ಸಾರಾಂಶ
ನವದೆಹಲಿ: ದಿಲ್ಲಿಯಲ್ಲಿ ಕೊರೆವ ಚಳಿ ಇರುವ ಕಾರಣ, ಚಳಿ ಕಾಯಿಸಲು ಮನೆಯಲ್ಲಿ ಹೊತ್ತಿಸಿದ್ದ ಅಗ್ಗಷ್ಟಿಕೆ (ಕಲ್ಲಿದ್ದಲು ಬ್ರೇಜಿಯರ್ಸ್) ವಿಷಾನಿಲ ಸೇವಿಸಿ ಒಂದೇ ಕುಟುಂಬದ ನಾಲ್ವರು ಸೇರಿದಂತೆ ಒಟ್ಟು 6 ಜನರು ಸಾವನ್ನಪ್ಪಿರುವ ಎರಡು ಪ್ರತ್ಯೇಕ ಘಟನೆ ದೆಹಲಿಯಲ್ಲಿ ನಡೆದಿವೆ.
ಉತ್ತರ ದೆಹಲಿಯ ಅಲಿಪುರ್ ಪ್ರದೇಶದಲ್ಲಿ ನೀರಿನ ಟ್ಯಾಂಕರ್ ಚಾಲಕರಾಗಿದ್ದ ರಾಕೇಶ್ (40) ಎಂಬುವವರ ಮನಯೆಲ್ಲಿ ಚಳಿ ಕಾಯಿಸಲು ಶನಿವಾರ ರಾತ್ರಿ ಅಗ್ಗಿಷ್ಟಿಕೆ ಹೊತ್ತಿಸಲಾಗಿತ್ತು. ಬಳಿಕ ಅದರಿಂದ ಬಿಡುಗಡೆಯಾದ ವಿಷಾನಿಲ ಮನೆಯಲ್ಲಿ ಆವರಿಸಿ ರಾಕೇಶ್ ಪತ್ನಿ ಲಲಿತಾ (38), ಅವರ ಇಬ್ಬರ ಮಕ್ಕಳಾದ ಪಿಯೂಷ್ (8) ಮತ್ತು ಸನ್ನಿ (7) ಸಾವನ್ನಪ್ಪಿದ್ದಾರೆ.
ಇದೇ ರೀತಿಯ ಘಟನೆಯಲ್ಲಿ, ಪಶ್ಚಿಮ ದೆಹಲಿಯ ಇಂದರ್‌ಪುರಿಯಲ್ಲಿ ಅಗ್ಗಿಷ್ಟಿಕೆ ವಿಷಾನಿಲವನ್ನು ಉಸಿರಾಡಿ ನೇಪಾಳ ಮೂಲದಳಿಬ್ಬರು ಪುರುಷರಾದ ರಾಮ್ ಬಹದ್ದೂರ್ (57) ಮತ್ತು ಅಭಿಷೇಕ್ (22) ತಮ್ಮ ಮೆನಯಲ್ಲಿ ಸಾವನ್ನಪ್ಪಿದ್ದಾರೆ.
ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ತಾಪಮಾನ ತೀವ್ರ ಕುಸಿಯುತ್ತಿದ್ದು ಚಳಿಯಿಂದ ಜನರು ತತ್ತರಿಸುತ್ತಿದ್ದಾರೆ. ಭಾನುವಾರ ಮುಂಜಾನೆ ನಗರದಲ್ಲಿ ತಾಪಮಾನ ಕೇವಲ 3.5 ಡಿಗ್ರಿ ಸೆಲ್ಸಿಯಸ್‌ನಷ್ಟು ದಾಖಲಾಗಿದೆ.