ಮಹತ್ವದ ನಿರ್ಧಾರವೊಂದರಲ್ಲಿ 2011ರ ಜನಗಣತಿ ಆಧರಿಸಿ ಲೋಕಸಭೆ ಮತ್ತು ರಾಜ್ಯ ವಿಧಾನಸಭೆಗಳಲ್ಲಿ ಮಹಿಳೆಯರಿಗೆ ಶೇ.33 ರಷ್ಟು ಸ್ಥಾನಗಳನ್ನು ಕಾಯ್ದಿರಿಸುವ ಮಸೂದೆಗೆ ಕೇಂದ್ರ ಸಚಿವ ಸಂಪುಟ ಬುಧವಾರ ಅಂಗೀಕಾರ ನೀಡಿದೆ ಎಂದು ಮೂಲಗಳು ಹೇಳಿವೆ.

 ನವದೆಹಲಿ: ಮಹತ್ವದ ನಿರ್ಧಾರವೊಂದರಲ್ಲಿ 2011ರ ಜನಗಣತಿ ಆಧರಿಸಿ ಲೋಕಸಭೆ ಮತ್ತು ರಾಜ್ಯ ವಿಧಾನಸಭೆಗಳಲ್ಲಿ ಮಹಿಳೆಯರಿಗೆ ಶೇ.33 ರಷ್ಟು ಸ್ಥಾನಗಳನ್ನು ಕಾಯ್ದಿರಿಸುವ ಮಸೂದೆಗೆ ಕೇಂದ್ರ ಸಚಿವ ಸಂಪುಟ ಬುಧವಾರ ಅಂಗೀಕಾರ ನೀಡಿದೆ ಎಂದು ಮೂಲಗಳು ಹೇಳಿವೆ.

ಮಹಿಳಾ ಮೀಸಲು ಕುರಿತಾದ ವಿಶೇಷ ಸಂಸತ್ ಅಧಿವೇಶನ

ಏಪ್ರಿಲ್ 16 ರಂದು ಪ್ರಾರಂಭವಾಗುವ ಮಹಿಳಾ ಮೀಸಲು ಕುರಿತಾದ ವಿಶೇಷ ಸಂಸತ್ ಅಧಿವೇಶನದಲ್ಲಿ ಈ ಮಸೂದೆಯನ್ನು ಮಂಡಿಸಲಾಗುವುದು. ಈ ಮಸೂದೆಯಲ್ಲಿ ಸಾಂವಿಧಾನಿಕ ತಿದ್ದುಪಡಿ ಮಸೂದೆಯೂ ಸೇರಿದೆ. ಸಂಸತ್ತಿನ ಅಂಗೀಕಾರ ದೊರೆತ ಬಳಿಕ 2029ರ ಲೋಕಸಭಾ ಚುನಾವಣೆಯೊಂದಿಗೆ ಮೀಸಲನ್ನು ಜಾರಿಗೆ ತರಲಾಗುವುದು ಎಂದು ಅವು ಹೇಳಿವೆ.

ಹೊಸ ಜನಗಣತಿ ಆಧರಿಸಿ ಮೀಸಲು

ಈ ಮುಂಚೆ ಹೊಸ ಜನಗಣತಿ ಆಧರಿಸಿ ಮೀಸಲು ಹಾಗೂ ಕ್ಷೇತ್ರ ಮರುವಿಂಗಡಣೆ ಮಾಡುವ ಉದ್ದೇಶ ಇರಿಸಿಕೊಂಡು ಸಂಸತ್ತಿನಲ್ಲಿ ಮಸೂದೆ ಅಂಗೀಕರಿಸಲಾಗಿತ್ತು. ಆದರೆ ಗಣತಿ ವಿಳಂಬ ಆಗಿರುವ ಕಾರಣ 2011ರ ಜನಗಣತಿ ಆಧರಿಸಿಯೇ ಈ ಪ್ರಕ್ರಿಯೆ ಮುಗಿಸಲು ನಿರ್ಣಯಿಸಲಾಗಿದೆ. ಹೀಗಾಗಿ ಮೂಲ ಕಾಯ್ದೆಯಾದ ನಾರಿ ಶಕ್ತಿ ವಂದನ ಕಾಯ್ದೆಗೆ (ಮಹಿಳಾ ಮೀಸಲಾತಿ ಕಾಯ್ದೆ) ತಿದ್ದುಪಡಿ ತರುವ ಉದ್ದೇಶ ಸರ್ಕಾರದ್ದು. ಇದರ ಪ್ರಕಾರ ಲೋಕಸಭಾ ಸ್ಥಾನಗಳ ಸಂಖ್ಯೆ 543 ರಿಂದ 816 ಕ್ಕೆ ಹೆಚ್ಚಾಗುತ್ತದೆ. ಇದರಲ್ಲಿ ಶೇ.33ರಷ್ಟು ಸ್ಥಾನಗಳು (273 ಸೀಟುಗಳು) ಮಹಿಳೆಯರಿಗೆ ಮೀಸಲಾಗಿರುತ್ತವೆ.

- ಸದ್ಯ ನಡೆಯುತ್ತಿರುವ ಜನಗಣತಿ ಬದಲು 2011ರ ಗಣತಿ ಆಧರಿಸಿ ಮಹಿಳೆಯರಿಗೆ ಮೀಸಲು 

- ಏ.16ರಿಂದ ಆರಂಭವಾಗಲಿರುವ ಸಂಸತ್‌ ಅಧಿವೇಶನದಲ್ಲಿ ಮಸೂದೆ ಮಂಡನೆಗೆ ನಿರ್ಧಾರ 

- ಅಂಗೀಕಾರ ದೊರೆತರೆ 2029ರ ಲೋಕಸಭೆ ಚುನಾವಣೆಯಿಂದಲೇ ಮೀಸಲಾತಿ ಜಾರಿ 

- ಮಹಿಳಾ ಮೀಸಲಾತಿಗಾಗಿ ಸಂಸತ್‌ ಸ್ಥಾನ 543ರಿಂದ 816ಕ್ಕೆ ಏರಿಕೆ. 273 ಸೀಟು ಸ್ತ್ರೀಯರಿಗೆ

- ಶಾಸನಸಭೆಗಳಲ್ಲಿ ಮಹಿಳೆಯರಿಗೆ ಮೀಸಲಾತಿ ನೀಡಬೇಕೆಂಬ ಬೇಡಿಕೆ ಸಾಕಾರದತ್ತ