ವಿಶ್ವದ ಶೇ.40ರಷ್ಟು ಜನರಿಗೆ ಮಾತೃ ಭಾಷೆ ಶಿಕ್ಷಣ ಸಿಗುತ್ತಿಲ್ಲ : ಯುನೆಸ್ಕೋ ಜಿಇಎಂಮ್‌

| N/A | Published : Mar 03 2025, 01:47 AM IST / Updated: Mar 03 2025, 05:05 AM IST

ಸಾರಾಂಶ

ಜಾಗತಿಕವಾಗಿ ಶೇ.40ರಷ್ಟು ಜನರಿಗೆ ಅವರ ಮಾತೃಭಾಷೆಯಲ್ಲಿ ಶಿಕ್ಷಣ ಪಡೆಯುವುದಕ್ಕೆ ಸಾಧ್ಯವಾಗುತ್ತಿಲ್ಲ ಎಂದು ಯುನೆಸ್ಕೋದ ಜಾಗತಿಕ ಶಿಕ್ಷಣ ಮಾನಿಟರಿಂಗ್ (ಜಿಇಎಂಮ್‌) ಅಧ್ಯಯನ ಹೇಳಿದೆ.

ನವದೆಹಲಿ: ಜಾಗತಿಕವಾಗಿ ಶೇ.40ರಷ್ಟು ಜನರಿಗೆ ಅವರ ಮಾತೃಭಾಷೆಯಲ್ಲಿ ಶಿಕ್ಷಣ ಪಡೆಯುವುದಕ್ಕೆ ಸಾಧ್ಯವಾಗುತ್ತಿಲ್ಲ ಎಂದು ಯುನೆಸ್ಕೋದ ಜಾಗತಿಕ ಶಿಕ್ಷಣ ಮಾನಿಟರಿಂಗ್ (ಜಿಇಎಂಮ್‌) ಅಧ್ಯಯನ ಹೇಳಿದೆ.

ಮಾತೃಭಾಷೆ ಶಿಕ್ಷಣದ ಬಗ್ಗೆ ಆಯಾ ದೇಶಗಳಲ್ಲಿ ತಿಳುವಳಿಕೆಯ ಹೊರತಾಗಿಯೂ, ಅದನ್ನು ಅಳವಡಿಸಿಕೊಳ್ಳುವವರ ಸಂಖ್ಯೆ ಸೀಮಿತವಾಗಿದೆ. ಅಲ್ಲದೇ ಶಿಕ್ಷಣದಲ್ಲಿ ಮಾತೃಭಾಷೆ ಬಳಕೆಗೆ ಸವಾಲುಗಳಿದೆ ಎಂದು ವರದಿ ಹೇಳಿದ್ದು ಶಿಕ್ಷಕರ ಸಾಮರ್ಥ್ಯ, ಸಾಮಾಗ್ರಿಗಳ ಲಭ್ಯತೆ ಮತ್ತು ಸಮುದಾಯದ ವಿರೋಧ ಕೂಡ ಇದಕ್ಕೆ ಕಾರಣ ಎಂದಿದೆ.

ಕಡಿಮೆ ಮತ್ತು ಮಧ್ಯಮ ಆದಾಯದ ದೇಶಗಳಲ್ಲಿ ಈ ಪ್ರಮಾಣ ಶೇ.90ರಷ್ಟಿದೆ. ಎಲ್ಲರಿಗೂ ಪ್ರಯೋಜನವಾಗುವ ಶೈಕ್ಷಣಿಕ ವ್ಯವಸ್ಥೆಗಳನ್ನು ರಚಿಸುವ ಗುರಿಯೊಂದಿಗೆ ಬಹುಭಾಷಾ ಶಿಕ್ಷಣ ನೀತಿಗಳು ಮತ್ತು ಅಭ್ಯಾಸಗಳನ್ನು ರಾಷ್ಟ್ರಗಳು ಜಾರಿಗೆ ತರಬೇಕು ಎಂದು ವರದಿ ಹೇಳಿದೆ.

‘ಬಹುಭಾಷಾ ಶಿಕ್ಷಣದ ಕುರಿತು ಜಾಗತಿಕ ಮಾರ್ಗದರ್ಶನ’ ಎನ್ನುವ ವಿಚಾರದಲ್ಲಿ ವರದಿ ಮಂಡಿಸಿರುವ ಸಂಸ್ಥೆಯು ವಲಸೆ ಹೆಚ್ಚಾದಂತೆ ಭಾಷಾ ವೈವಿಧ್ಯತೆಯೂ ಹೆಚ್ಚುತ್ತಿದೆ. ಇದರಿಂದಾಗಿ ಜಗತ್ತಿನಾದ್ಯಂತ 3.1 ಕೋಟಿಗೂ ಅಧಿಕ ವಿದ್ಯಾರ್ಥಿಗಳು ಶಿಕ್ಷಣದಲ್ಲಿ ಭಾಷಾ ಅಡೆತಡೆಗಳನ್ನು ಎದುರಿಸುತ್ತಿದ್ದಾರೆ. ಶಾಲೆಗಳಲ್ಲಿ ವೈವಿಧ್ಯಮ ಭಾಷಾ ಕಲಿಕೆ ಇಂದು ಸಾಮಾನ್ಯವಾಗಿದೆ ಎಂದಿದೆ.