ಏರ್‌ ಇಂಡಿಯಾ ಸಿಬ್ಬಂದಿ ಸಾಮೂಹಿಕ ರಜೆ : 86 ವಿಮಾನ ರದ್ದು

| Published : May 09 2024, 01:06 AM IST / Updated: May 09 2024, 05:01 AM IST

ಸಾರಾಂಶ

ಟಾಟಾ ಒಡೆತನದ ಏರಿಂಡಿಯಾ ಎಕ್ಸ್‌ಪ್ರೆಸ್‌ನ 300ಕ್ಕೂ ಹೆಚ್ಚು ಸಿಬ್ಬಂದಿ ಬುಧವಾರ ದಿಢೀರ್‌ ಅನಾರೋಗ್ಯ ರಜೆ ಹಾಕಿದ್ದಾರೆ. ಈ ದಿಢೀರ್‌ ಬೆಳವಣಿಗೆಯ ಪರಿಣಾಮ 86 ದೇಶೀಯ ಮತ್ತು ಅಂತಾರಾಷ್ಟ್ರೀಯ ವಿಮಾನಗಳ ಸಂಚಾರವನ್ನು ರದ್ದುಪಡಿಸಲಾಗಿದೆ.

ನವದೆಹಲಿ: ಸಂಸ್ಥೆಯ ಆಡಳಿತ ಮಂಡಳಿಯ ಹೊಸ ನೀತಿಯ ಬಗ್ಗೆ ತೀವ್ರ ಆಕ್ರೋಶ ವ್ಯಕ್ತಪಡಿಸಿ ಟಾಟಾ ಒಡೆತನದ ಏರಿಂಡಿಯಾ ಎಕ್ಸ್‌ಪ್ರೆಸ್‌ನ 300ಕ್ಕೂ ಹೆಚ್ಚು ಸಿಬ್ಬಂದಿ ಬುಧವಾರ ದಿಢೀರ್‌ ಅನಾರೋಗ್ಯ ರಜೆ ಹಾಕಿದ್ದಾರೆ. ಈ ದಿಢೀರ್‌ ಬೆಳವಣಿಗೆಯ ಪರಿಣಾಮ 86 ದೇಶೀಯ ಮತ್ತು ಅಂತಾರಾಷ್ಟ್ರೀಯ ವಿಮಾನಗಳ ಸಂಚಾರವನ್ನು ರದ್ದುಪಡಿಸಲಾಗಿದೆ.

ಸಂಚಾರಕ್ಕೆ ಕೆಲವೇ ಹೊತ್ತಿಗೆ ಮೊದಲು ನಡುವೆ ನಡೆದ ಈ ಬೆಳವಣಿಗೆ ದೇಶವ್ಯಾಪಿ ಪ್ರಯಾಣಿಕರ ಆಕ್ರೋಶಕ್ಕೆ ತುತ್ತಾಗಿದೆ.

ಇದರ ನಡುವೆ, ಏರ್‌ ಇಂಡಿಯಾದಿಂದ ನಾಗರಿಕ ವಿಮಾನಯಾನ ಸಚಿವಾಲಯ ಸ್ಪಷ್ಟನೆ ಕೇಳಿದೆ. ಅಲ್ಲದೆ ಆದಷ್ಟು ಶೀಘ್ರ ಸಮಸ್ಯೆ ಇತ್ಯರ್ಥಪಡಿಸಿ ವಿಮಾನಗಳ ಸುಗಮ ಸಂಚಾರಕ್ಕೆ ವ್ಯವಸ್ಥೆ ಮಾಡಿಕೊಡುವಂತೆ ಸೂಚಿಸಿದೆ.

300ಕ್ಕೂ ಹೆಚ್ಚು ಸಿಬ್ಬಂದಿ ಮಂಗಳವಾರ ರಾತ್ರಿಯಿಂದಲೇ ಸಾಮೂಹಿಕ ರಜೆ ಹಾಕಿ, ಮೊಬೈಲ್‌ ಸ್ವಿಚಾಫ್‌ ಮಾಡಿಕೊಂಡಿದ್ದಾರೆ. ಹೀಗಾಗಿ ರಜೆ ಹಾಕಿದ ಸಿಬ್ಬಂದಿಗಳ ಜೊತೆ ಸಂಪರ್ಕ ಕೂಡಾ ಸಾಧ್ಯವಾಗದ ಹಿನ್ನೆಲೆಯಲ್ಲಿ ಭಾರೀ ಪ್ರಮಾಣದ ವಿಮಾನಗಳ ಸಂಚಾರ ರದ್ದುಪಡಿಸಬೇಕಾಗಿ ಬಂದಿದೆ.

ಈ ಕುರಿತು ಹೇಳಿಕೆ ನೀಡಿರುವ ಏರ್‌ ಇಂಡಿಯಾ, ‘ವಿಮಾನದ ಕೆಲ ಸಿಬ್ಬಂದಿಗಳು ಮಂಗಳವಾರ ರಾತ್ರಿಯಿಂದೀಚೆಗೆ ಸಾಮೂಹಿಕವಾಗಿ ಅನಾರೋಗ್ಯ ರಜೆ ಹಾಕಿದ ಹಿನ್ನೆಲೆಯಲ್ಲಿ ಕೆಲವೊಂದು ವಿಮಾನಗಳ ಸಂಚಾರ ರದ್ದು ಮತ್ತು ಕೆಲ ವಿಮಾನಗಳ ಸಂಚಾರದ ಸಮಯದಲ್ಲಿ ವ್ಯತ್ಯಯವಾಗಿದೆ. ಈ ಬೆಳವಣಿಗೆ ಕುರಿತು ನಾವು ಪ್ರಾಮಾಣಿಕವಾಗಿ ಕ್ಷಮೆ ಯಾಚಿಸುತ್ತೇವೆ ಎಂದು ಹೇಳಿದೆ. ಜೊತೆಗೆ ಸಂಚಾರ ರದ್ದಾದ ವಿಮಾನಗಳ ಪ್ರಯಾಣಿಕರಿಗೆ ಪೂರ್ಣ ಹಣ ವಾಪಸ್‌ ಇಲ್ಲವೇ ಬದಲಿ ವ್ಯವಸ್ಥೆಯ ಭರವಸೆಯನ್ನು ನೀಡಿದೆ.

ಆಕ್ರೋಶ ಏಕೆ?:

ಏರಿಂಡಿಯಾ ಎಕ್ಸ್‌ಪ್ರೆಸ್‌ ಅನ್ನು ಏರಿಂಡಿಯಾದಲ್ಲಿ ವಿಲೀನ ಮಾಡಿದ ಬಳಿಕ ವೇತನ ಸೇರಿದಂತೆ ವಿವಿಧ ವಿಷಯಗಳಲ್ಲಿ ತಾರತಮ್ಯ ಮಾಡಲಾಗುತ್ತಿದೆ. ಈ ಬಗ್ಗೆ ಧ್ವನಿ ಎತ್ತಿದವರ ಬಾಯಿ ಮುಚ್ಚಿಸುವ ಕೆಲಸ ಮಾಡಲಾಗುತ್ತಿದೆ ಎಂಬುದು ಸಿಬ್ಬಂದಿ ಆಕ್ರೋಶಕ್ಕೆ ಕಾರಣ.

ಮರುಕಳಿಸಿದ ಘಟನೆ:

ಕೆಲ ತಿಂಗಳ ಹಿಂದಷ್ಟೇ ಟಾಟಾ ಒಡೆತನದ ವಿಸ್ತಾರ ಏರ್‌ಲೈನ್ಸ್‌ನ ಸಿಬ್ಬಂದಿ ಕೂಡಾ ಇದೇ ರೀತಿಯ ಕಾರಣ ಮುಂದಿಟ್ಟು ಸಾಮೂಹಿಕ ರಜೆ ಹಾಕಿದ್ದರು. ಹೀಗಾಗಿ ಅಗಲೂ ನೂರಾರು ವಿಮಾನಗಳ ಸಂಚಾರ ರದ್ದು ಮಾಡಲಾಗಿತ್ತು.