ಸಾರಾಂಶ
ಶಿಥಿಲಾವಸ್ಥೆಯಲ್ಲಿದ್ದ ಮನೆಯ ಗೋಡೆ ಕುಸಿದ ಎರಡು ಪ್ರತ್ಯೇಕ ಘಟನೆಗಳಲ್ಲಿ ಒಟ್ಟು 13 ಮಕ್ಕಳು ಸಾವನ್ನಪ್ಪಿ, ನಾಲ್ವರು ಗಾಯಗೊಂಡಿರುವ ಘಟನೆ ಮಧ್ಯಪ್ರದೇಶದಲ್ಲಿ ನಡೆದಿದೆ.
ಸಾಗರ: ಶಿಥಿಲಾವಸ್ಥೆಯಲ್ಲಿದ್ದ ಮನೆಯ ಗೋಡೆ ಕುಸಿದ ಎರಡು ಪ್ರತ್ಯೇಕ ಘಟನೆಗಳಲ್ಲಿ ಒಟ್ಟು 13 ಮಕ್ಕಳು ಸಾವನ್ನಪ್ಪಿ, ನಾಲ್ವರು ಗಾಯಗೊಂಡಿರುವ ಘಟನೆ ಮಧ್ಯಪ್ರದೇಶದಲ್ಲಿ ನಡೆದಿದೆ. ಘಟನೆಯ ಕುರಿತು ಮುಖ್ಯಮಂತ್ರಿ ಮೋಹನ್ ಯಾದವ್ ತೀವ್ರ ಸಂತಾಪ ವ್ಯಕ್ತಪಡಿಸಿದ್ದು, ಮೃತ ಮಕ್ಕಳ ಕುಟುಂಬಕ್ಕೆ ತಲಾ 4 ಲಕ್ಷ ರು. ಪರಿಹಾರ ಪ್ರಕಟಿಸಿದ್ದಾರೆ.
ರೆಹ್ಲಿ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಶಾಪುರ ಗ್ರಾಮದಲ್ಲಿ ಬೆಳಗ್ಗೆ 8.30ರ ಸುಮಾರಿಗೆ ಶಿಥಿಲಗೊಂಡಿದ್ದ ಮನೆಯ ಸಮೀಪ ಧಾರ್ಮಿಕ ಕಾರ್ಯಕ್ರಮ ನಡೆಯುತ್ತಿತ್ತು. ಆ ವೇಳೆ ಅಲ್ಲಿ ಸಾಕಷ್ಟು ಸಂಖ್ಯೆಯಲ್ಲಿ ಮಕ್ಕಳು ನೆರೆದಿದ್ದರು. ಈ ವೇಳೆ ಏಕಾಏಕಿ ಗೋಡೆ ಕುಸಿದ ಪರಿಣಾಮ ಇಬ್ಬರು ಮಕ್ಕಳು ಸ್ಥಳದಲ್ಲೇ ಸಾವನ್ನಪ್ಪಿದರೆ, ಉಳಿದ ಏಳು ಮಂದಿ ಆಸ್ಪತ್ರೆಗೆ ಹೋಗುತ್ತಿರುವಾಗ ಕೊನೆಯುಸಿರೆಳೆದಿದ್ದಾರೆ. ಘಟನೆಯಲ್ಲಿ ಇಬ್ಬರು ಮಕ್ಕಳು ಗಾಯಗೊಂಡಿದ್ದಾರೆ.ಇತ್ತ ರೇವಾ ಜಿಲ್ಲೆಯಲ್ಲೂ ಶನಿವಾರ ಸಂಜೆ ಇಂತಹದ್ದೇ ಘಟನೆ ವರದಿಯಾಗಿದೆ. ಮಕ್ಕಳು ಶಾಲೆಯಿಂದ ಮನೆಗೆ ತೆರಳುತ್ತಿದ್ದ ವೇಳೆ ಕಟ್ಟಡವೊಂದು ಕುಸಿದು ನಾಲ್ಕು ಮಕ್ಕಳು ಮೃತಪಟ್ಟಿದ್ದು, ಒಬ್ಬ ತಾಯಿ ಹಾಗೂ ಮಗು ಬದುಕುಳಿದಿದ್ದಾರೆ. ಅವರನ್ನು ಆಸ್ಪತ್ರೆಗೆ ಸೇರಿಸಲಾಗಿದೆ.