದೇ ವೇಳೆ ಓರ್ವ ಭದ್ರತಾ ಸಿಬ್ಬಂದಿ ಕೂಡಾ ಹುತಾತ್ಮರಾಗಿದ್ದಾರೆ.
ಬಿಜಾಪುರ ಜಿಲ್ಲೆಯಲ್ಲಿ ಗುರುವಾರ ಬೆಳಗ್ಗೆ 7 ಗಂಟೆ ವೇಳೆಗೆ ನಡೆದ ಎನ್ಕೌಂಟರ್‌ನಲ್ಲಿ 26 ನಕ್ಸಲರು ಸಾವನ್ನಪ್ಪಿದ್ದರೆ, ಕಂಕೇರ್ ವಲಯದಲ್ಲಿ ನಡೆದ ಮತ್ತೊಂದು ಕಾರ್ಯಾಚರಣೆಯಲ್ಲಿ 4 ನಕ್ಸಲರು ಸಾವನ್ನಪ್ಪಿದ್ದಾರೆ ಎಂದು ಭದ್ರತಾ ಪಡೆಗಳು ಮಾಹಿತಿ ನೀಡಿವೆ. ಬಿಜಾಪುರ ಎನ್‌ಕೌಂಟರ್ ವೇಳೆ ಓರ್ವ ಯೋಧ ಹುತಾತ್ಮರಾಗಿದ್ದಾರೆ.ಇದರೊಂದಿಗೆ ಈ ವರ್ಷವೊಂದರಲ್ಲೇ ಭದ್ರತಾ ಪಡೆಗಳ ಗುಂಡಿಗೆ ಬಲಿಯಾದ ನಕ್ಸಲರ ಸಂಖ್ಯೆ 113ಕ್ಕೆ ತಲುಪಿದೆ. ಈ ಪೈಕಿ ಬಸ್ತರ್ ವಲಯವೊಂದರಲ್ಲೇ 97 ನಕ್ಸಲರು ಹತರಾಗಿದ್ದಾರೆ.
ಈ ನಡುವೆ ನಕ್ಸಲರ ಹತ್ಯೆ ಬಗ್ಗೆ ಪ್ರತಿಕ್ರಿಯಿಸಿರುವ ಕೇಂದ್ರ ಗೃಹ ಸಚಿವ ಅಮಿತ್ ಶಾ, ‘ದೇಶವನ್ನು ನಕ್ಸಲ್‌ಮುಕ್ತ ಭಾರತ ಅಭಿಯಾನ ಸಾಕಾರಗೊಳಿಸುವಲ್ಲಿ ನಮ್ಮ ಭದ್ರತಾ ಪಡೆಗಳು ಮತ್ತೊಂದು ಮಹತ್ವದ ಮೈಲಿಗಲ್ಲು ಸಾಧಿಸಿವೆ. ಛತ್ತೀಸ್‌ಗಢದಲ್ಲಿ ಭದ್ರತಾಪಡೆಗಳು 22 ನಕ್ಸಲರನ್ನು ಹೊಡೆದುರುಳಿಸಿವೆ. ಅನೇಕ ಸೌಲಭ್ಯಗಳನ್ನು ಘೋಷಿಸಿದ ಹೊರತಾಗಿಯೂ ಶರಣಾಗದ ಈ ತೀವ್ರವಾದಿಗಳ ವಿರುದ್ಧ ಪ್ರಧಾನಿ ಮೋದಿ ನೇತೃತ್ವದ ಸರ್ಕಾರವು ಶೂನ್ಯ ಸಹಿಷ್ಣು ನೀತಿಯನ್ನು ಅನುಸರಿಸುತ್ತಿದೆ. ನಿರ್ದಾಕ್ಷಿಣ್ಯವಾಗಿ ಅವರನ್ನು ಹತ್ತಿಕ್ಕುವ ಕೆಲಸ ಮಾಡುತ್ತಿದೆ. ಈ ವರ್ಷದ ಮಾ.31ರೊಳಗೆ ದೇಶ ನಕ್ಸಲ್ ಮುತ್ತ ಆಗಲಿದೆ’ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.