ಸಾರಾಂಶ
ನವದೆಹಲಿ: 18ನೇ ಲೋಕಸಭಾ ಚುನಾವಣೆಯಲ್ಲಿ ಅಂಚೆ ಮತದಾನ ಹೊರತು ಪಡಿಸಿ ಶೇ.65.79 ರಷ್ಟು ಮತದಾನವಾಗಿದೆ ಎಂದು ಚುನಾವಣಾ ಆಯೋಗ ತಿಳಿಸಿದೆ. ಗುರುವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಮುಖ್ಯ ಚುನಾವಣಾ ಆಯುಕ್ತ ರಾಜೀವ್ ಕುಮಾರ್, ಒಟ್ಟು 64.2 ಕೋಟಿ ಮತದಾರರು ತಮ್ಮ ಹಕ್ಕು ಚಲಾಯಿಸಿದ್ದಾರೆ. 7 ಹಂತಗಳಲ್ಲಿ ನಡೆದ ಚುನಾವಣೆಯಲ್ಲಿ ಒಟ್ಟು ಶೇ. 65.79ರಷ್ಟು ಮತದಾನವಾಗಿದೆ. ಇದು ಇವಿಎಂ ಮುಖಾಂತರವಾದ ಮತದಾನವಾಗಿದೆ ಎಂದರು.
ಕಳೆದ ಬಾರಿಯ ಚುನಾವಣೆಯಲ್ಲಿ ಶೇ.67.40ರಷ್ಟು ಮತದಾನವಾಗಿತ್ತು. ಆಗ ಭಾರತವು 91.20 ಕೋಟಿ ಮತದಾರರನ್ನು ಹೊಂದಿತ್ತು. ಈ ಪೈಕಿ 61.5 ಕೋಟಿ ಜನರು ತಮ್ಮ ಹಕ್ಕು ಚಲಾಯಿಸಿದ್ದರು. ಈ ಬಾರಿಯ ಚುನಾವಣೆಯಲ್ಲಿ ಮತದಾರರ ಸಂಖ್ಯೆ 96.88 ಕೋಟಿಯಷ್ಟಿತ್ತು.
ಕೆಲವೇ ದಿನಗಳಲ್ಲಿ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶದ ಅಂಚೆ ಮತದಾನದ ಬಗ್ಗೆ ಮಾಹಿತಿ ಸಿಗಲಿದೆ. ಅದನ್ನು ಶೀಘ್ರವಾಗಿ ಪ್ರಕಟಿಸಲಾಗುವುದು ಎಂದು ಹೇಳಿದರು.
ಲೋಕಸಭಾ ಚುನಾವಣೆ ನೀತಿ ಸಂಹಿತೆ ತೆರವು: ಚು. ಆಯೋಗನವದೆಹಲಿ: ಲೋಕಸಭೆ ಚುನಾವಣೆ ಘೋಷಣೆಯಾದ ದಿನದಿಂದ ಅಂದರೆ ಮಾರ್ಚ್ 16 ರಿಂದ ದೇಶದಲ್ಲಿ ಜಾರಿಯಲ್ಲಿದ್ದ ಮಾದರಿ ಚುನಾವಣಾ ನೀತಿ ಸಂಹಿತೆಯನ್ನು ಚುನಾವಣಾ ಅಯೋಗ ಗುರುವಾರ ತೆರವುಗೊಳಿಸಿದೆ. ಕೇಂದ್ರ ಸಂಪುಟ ಕಾರ್ಯದರ್ಶಿ ಮತ್ತು ರಾಜ್ಯ ಮುಖ್ಯ ಕಾರ್ಯದರ್ಶಿಗಳಿಗೆ ಈ ಬಗ್ಗೆ ಪತ್ರ ಮುಖೇನ ತಿಳಿಸಿರುವ ಆಯೋಗ,‘ಲೋಕಸಭೆ ಚುನಾವಣೆ ಮತ್ತು ಅರುಣಾಚಲ ಪ್ರದೇಶ, ಸಿಕ್ಕಿಂ,ಒಡಿಶಾ, ಆಂಧ್ರಪ್ರದೇಶ ಮತ್ತು ಕೆಲವು ಉಪ ಚುನಾವಣೆಯ ಫಲಿತಾಂಶಗಳನ್ನು ಘೋಷಿಸಲಾಗಿದೆ. ತಕ್ಷಣವೇ ಜಾರಿಗೆ ಬರುವಂತೆ ಇದುವರೆಗೆ ಜಾರಿಯಲ್ಲಿದ್ದ ಮಾದರಿ ನೀತಿ ಸಂಹಿತೆಯನ್ನು ಸ್ಥಗಿತಗೊಳಿಸಲಾಗಿದೆ’ ಎಂದಿದೆ.