ವೀಸಾ ಗಡುವು ಅಂತ್ಯ : 537 ಪಾಕಿಗಳು ತವರಿಗೆ

| N/A | Published : Apr 28 2025, 12:48 AM IST / Updated: Apr 28 2025, 07:49 AM IST

ಸಾರಾಂಶ

 ಗಡುವಿನೊಳಗೆ 9 ರಾಜತಾಂತ್ರಿಕರು, ಅಧಿಕಾರಿಗಳು ಸೇರಿದಂತೆ 537 ಮಂದಿ ಅಟ್ಟಾರಿ ಗಡಿ ಮೂಲಕ ಕಳೆದ 4 ದಿನದಲ್ಲಿ ಪಾಕಿಸ್ತಾನಕ್ಕೆ ಮರಳಿದ್ದಾರೆ.

ನವದೆಹಲಿ: ಪಹಲ್ಗಾಂ ದಾಳಿಗೆ ಪ್ರತೀಕಾರವಾಗಿ ಭಾರತ ತನ್ನ ನೆಲದಲ್ಲಿ ನೆಲೆಸಿರುವ ಪಾಕಿಸ್ತಾನದ ಪ್ರಜೆಗಳಿಗೆ ತಮ್ಮ ತಾಯ್ನಾಡಿಗೆ ಮರಳಲು ಆದೇಶಿಸಿದ್ದ ಗಡುವು ಏ.27ರ ಭಾನುವಾರಕ್ಕೆ ಅಂತ್ಯವಾಗಿದೆ. ಈ ಗಡುವಿನೊಳಗೆ 9 ರಾಜತಾಂತ್ರಿಕರು, ಅಧಿಕಾರಿಗಳು ಸೇರಿದಂತೆ 537 ಮಂದಿ ಅಟ್ಟಾರಿ ಗಡಿ ಮೂಲಕ ಕಳೆದ 4 ದಿನದಲ್ಲಿ ಪಾಕಿಸ್ತಾನಕ್ಕೆ ಮರಳಿದ್ದಾರೆ.

ಅಟ್ಟಾರಿ ಗಡಿ ಮೂಲಕ ಭಾನುವಾರ 237, ಶನಿವಾರ 81, ಶುಕ್ರವಾರ 191, ಗುರುವಾರ 28 ಪಾಕ್‌ ಪ್ರಜೆಗಳು ಭಾರತ ಬಿಟ್ಟು ಹೋಗಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಅತ್ತ ಭಾರತದಿಂದ ಪಾಕಿಸ್ತಾನಕ್ಕೆ ನೇರ ವಿಮಾನಸಂಚಾರ ಇರದ ಹಿನ್ನೆಲೆಯಲ್ಲಿ ಕೆಲವರು ಅನ್ಯ ದೇಶಗಳ ಮಾರ್ಗವಾಗಿ ಹೋಗಿರುವ ಸಾಧ್ಯತೆಯೂ ಇದೆ.

ಉಭಯ ದೇಶಗಳ ನಡುವೆ ಪರಿಸ್ಥಿತಿ ಹದಗೆಟ್ಟ ಬೆನ್ನಲ್ಲೇ, ಸಾರ್ಕ್‌ ಸೇರಿ ಅಲ್ಪಾವಧಿ ವೀಸಾ ಹೊಂದಿರುವ ಎಲ್ಲಾ ಪಾಕಿಸ್ತಾನಿಯರಿಗೆ ಭಾರತ ತೊರೆಯಲು ಸರ್ಕಾರ ಆದೇಶಿಸುತ್ತು. ಜೊತೆಗೆ, ತಮ್ಮ ರಾಜ್ಯದಲ್ಲಿ ಯಾವೊಬ್ಬ ಪಾಕ್‌ ಪ್ರಜೆಯೂ ಉಳಿಯದಂತೆ ನೋಡಿಕೊಳ್ಳಲು ಎಲ್ಲಾ ಸಿಎಂಗಳಿಗೆ ಸೂಚಿಸಲಾಗಿತ್ತು. ಆದರೆ ದೀರ್ಘಾವಧಿ, ರಾಜತಾಂತ್ರಿಕ ಅಥವಾ ಅಧಿಕೃತ ವೀಸಾ ಹೊಂದಿರುವವರಿಗೆ ಮಾತ್ರ ಇದರಿಂದ ವಿಮಾಯಿತಿ ನೀಡಲಾಗಿದೆ.

850 ಮಂದಿ ಮರಳಿ ಭಾರತಕ್ಕೆ:

ಅತ್ತ, ಪಾಕಿಸ್ತಾನದಲ್ಲಿ ವಾಸವಿದ್ದ 850 ಮಂದಿ ಭಾರತೀಯರು ಕೂಡ 4 ದಿನಗಳಲ್ಲಿ ತಾಯ್ನಾಡಿಗೆ ಮರಳಿದ್ದಾರೆ. ಇವರಲ್ಲಿ ಒಬ್ಬ ರಾಜತಾಂತ್ರಿಕರೂ ಇದ್ದಾರೆ.

ದೇಶ ತೊರೆಯದ ಪಾಕಿಗಳಿಗೆ 3 ವರ್ಷ ಜೈಲು, ₹3 ಲಕ್ಷ ದಂಡ

ನವದೆಹಲಿ: ಅಲ್ಪಾವಧಿ ವೀಸಾದಡಿ ಭಾರತಕ್ಕೆ ಬಂದಿರುವ ಪಾಕಿಸ್ತಾನಿ ಪ್ರಜೆಗಳು ದೇಶ ಬಿಟ್ಟು ತೆರಳಲು ಸರ್ಕಾರ ವಿಧಿಸಿದ್ದ ಗಡುವು ಭಾನುವಾರ ಮುಕ್ತಾಯವಾಗಿದೆ. ಈ ಗಡುವಿನೊಳಗೆ ಭಾರತವನ್ನು ತೊರೆಯಲು ವಿಫಲರಾದ ಯಾವುದೇ ಪಾಕಿಸ್ತಾನಿ ಪ್ರಜೆಗೆ ವಲಸೆ ಮತ್ತು ವಿದೇಶಿಯರ ಕಾಯ್ದೆ 2025ರ ಪ್ರಕಾರ 3 ವರ್ಷಗಳವರೆಗೆ ಜೈಲುಶಿಕ್ಷೆ ಅಥವಾ ಗರಿಷ್ಠ 3 ಲಕ್ಷ ರು. ದಂಡ ಅಥವಾ ಎರಡನ್ನೂ ವಿಧಿಸಬಹುದಾಗಿದೆ. ಪಹಲ್ಗಾಂ ದಾಳಿಯ ನಂತರ, ಸಾರ್ಕ್ ವೀಸಾ ಹೊಂದಿರುವವರು ಏ.26 ಮತ್ತು ವೈದ್ಯಕೀಯ ವೀಸಾ ಹೊಂದಿರುವವರು ಏ.27ರ ಒಳಗೆ ದೇಶ ತೊರೆಯಬೇಕು ಎಂದು ಕೇಂದ್ರ ಸರ್ಕಾರ ಗಡುವು ನೀಡಿತ್ತು.

ಉಗ್ರರ ಗುಂಡಿಗೆ ಜಮ್ಮು ಸಾಮಾಜಿಕ ಕಾರ್ಯಕರ್ತ ಬಲಿ

ಶ್ರೀನಗರ: ಇಲ್ಲಿನ ಕುಪ್ವಾರಾ ಜಿಲ್ಲೆಯಲ್ಲಿ ಉಗ್ರರು ಸಾಮಾಜಿಕ ಕಾರ್ಯಕರ್ತರೊಬ್ಬರನ್ನು ಗುಂಡಿಟ್ಟು ಹತ್ಯೆ ಮಾಡಿದ್ದಾರೆ. ಕಾರ್ಯಕರ್ತ ಗುಲಾಂ ರಸೂಲ್‌ ಮ್ಯಾಗ್ರೇ ಕಂಡಿ ಖಾಸ್‌ನ ತಮ್ಮ ಮನೆಯಲ್ಲಿದ್ದ ವೇಳೆ ಉಗ್ರಗಾಮಿಗಳು ಅವರ ಮೇಲೆ ಗುಂಡಿನ ದಾಳಿ ನಡೆಸಿದ್ದಾರೆ. ಕೂಡಲೇ ರಸೂಲ್‌ ಅವರನ್ನು ಆಸ್ಪತ್ರೆಗೆ ಕರೆದೊಯ್ದರೂ ಪ್ರಯೋಜನವಾಗಲಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಆದರೆ ರಸೂಲ್‌ ಮೇಲೆ ಯಾವ ಕಾರಣಕ್ಕೆ ದಾಳಿ ಮಾಡಲಾಯಿತು ಎಂಬುದು ಸ್ಪಷ್ಟವಿಲ್ಲ.