ದಿಲ್ಲಿ ವಿಧಾನಸಭಾ ಚುನಾವಣೆಯ ಸೋಲು : ಸಾಮ್ರಾಜ್ಯ ವಿಸ್ತರಿಸುವ ಕೇಜ್ರಿ ಕನಸಿಗೆ ಭಾರೀ ದೊಡ್ಡ ಹೊಡೆತ

| N/A | Published : Feb 09 2025, 01:17 AM IST / Updated: Feb 09 2025, 05:03 AM IST

ಸಾರಾಂಶ

ದಿಲ್ಲಿ ವಿಧಾನಸಭಾ ಚುನಾವಣೆಯ ಸೋಲು, ಪಕ್ಷವನ್ನು ಇನ್ನಷ್ಟು ರಾಜ್ಯಗಳಿಗೆ ವಿಸ್ತರಿಸುವ ಆಮ್‌ಆದ್ಮಿ ಪಕ್ಷ ಮತ್ತು ಅದರ ರಾಷ್ಟ್ರೀಯ ಸಂಚಾಲಕ ಅರವಿಂದ್‌ ಕೇಜ್ರಿವಾಲ್‌ ಅವರ ಕನಸಿಗೆ ದೊಡ್ಡ ಪೆಟ್ಟು ನೀಡಿದೆ.

ನವದೆಹಲಿ: ದಿಲ್ಲಿ ವಿಧಾನಸಭಾ ಚುನಾವಣೆಯ ಸೋಲು, ಪಕ್ಷವನ್ನು ಇನ್ನಷ್ಟು ರಾಜ್ಯಗಳಿಗೆ ವಿಸ್ತರಿಸುವ ಆಮ್‌ಆದ್ಮಿ ಪಕ್ಷ ಮತ್ತು ಅದರ ರಾಷ್ಟ್ರೀಯ ಸಂಚಾಲಕ ಅರವಿಂದ್‌ ಕೇಜ್ರಿವಾಲ್‌ ಅವರ ಕನಸಿಗೆ ದೊಡ್ಡ ಪೆಟ್ಟು ನೀಡಿದೆ.

2015ರಲ್ಲಿ ಮೊದಲ ಬಾರಿಗೆ ದೆಹಲಿಯಲ್ಲಿ ಅಧಿಕಾರಕ್ಕೆ ಬಂದಿದ್ದ ಆಪ್‌, ನಂತರ ಸಣ್ಣ ಸಣ್ಣ ರಾಜ್ಯಗಳ ಮೂಲಕವೇ ತನ್ನ ಸಾಮ್ರಾಜ್ಯ ವಿಸ್ತರಣೆಯ ಗುರಿ ರೂಪಿಸಿತ್ತು. ಹೀಗಾಗಿಯೇ ಗೋವಾ, ಗುಜರಾತ್‌, ಹಿಮಾಚಲ ಪ್ರದೇಶ, ಪಂಜಾಬ್‌ ರಾಜ್ಯ ವಿಧಾನಸಭಾ ಚುನಾವಣೆಯಲ್ಲಿ ಪ್ರಮುಖವಾಗಿ ಸ್ಪರ್ಧಿಸಿತ್ತು.

ಆದರೆ ಗುಜರಾತ್‌ನಲ್ಲಿ ಸ್ಪರ್ಧಿಸಿದ್ದ 180ರ ಪೈಕಿ ಒಂದು ಸ್ಥಾನವೂ ಗೆಲ್ಲಲಾಗಲಿಲ್ಲ, ಹಿಮಾಚಲದಲ್ಲಿ ಸ್ಪರ್ಧಿಸಿದ್ದ 67 ಸ್ಥಾನಗಳ ಪೈಕಿ ಒಂದರಲ್ಲೂ ಗೆದ್ದಿರಲಿಲ್ಲ. ಗೋವಾದಲ್ಲಿ ಸ್ಪರ್ಧಿಸಿದ್ದ 39 ಸ್ಥಾನಗಳ ಪೈಕಿ 2ರಲ್ಲಿ ಮಾತ್ರ ಗೆಲ್ಲುವಲ್ಲಿ ಸಫಲವಾಗಿತ್ತು. ಪಂಜಾಬ್‌ನಲ್ಲಿ ಮಾತ್ರ 117ರ ಪೈಕಿ 92 ಸ್ಥಾನ ಗೆದ್ದು ದಿಲ್ಲಿಯ ರೀತಿಯಲ್ಲೇ ಅಭೂತಪೂರ್ವ ಗೆಲುವು ಸಾಧಿಸಿತ್ತು. ಉಳಿದಂತೆ ಹಲವು ರಾಜ್ಯಗಳ ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧಿಸಿದ್ದರೂ ಎಲ್ಲೂ ಜಯ ಒಲಿದಿರಲಿಲ್ಲ.

ಆದರೆ ಇದೀಗ ಪಕ್ಷಕ್ಕೆ ಮುಕುಟಪ್ರಾಯವಾಗಿದ್ದ, ಪಕ್ಷಕ್ಕೆ ಮೊದಲ ಬಾರಿಗೆ ನೆಲೆ ಒದಗಿಸಿದ್ದ ದೆಹಲಿಯಲ್ಲೇ ಆಪ್‌ಗೆ ಭಾರೀ ಸೋಲಾಗಿರುವುದು, ಇತರೆ ರಾಜ್ಯಕ್ಕೆ ಪಕ್ಷ ವಿಸ್ತರಣೆಗೆ ಆಪ್‌ ಹೊಡೆತಕ್ಕೆ ದೊಡ್ಡ ಹೊಡೆತ ನೀಡಿದೆ ಎನ್ನಲಾಗಿದೆ.

ಕೇಜ್ರಿ, ಸಿಸೋಡಿಯಾ ಸೇರಿ ಘಟನಾಘಟಿಗಳಿಗೆ ಸೋಲು

ನವದೆಹಲಿ: ದೆಹಲಿಯ ವಿಧಾನಸಭಾ ಚುನಾವಣೆಯಲ್ಲಿ ಭಾರಿ ಬದಲಾವಣೆಗಳು ಆಗಿದ್ದು, ಪ್ರಭಾವಿಗಳು ಸೋತು ಖಾತೆ ಕಳೆದುಕೊಂಡಿದ್ದಾರೆ. ಮಾಜಿ ಮುಖ್ಯಮಂತ್ರಿ ಆಪ್‌ ಸಂಚಾಲಕ ಅರವಿಂದ್‌ ಕೇಜ್ರಿವಾಲ್‌, ಮಾಜಿ ಉಪಮುಖ್ಯಮಂತ್ರಿ ಮನೀಶ್‌ ಸಿಸೋಡಿಯಾ ಸ್ವಕ್ಷೇತ್ರದಲ್ಲಿಯೇ ಪರಾಜಿತರಾಗಿದ್ದಾರೆ. ಲೋಕಸಭೆಯಲ್ಲಿ ತಮ್ಮ ಹೇಳಿಕೆಯಿಂದ ವಿವಾದ ಸೃಷ್ಟಿಸಿದ್ದ ರಮೇಶ್‌ ಬಿಧೂರಿ ಅವರು ಕಾಲ್ಕಾಜಿ ವಿಧಾನಸಭಾ ಕ್ಷೇತ್ರದಿಂದ ಸ್ಪರ್ಧಿಸಿ ಸಿಎಂ ಆತಿಶಿ ವಿರುದ್ಧ ಸೋಲನುಭವಿಸಿದ್ದಾರೆ. ಅಕ್ರಮ ಹಣ ವರ್ಗಾವಣೆ ಅಡಿಯಲ್ಲಿ 2 ವರ್ಷ ಜೈಲು ಶಿಕ್ಷೆ ಅನುಭವಿಸಿದ್ದ ಸತ್ಯೇಂದ್ರ ಜೈನ್‌, ಸೌರಭ್‌ ಭಾರದ್ವಾಜ್‌ ಸಹ ಸೋತಿದ್ದಾರೆ.

 ಕಾಂಗ್ರೆಸ್‌ನ ಅಲ್ಕಾ ಲಾಂಬ, ವಿವಾದಿತ ಹೇಳಿಕೆಗಳಿಂದ ಸುದ್ದಿಯಲ್ಲಿದ್ದ ಸೋಮನಾಥ್‌ ಭಾರತಿ, ಮಾಜಿ ಸಿಎಂ ಶೀಲಾ ದೀಕ್ಷಿತ್‌ ಅವರ ಪುತ್ರ ಸಂದೀಪ್‌ ದೀಕ್ಷಿತ್‌, ದುರ್ಗೇಶ್‌ ಪಾಠಕ್‌ ಸಹ ಸೋಲು ಕಂಡಿದ್ದಾರೆ. ಸಿಎಂ ಆತಿಶಿ ಸಂಪುಟದಲ್ಲಿದ್ದ ಸಚಿವರ ಪೈಕಿ ಸೌರಭ್‌ ಭಾರದ್ವಾಜ್‌ ಹೊರತು ಮಿಕ್ಕ ಮೂವರು ಸಚಿವರು ಜಯಗಳಿಸಿದ್ದಾರೆ.