ಸಾರಾಂಶ
ನವದೆಹಲಿ: ವಿದ್ಯಾವಂತ ಯುವಸಮೂಹಕ್ಕೆ ಅತಿ ಹೆಚ್ಚಿನ ಉದ್ಯೋಗ ಕಲ್ಪಿಸಿರುವ ವಲಯಗಳ ಪೈಕಿ ಒಂದಾದ ಮಾಹಿತಿ ತಂತ್ರಜ್ಞಾನ ವಲಯದಲ್ಲಿ ಈ ವರ್ಷ ಭಾರೀ ಉದ್ಯೋಗ ಕಡಿತ ಸದ್ದಿಲ್ಲದೇ ನಡೆದಿದೆ. ಒಂದು ಅಂದಾಜಿನ ಪ್ರಕಾರ ಈ ವರ್ಷ ಐಟಿ ವಲಯದಲ್ಲಿ ಒಟ್ಟು ಕಡಿತವಾಗುವ ಉದ್ಯೋಗ ಸಂಖ್ಯೆ 50 ಸಾವಿರ ದಾಟಬಹುದು ಎಂದು ವರದಿಗಳು ತಿಳಿಸಿವೆ.
ಐಟಿ ವಲಯದ ಬಹತೇಕ ಕಂಪನಿಗಳು ದಿನೇ ದಿನೇ ಕೃತಕ ಬುದ್ಧಿಮತ್ತೆ ಆಧರಿತ ತಂತ್ರಜ್ಞಾನ ಅಳವಡಿಕೆ ಮೂಲಕ ಭಾರೀ ಪ್ರಮಾಣದ ಉದ್ಯೋಗ ಕಡಿತ ಮಾಡಿವೆ. ಇನ್ನೊಂದೆಡೆ ವೆಚ್ಚ ಕಡಿತದ ಕ್ರಮಗಳು ಕೂಡಾ ಕಂಪನಿಗಳು ಸಿಬ್ಬಂದಿ ಸಂಖ್ಯೆ ಕಡಿತ ಮಾಡಲು ಕಾರಣವಾಗಿದೆ ಎನ್ನಲಾಗಿದೆ.
2023-2004ರ ನಡುವೆ ಐಟಿ ವಲಯದಲ್ಲಿ ಉದ್ಯೋಗ ಕಡೆದುಕೊಂಡವರ ಪ್ರಮಾಣ 25 ಸಾವಿರದಷ್ಟಿತ್ತು. ಈ ವರ್ಷ ಅದು ದುಪ್ಪಟ್ಟಾಗಲಿದೆ. ಈ ವರ್ಷ ಜುಲೈವರೆಗೂ ವಿವಿಧ ಕಂಪನಿಗಳು ಘೋಷಿಸಿರುವ ಉದ್ಯೋಗ ಕಡಿತದ ಸಂಖ್ಯೆ ಅಂದಾಜು 25 ಸಾವಿರದಷ್ಟಿದೆ. ಅದು ವರ್ಷಾಂತ್ಯದ ವೇಳೆಗೆ 50 ಸಾವಿರ ದಾಟಬಹುದು ಎಂಬ ಲೆಕ್ಕಾಚಾರವಿದೆ.
ಎಲ್ಲಿ ಎಷ್ಟು?:
ಭಾರತದ ಅತಿದೊಡ್ಡ ಐಟಿ ಕಂಪನಿಯಾದ ಟಿಸಿಎಸ್ ಈ ವರ್ಷ ಜಾಗತಿಕವಾಗಿ 12,000, ಇನ್ನು ವಿಪ್ರೋ 24,516, ಆ್ಸಕ್ಸೆಂಚರ್ 11,000, ಸೇಲ್ಸ್ ಫೋರ್ಸ್ 4,000, ಮೈಕ್ರೋಸಾಫ್ಟ್ 4,000 ಹುದ್ದೆ ಕಡಿತದ ಘೋಷಣೆ ಮಾಡಿವೆ. ಇನ್ನು ಸಣ್ಣಪುಟ್ಟ ಇತರೆ ಕಂಪನಿಗಳ ಲೆಕ್ಕವನ್ನೂ ಹಿಡಿದರೆ ಈ ಪ್ರಮಾಣ ಇನ್ನಷ್ಟು ಹೆಚ್ಚಲಿದೆ.
ದಿಢೀರ್ ಶಾಕ್:
‘ಕೆಲವು ಕಂಪನಿಗಳು ಸಿಬ್ಬಂದಿಗೆ ಇವತ್ತಿಗೆ ನಿಮ್ಮ ಸೇವೆ ಮುಗಿಯಿತು ಎನ್ನುವ ಮಟ್ಟಿಗೆ ದಿಢೀರ್ ವಜಾ ಸುದ್ದಿಯನ್ನು ಪ್ರಕಟಿಸುತ್ತಿವೆ. ಕೆಲವು ಕಂಪನಿಗಳು ಉದ್ಯೋಗಿಗಳಿಗೆ 3 ತಿಂಗಳ ವೇತನ ಕೊಟ್ಟು ವಜಾ ಮಾಡುತ್ತಿವೆ. ಕೆಲವು ಕಂಪನಿಗಳು ಮಾತ್ರ 3 ತಿಂಗಳ ಮೇಲೆ ವಜಾದ ಸುಳಿವು ನೀಡಿ ಬಳಿಕ ವಜಾ ಮಾಡುತ್ತಿವೆ’ ಎಂದು ಐಟಿ ಸಂಘಟನೆಗಳು ಹೇಳಿವೆ.