ವಿಶ್ವದಲ್ಲೇ ಅತ್ಯಂತ ವೇಗವಾಗಿ ಚಲಿಸುವ ಬೈಕ್‌ ಎಂಬ ಹಿರಿಮೆ ಹೊಂದಿರುವ ಹಯಬುಸಾ ಬೈಕ್‌ ಡಿಕ್ಕಿ ಹೊಡೆದು ಕಾರಿನಲ್ಲಿದ್ದ ಮೂವರು ಸೇರಿ 5 ಜನರು ಸಾವನ್ನಪ್ಪಿದ ಘಟನೆ ತೆಲಂಗಾಣದಲ್ಲಿ ಭಾನುವಾರ ನಡೆದಿದೆ.

ನವದೆಹಲಿ: ವಿಶ್ವದಲ್ಲೇ ಅತ್ಯಂತ ವೇಗವಾಗಿ ಚಲಿಸುವ ಬೈಕ್‌ ಎಂಬ ಹಿರಿಮೆ ಹೊಂದಿರುವ ಹಯಬುಸಾ ಬೈಕ್‌ ಡಿಕ್ಕಿ ಹೊಡೆದು ಕಾರಿನಲ್ಲಿದ್ದ ಮೂವರು ಸೇರಿ 5 ಜನರು ಸಾವನ್ನಪ್ಪಿದ ಘಟನೆ ತೆಲಂಗಾಣದಲ್ಲಿ ಭಾನುವಾರ ನಡೆದಿದೆ. ಯುವಕರ ಗೊಂಪೊಂದು ಬೈಕ್‌ ರೇಸ್‌ ನಡೆಸುತ್ತಿದ್ದ. ಇದರ ಭಾಗವಾಗಿದ್ದ ಇಬ್ಬರು ಯುವಕರು ಹಯಬುಸಾ ಬೈಕ್‌ನಲ್ಲಿ ಮಹಬೂಬಾನಗರದ ಪಾಲಕ್ಕೊಂಡ ಬೈಪಾಸ್‌ ರಸ್ತೆಯ ಬಳಿ 140 ಕಿ.ಮೀ ವೇಗದಲ್ಲಿ ಸಾಗುತ್ತಿದ್ದರು. ಈ ವೇಳೆ ಬೈಕ್‌ ಆಕಸ್ಮಿಕವಾಗಿ ಕಾರಿಗೆ ಡಿಕ್ಕಿ ಹೊಡೆದಿದೆ. ಈ ವೇಳೆ ಕಾರಿನಲ್ಲಿದ್ದ ಮೂವರು ಮತ್ತು ಬೈಕ್‌ನಲ್ಲಿದ್ದ ಇಬ್ಬರು ಸಾವನ್ನಪ್ಪಿದ್ದಾರೆ.

==

ಸತತ 2ನೇ ಅವಧಿಗೆ ಅಸ್ಸಾಂ ಸಿಎಂ ಆಗಿ ಇಂದು ಹಿಮಂತ ಶಪಥ

ಗುವಾಹಟಿ: ಸತತ ಮೂರನೇ ಬಾರಿಗೆ ಎನ್‌ಡಿಎ ಪಾಲಾಗಿರುವ ಅಸ್ಸಾಂನ ಮುಖ್ಯಮಂತ್ರಿಯಾಗಿ ಹಿಮಂತ ಬಿಸ್ವ ಶರ್ಮಾ ಮಂಗಳವಾರ ಪ್ರಮಾಣ ವಚನ ಸ್ವೀಕರಿಸಲಿದ್ದಾರೆ. ಅವರು ಸಿಎಂ ಹುದ್ದೆ ಏರುತ್ತಿರುವುದು ಸತತ 2ನೇ ಬಾರಿ ಮತ್ತು ಒಟ್ಟಾರೆ 3ನೇ ಬಾರಿ. ಪ್ರಧಾನಿ ನರೇಂದ್ರ ಮೋದಿ, ಬಿಜೆಪಿ ರಾಷ್ಟ್ರಾಧ್ಯಕ್ಷ ನಿತಿನ್‌ ನವೀನ್‌, ಕೇಂದ್ರ ಸಚಿವರಾದ ಅಮಿತ್‌ ಶಾ, ರಾಜನಾಥ್‌ ಸಿಂಗ್‌, ನಿರ್ಮಲಾ ಸೀತಾರಾಮನ್‌, ಎನ್‌ಡಿಎ ಅಧಿಕಾರದಲ್ಲಿರುವ ವಿವಿಧ ರಾಜ್ಯಗಳ ಸಿಎಂ, ಡಿಸಿಎಂಗಳು ಭಾಗಿಯಾಗಲಿದ್ದಾರೆ.

==

ಮುಂಗಾರು ಅವಧಿಗೆ ಬೇಕಾದಷ್ಟು ಗೊಬ್ಬರ ಸಂಗ್ರಹ ಇದೆ: ಕೇಂದ್ರ

ನವದೆಹಲಿ: ‘ದೇಶದಲ್ಲಿ ರಸಗೊಬ್ಬರ ದಾಸ್ತಾನುವಿನಲ್ಲಿ ಯಾವುದೇ ಅಭಾವವಿಲ್ಲ. ಈಗಿರುವ ಪ್ರಮಾಣ ಮುಂಗಾರು ಋತುವಿಗೂ ಸಮರ್ಪಕವಾಗಿ ಪೂರೈಕೆಯಾಗುತ್ತದೆ’ ಎಂದು ಕೇಂದ್ರ ಸರ್ಕಾರ ರೈತರಿಗೆ ಸ್ಪಷ್ಟನೆ ನೀಡಿದೆ.ಮಧ್ಯಪ್ರಾಚ್ಯ ಬಿಕ್ಕಟ್ಟಿನ ಕುರಿತ ಚರ್ಚೆಗಾಗಿ ಸೋಮವಾರ ನಡೆದ ಅಂತರ್‌ ಸಚಿವಾಲಯಗಳ ಸಭೆಯಲ್ಲಿ ರಸಗೊಬ್ಬರ ಇಲಾಖೆಯ ಹೆಚ್ಚುವರಿ ಕಾರ್ಯದರ್ಶಿ ಅಪರ್ಣಾ ಎಸ್ ಶರ್ಮಾ ಈ ಬಗ್ಗೆ ಮಾಹಿತಿ ನೀಡಿದ್ದಾರೆ. ‘2026ರ ಮುಂಗಾರು ಋತುವಿಗೆ ರಸಗೊಬ್ಬರ ದಾಸ್ತಾನು ಶೇ.51ಕ್ಕಿಂತ ಹೆಚ್ಚಿದೆ. ಇದು ಸಾಮಾನ್ಯ ಬೇಡಿಕೆಯಾಗಿರುವ ಶೇ.33ಕ್ಕಿಂತ ಅಧಿಕ. ಆದ್ದರಿಂದ ರಸಗೊಬ್ಬರ ಸಂಗ್ರಹ ಆರಾಮದಾಯಕವಾಗಿದೆ. ಪ್ರಮುಖ ರಸಗೊಬ್ಬರಗಳ ಗರಿಷ್ಠ ಚಿಲ್ಲರೆ ಬೆಲೆಯು ಒಂದೇ ಆಗಿರುತ್ತದೆ. ಯುದ್ಧದ ಬಳಿಕ ದೇಶಿಯ ಉತ್ಪಾದನೆ 6.78 ಲಕ್ಷ ಟನ್‌ಗಳಾಗಿದ್ದರೆ, ಆಮದು 19.94 ಲಕ್ಷ ಟನ್‌ಗಳಷ್ಟಿದೆ ’ ಎಂದರು.

==

ರುಪಾಯಿ ಮೌಲ್ಯ 79 ಪೈಸೆ ಕುಸಿದು 95.27ಕ್ಕೆ: ಸಾರ್ವಕಾಲಿಕ ಕನಿಷ್ಠ

ಮುಂಬೈ: ಸಂಧಾನ ಪ್ರಸ್ತಾವ ಅಂಶಗಳಿಗೆ ಅಮೆರಿಕ, ಇರಾನ್‌ ತಿರಸ್ಕಾರ, ಪ್ರಧಾನಿ ನರೇಂದ್ರ ಮೋದಿ ಮಿತವ್ಯಯ ಸಲಹೆ ಬೆನ್ನಲ್ಲೇ ಡಾಲರ್‌ ಎದುರು ರುಪಾಯಿ ಮೌಲ್ಯ ಮತ್ತೆ ಕುಸಿತ ಕಂಡಿದೆ. ಸೋಮವಾರ ದಿನದಂತ್ಯಕ್ಕೆ ರುಪಾಯಿ ಮೌಲ್ಯ 79 ಪೈಸೆ ಕುಸಿದು 95.27 ರು.ಗೆ ತಲುಪಿದೆ. ಇದು ಇದುವರೆಗಿನ ಅತ್ಯಂತ ಸಾರ್ವಕಾಲಿಕ ಕನಿಷ್ಠ ಎನಿಸಿಕೊಂಡಿದೆ.ಶುಕ್ರವಾರ ಅಂತ್ಯಗೊಂಡಿದ್ದ ಮಾರುಕಟ್ಟೆಯಲ್ಲಿ 94.49 ರು.ನಲ್ಲಿ ಅಂತ್ಯವಾಗಿತ್ತು.

==

ಸೆನ್ಸೆಕ್ಸ್‌ 1313 ಅಂಕಗಳ ಭಾರೀ ಕುಸಿತ, ಆಭರಣ ಕಂಪನಿಗಳ ಷೇರು ಧರೆಗೆ

ಮುಂಬೈ: ಅಮೆರಿಕ-ಇರಾನ್‌ ಸಂಧಾನ ಯತ್ನ ವಿಫಲ, ಕಚ್ಚಾತೈಲ ಬೆಲೆ ಏರಿಕೆ, ದೇಶೀಯವಾಗಿ ಚಿನ್ನ ಖರೀದಿ ಸ್ಥಗಿತ ಮಾಡಿ, ತೈಲ ಬಳಕೆ ಇಳಿಸಿ ಎಂಬ ಪ್ರಧಾನಿ ನರೇಂದ್ರ ಮೋದಿ ಅವರ ಹೇಳಿಕೆಯ ಪರಿಣಾಮ ಬಾಂಬೆ ಷೇರುಪೇಟೆಯ ಸಂವೇದಿ ಸೂಚ್ಯಂಕವಾದ ಸೆನ್ಸೆಕ್ಸ್‌ ಸೋಮವಾರ 1313 ಅಂಕಗಳ ಭಾರೀ ಕುಸಿತ ಕಂಡು 76,015ಕ್ಕೆ ತಲುಪಿದೆ. ಮತ್ತೊಂದೆಡೆ ನಿಫ್ಟಿ 360 ಅಂಕ ಕುಸಿದು 23,816ರಲ್ಲಿ ಅಂತ್ಯವಾಗಿದೆ. ಪ್ರಧಾನಿ ಮೋದಿ ಕರೆ ಹಿನ್ನೆಲೆಯಲ್ಲಿ ಚಿನ್ನಾಭರಣ ಕಂಪನಿಗಳ ಷೇರು ಮೌಲ್ಯ ಶೇ.6 ರಿಂದ ಶೇ.9ರಷ್ಟು ಕುಸಿತ ಕಂಡವು.