ಸಾರಾಂಶ
ಜ.22ರಂದು ಅಯೋಧ್ಯೆಯಲ್ಲಿ ನಡೆಯುವ ಪ್ರಭು ಶ್ರೀರಾಮ ಮಂದಿರದ ಪ್ರಾಣಪ್ರತಿಷ್ಠಾಪನೆಗೆ ಶ್ರೀಶಂಕರಾಚಾರ್ಯ ಸ್ಥಾಪಿತ ನಾಲ್ಕೂ ಪೀಠದ ಸ್ವಾಮೀಜಿಗಳು ಆಗಮಿಸುವುದಿಲ್ಲ ಎಂದು ವಿಶ್ವ ಹಿಂದೂ ಪರಿಷದ್ ತಿಳಿಸಿದೆ. ಈ ಪೈಕಿ ಓರ್ವರು ಮಾತ್ರ ಉದ್ದೇಶಪೂರ್ವಕವಾಗಿ ಪ್ರತಿಷ್ಠಾಪನೆಗೆ ತೆರಳುತ್ತಿಲ್ಲ.
ಲಖನೌ: ಜ.22ರಂದು ಅಯೋಧ್ಯೆಯಲ್ಲಿ ನಡೆಯಲಿರುವ ರಾಮ ಪ್ರತಿಷ್ಠಾಪನೆ ಸಮಾರಂಭದಲ್ಲಿ ನಾಲ್ವರು ಶಂಕರಾಚಾರ್ಯರೂ ಪಾಲ್ಗೊಳ್ಳುವುದಿಲ್ಲ ಎಂದು ವಿಶ್ವ ಹಿಂದೂ ಪರಿಷತ್ (ವಿಎಚ್‌ಪಿ) ಕಾರ್ಯಾಧ್ಯಕ್ಷ ಅಲೋಕ್ ಕುಮಾರ್ ಖಚಿತಪಡಿಸಿದ್ದಾರೆ.
ಆಂಗ್ಲ ಪತ್ರಿಕೆಯೊಂದರ ಜತೆ ಮಾತನಾಡಿದ ಅವರು, ‘ಪ್ರತಿಷ್ಠಾಪನೆಯನ್ನು ದ್ವಾರಕಾ ಮತ್ತು ಶೃಂಗೇರಿ ಶಂಕರಾಚಾರ್ಯರು ಸ್ವಾಗತಿಸಿ ನೀಡಿದ ಹೇಳಿಕೆಗಳು ಸಾರ್ವಜನಿಕರ ಕೈಯಲ್ಲಿವೆ. ಆದರೆ ಕಾರಣಾಂತರದಿಂದ ಅವರು ಸಮಾರಂಭಕ್ಕೆ ಬರುತ್ತಿಲ್ಲ. ಪುರಿ ಶಂಕರಾಚಾರ್ಯರು ಸಹ ಸಮಾರಂಭದ ಪರವಾಗಿದ್ದಾರೆ. ಅವರು ಸೂಕ್ತ ಸಮಯದಲ್ಲಿ ರಾಮಲಲ್ಲಾನ ದರ್ಶನಕ್ಕೆ ಬರುವುದಾಗಿ ಹೇಳಿದ್ದಾರೆ. ಆದರೆ ಜ್ಯೋತಿರ್ಪೀಠ ಶಂಕರಾಚಾರ್ಯರು ಮಾತ್ರ ಸಮಾರಂಭ ಶಾಸ್ತ್ರಬದ್ಧವಾಗಿ ನಡೆಯುತ್ತಿಲ್ಲ ಎಂದು ಟೀಕೆಗಳನ್ನು ಮಾಡಿ ತಾವು ಹಾಜರಾಗುವುದಿಲ್ಲ ಎಂದು ಘೋಷಿಸಿದ್ದಾರೆ’ ಎಂದು ಹೇಳಿದರು.ಆದಿ ಜಗದ್ಗುರು ಶಂಕರಾಚಾರ್ಯರು ದೇಶದ 4 ಕಡೆ ಪೀಠಗಳನ್ನು ಸ್ಥಾಪಿಸಿದ್ದು, ಇವುಗಳಿಗೆ ಚತುರಾಮ್ನಾಯ ಪೀಠಗಳು ಎನ್ನುತ್ತಾರೆ. ಹಿಂದೂ ಧರ್ಮದಲ್ಲಿ ಈ ಪೀಠಗಳಿಗೆ ಅದರದ್ದೇ ಆದ ಮಹತ್ವವಿದೆ.