ರೈಲಿನ ಚಕ್ರದ ಬಳಿ ಕುಳಿತು ಬಾಲಕನ 100 ಕಿ.ಮೀ ಸಂಚಾರ

| Published : Apr 23 2024, 12:48 AM IST / Updated: Apr 23 2024, 07:46 AM IST

ಸಾರಾಂಶ

ರೈಲುಗಾಲಿಯ ಒಳಗೆ ಸಿಕ್ಕಿಬಿದ್ದು ಬರೋಬ್ಬರಿ 100 ಕಿ.ಮೀ ಸಂಚರಿಸಿದ್ದ ಬಾಲಕನನ್ನು ರೈಲ್ವೇ ಸುರಕ್ಷಾ ಪೊಲೀಸರು ರಕ್ಷಿಸಿದ ಘಟನೆ ಉತ್ತರಪ್ರದೇಶದ ಹರ್ದೋಯಿಯಲ್ಲಿ ನಡೆದಿದೆ.

ಹರ್ದೋಯಿ: ರೈಲುಗಾಲಿಯ ಒಳಗೆ ಸಿಕ್ಕಿಬಿದ್ದು ಬರೋಬ್ಬರಿ 100 ಕಿ.ಮೀ ಸಂಚರಿಸಿದ್ದ ಬಾಲಕನನ್ನು ರೈಲ್ವೇ ಸುರಕ್ಷಾ ಪೊಲೀಸರು ರಕ್ಷಿಸಿದ ಘಟನೆ ಉತ್ತರಪ್ರದೇಶದ ಹರ್ದೋಯಿಯಲ್ಲಿ ನಡೆದಿದೆ.

ರೈಲ್ವೆ ಹಳಿಯ ಪಕ್ಕದಲ್ಲೇ ವಾಸವಾಗಿದ್ದ ಪುಟ್ಟ ಪೋರನೊಬ್ಬ ಹಳಿಯ ಮೇಲೆ ನಿಂತಿದ್ದ ಸರಕು ಸಾಗಾಣೆ ರೈಲಿನ ಮೇಲೆ ಹತ್ತಿ ಆಡಲು ಪ್ರಾರಂಭಿಸಿದ್ದಾನೆ. ಆದರೆ ಆ ರೈಲು ಸಂಚಾರ ಆರಂಭಿಸಿರುವುದು ಆತನ ಗಮನಕ್ಕೆ ಬಂದಿಲ್ಲ. ಬಳಿಕ ಆತ ಕೆಳಗಿಳಿಯಲು ಪ್ರಯತ್ನಿಸಿ ರೈಲುಗಾಲಿಯ (ರೈಲಿನ 4 ಗಾಲಿಗಳ ನಡುವಿನ ಪ್ರದೇಶ) ಒಳಗೆ ಸಿಲುಕಿದ್ದಾನೆ. ಸುಡು ಬಿಸಿಲು ಮತ್ತು ಸುದೀರ್ಘ ಸಂಚಾರದ ಹೊರತಾಗಿಯೂ ಬಾಲಕ ಅದರೊಳಗೇ ಕುಳಿತು ಜೀವ ಉಳಿಸಿಕೊಂಡಿದ್ದಾನೆ.

ಈ ನಡುವೆ ರೈಲು ಹರ್ದೋಯಿ ಬಳಿ ಸಂಚರಿಸುವಾಗ ಆತನನ್ನು ಗಮನಿಸಿದ ರೈಲ್ವೆ ಸುರಕ್ಷತಾ ಪೊಲೀಸರು ಬಾಲಕನನ್ನು ರಕ್ಷಿಸಿದ್ದಾರೆ.