ಸಾರಾಂಶ
ಹೈದರಾಬಾದ್: ಕೆಲಸ ಕೊಡಿಸುವುದಾಗಿ ಹೇಳಿ ಸೈಬರ್ ಅಪರಾಧಗಳ ಕೆಲಸಕ್ಕೆ ನೂಕಲ್ಪಟ್ಟಿದ್ದ ಕೆಲವು ಕನ್ನಡಿಗರು ಸೇರಿ 70 ಭಾರತೀಯರನ್ನು ಮ್ಯಾನ್ಮಾರ್‌ನ ಮೈವಾಡ್ಡಿಯಲ್ಲಿರುವ ಕೆಕೆ ಪಾರ್ಕ್‌ನಿಂದ ರಕ್ಷಿಸಲಾಗಿದೆ.
ಆನ್‌ಲೈನ್ ಹಗರಣಗಳಿಗೆ ಕುಖ್ಯಾತವಾಗಿರುವ ಕೆ.ಕೆ. ಪಾರ್ಕ್ ಮೇಲೆ ಮ್ಯಾನ್ಮಾರ್‌ನ ಗಡಿ ಭದ್ರತಾ ಪಡೆ ದಾಳಿ ನಡೆಸಿ 5 ಮಹಿಳೆಯರು ಸೇರಿ 70 ಭಾರತೀಯರನ್ನು ರಕ್ಷಿಸಿದ್ದು, ಅವರನ್ನೆಲ್ಲಾ ಥಾಯ್ಲೆಂಡ್ ಗಡಿಗೆ ಸಮೀಪವಿರುವ ಮೇ ಸೊಟ್‌ಗೆ ಕಳಿಸಲಾಗಿದೆ. ರಕ್ಷಿಸಲ್ಪಟ್ಟವರಲ್ಲಿ ರಾಜಸ್ಥಾನದವರೇ ಅಧಿಕವಿದ್ದರು.
ರಕ್ಷಣೆಯ ಬಳಿಕ ಮಾತನಾಡಿದ ತೆಲಂಗಾಣ ಮೂಲದ ಮಧುಕರ್ ರೆಡ್ಡಿ ಎಂಬವರು, ‘70ರಿಂದ 80 ಭಾರತೀಯರು ಮುಂದಿನ ಕ್ರಮಕ್ಕಾಗಿ ಬಸ್ ನಿಲ್ದಾಣದಲ್ಲೇ ಕಾದಿದ್ದೇವೆ. ನಮ್ಮನ್ನು ಆದಷ್ಟು ಬೇಗ ಭಾರತಕ್ಕೆ ತಲುಪಿಸುವಂತೆ ಬ್ಯಾಂಕಾಕ್ ನಲ್ಲಿರುವ ಭಾರತೀಯ ಅಧಿಕಾರಿಗಳಲ್ಲಿ ಕೇಳಿಕೊಳ್ಳುತ್ತೇವೆ’ ಎಂದರು. ಜೊತೆಗೆ, ತಮಗೆ ಅಪರಾಧಗಳಲ್ಲಿ ತೊಡಗುವಂತೆ ಒತ್ತಾಯಿಸಿ ದೈಹಿಕ ಹಿಂಸೆ ನೀಡಲಾಗುತ್ತಿದ್ದ ಬಗ್ಗೆಯೂ ಅವರು ವಿವರಿಸಿದರು.
ಸೈಬರ್ ವಂಚನೆ ಕೆಲಸ:
ಭಾರತೀಯರು ಸೇರಿ ವಿದೇಶಿ ಪ್ರಜೆಗಳನ್ನು ಚೀನಾದವರು ನಡೆಸುವ ಸೈಬರ್ ವಂಚನೆ ಕೇಂದ್ರಗಳಲ್ಲಿ ದುಡಿಸಲಾಗುತ್ತಿತ್ತು. ಇದರಲ್ಲಿ ಮ್ಯಾನ್ಮಾರ್‌ನ ಗಡಿ ಭದ್ರತಾ ಪಡೆಯೂ ಸಹಕರಿಸುತ್ತಿತ್ತು ಎಂಬ ಆರೋಪವಿದೆ. ಅದರ ಬೆನ್ನಲ್ಲೇ, ಮ್ಯಾನ್ಮಾರ್ ಸೇನೆ ಸೈಬರ್ ಕೇಂದ್ರಗಳ ಮೇಲಿನ ದಾಳಿ ತೀವ್ರಗೊಳಿಸಲಿದೆ ಎಂದು ವಿದೇಶಾಂಗ ಸಚಿವಾಲಯ ತಿಳಿಸಿದೆ.